ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಹಿಂದ ಸಂಘಟನೆಗಳ ಬೆಂಬಲ ಮತ್ತಷ್ಟು ಗಟ್ಟಿಯಾಗುತ್ತಿದೆ. ಈಗ ಅಹಿಂದ ಮತ್ತು ದಲಿತ ಸಂಘಟನೆಗಳು ಸಿದ್ದರಾಮಯ್ಯ 5 ವರ್ಷಗಳ ಕಾಲ ಸಿಎಂ ಆಗಿರಬೇಕು ಎಂಬ ಬೇಡಿಕೆಯನ್ನು ಮುಂದಿರಿಸಿ ಪತ್ರ ಚಳವಳಿ ಆರಂಭಿಸಿವೆ.
ಸಂಘಟನೆಗಳು ಕಾಂಗ್ರೆಸ್ ಹೈಕಮಾಂಡ್ ಹಾಗೂ ರಾಹುಲ್ ಗಾಂಧಿಗೆ ಪತ್ರ ಬರೆದು, ರಾಜ್ಯದ ಪವರ್ ಶೇರಿಂಗ್ ಕುರಿತು ನಡೆಯುತ್ತಿರುವ ಗೊಂದಲಕ್ಕೆ ತಕ್ಷಣ ತೆರೆ ಎಳೆದು, ಸಿದ್ದರಾಮಯ್ಯ ಅವರೇ ಪೂರ್ಣ ಅವಧಿಗೆ ಮುಖ್ಯಮಂತ್ರಿಯಾಗಬೇಕು ಎಂದು ಒತ್ತಾಯಿಸುತ್ತಿವೆ.
ಅಹಿಂದ ಮುಖಂಡರು ಎಚ್ಚರಿಕೆ ನೀಡಿದ್ದು, ಸಿದ್ದರಾಮಯ್ಯರನ್ನು ಮಧ್ಯದಲ್ಲಿ ಬದಲಿಸಿದರೆ, ಕಾಂಗ್ರೆಸ್ ಪರ ಅಹಿಂದ ವರ್ಗದ ಬೆಂಬಲ ಕುಂದುವುದು ಖಚಿತ. ಡಿಕೆ ಶಿವಕುಮಾರ್ ಅವರು 2028ರಲ್ಲಿ ಮುಖ್ಯಮಂತ್ರಿಯಾಗಬಹುದು, ಆದರೆ ಈಗಿನ ಅವಧಿ ಸಿದ್ದರಾಮಯ್ಯರದ್ದೇ ಆಗಬೇಕು ಎಂದು ಹೇಳಿದ್ದಾರೆ.
ಅಹಿಂದ ನಾಯಕರು ಇನ್ನೂ ಸ್ಪಷ್ಟವಾಗಿ ಹೇಳಿದ್ದು, ಇಂದಿರಾ ಗಾಂಧಿಯ ಕಾಲದಿಂದ ಅಹಿಂದ ಸಮುದಾಯ ಕಾಂಗ್ರೆಸ್ ಜೊತೆ ಇದೆ. ಅದೇ ಬಾಂಧವ್ಯ ಮುಂದುವರಿಯಬೇಕಾದರೆ ಸಿದ್ದರಾಮಯ್ಯರು ಸಂಪೂರ್ಣ 5 ವರ್ಷ ಸಿಎಂ ಆಗಿರಬೇಕು. ಹೈಕಮಾಂಡ್ ಈ ನಿರ್ಧಾರ ವಿರುದ್ಧ ಹೋದರೆ, ಮುಂಬರುವ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಅದರ ಪರಿಣಾಮವನ್ನು ತೋರಿಸುತ್ತೇವೆ ಎಂದು ಎಚ್ಚರಿಸಿದ್ದಾರೆ.
ಸಿದ್ದರಾಮಯ್ಯ ಅಹಿಂದ ನಾಯಕ ಎಂದು ಗುರುತಿಸಿಕೊಂಡಿದ್ದು, ಅಹಿಂದ ಚಳವಳಿಗಳ ಮೂಲಕವೇ ಮುನ್ನೆಲೆಗೆ ಬಂದಿದ್ದಾರೆ. ಹೀಗಾಗಿ ಅಹಿಂದ ನಾಯಕರು, ಸಂಘಟನೆಗಳು, ಸಿದ್ದರಾಮಯ್ಯ ಜೊತೆ ನಿಂತಿದ್ದಾರೆ.

