ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಲಾಗಿದೆ ಎಂದು ನೀಡಿದ್ದ ದೂರಿನ ಪ್ರಕರಣ ಕ್ಲೈಮ್ಯಾಕ್ಸ್‌ಗೆ ಬಂದು ನಿಂತಿದೆ. ದೇಶಾದ್ಯಂತ ಸಂಚಲನ ಮೂಡಿಸಿದ ಈ ಪ್ರಕರಣದ ಆರೋಪಿಗಳು ಈಗ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದ ಧರ್ಮಸ್ಥಳ ಪೊಲೀಸ್ ಠಾಣೆಯ ಎಫ್‌ಐಆರ್ ಸಂಖ್ಯೆ 39/2025 ಅನ್ನು ರದ್ದುಪಡಿಸಬೇಕು ಎಂದು ಗಿರೀಶ್ ಮಟ್ಟಣ್ಣನವರ್, ಮಹೇಶ್ ಶೆಟ್ಟಿ ತಿಮರೋಡಿ, ಟಿ. ಜಯಂತ್ ಮತ್ತು ವಿಠಲಗೌಡ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರ ಮುಂದೆ ಇಂದು ನಡೆಯುವ ಸಾಧ್ಯತೆ ಇದೆ.
ಧರ್ಮಸ್ಥಳ ಪ್ರಕರಣ ರದ್ದು ಕೋರಿ ಅರ್ಜಿ ಸಲ್ಲಿಸಿರುವ ಆರೋಪಿಗಳು, SIT ನಡೆಸಿದ ತನಿಖೆಯ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅರ್ಜಿದಾರರ ಪ್ರಕಾರ, ನೋಟಿಸ್‌ಗಳನ್ನು ಖುದ್ದಾಗಿ ನೀಡದೇ ವಾಟ್ಸ್‌ಆ್ಯಪ್ ಮತ್ತು ಇ-ಮೇಲ್ ಮೂಲಕ ಕಳುಹಿಸಲಾಗಿದೆ. ಈಗಾಗಲೇ ಸುಮಾರು 100 ಗಂಟೆಗಳ ವಿಚಾರಣೆ ನಡೆದಿದ್ದು, ತಮ್ಮ ವಿರುದ್ಧ ಯಾವುದೇ ಆರೋಪಗಳು 164 ಹೇಳಿಕೆಗಳಲ್ಲಿ ಇಲ್ಲ ಎಂದು ಅವರು ತಿಳಿಸಿದ್ದಾರೆ. ಆದರೆ ಮತ್ತೆ ನೋಟಿಸ್ ನೀಡಿರುವುದರಿಂದ ಬಂಧನದ ಭೀತಿ ಇದೆ ಎಂದು ಹೇಳಿ ಪ್ರಕರಣವನ್ನೇ ರದ್ದುಪಡಿಸುವಂತೆ ಕೋರಿ ನ್ಯಾಯಾಲಯಕ್ಕೆ ಮೊರೆ ಹೋಗಿದ್ದಾರೆ.
ಚಿನ್ನಯ್ಯನ ದೂರಿನ ಬಳಿಕ, ಆಗಸ್ಟ್ 23ರಂದು ಎಸ್‌ಐಟಿ ಹೊಸ ಕಲಂಗಳನ್ನು ಸೇರಿಸಿತ್ತು. ಅವು ಬಿಎನ್‌ಎಸ್ ಸೆಕ್ಷನ್ 336 ನಕಲಿ ದಾಖಲೆ, ಎಲೆಕ್ಟ್ರಾನಿಕ್ ದಾಖಲೆ ವಂಚನೆ ಉದ್ದೇಶಕ್ಕೆ ಬಳಕೆ, 211(ಎ) ಉದ್ದೇಶಪೂರ್ವಕ ಮಾಹಿತಿ ನೀಡಲು ವಿಫಲ, 230 ಸುಳ್ಳು ಸಾಕ್ಷ್ಯ ಸೃಷ್ಟಿ, 229 ಉದ್ದೇಶಪೂರ್ವಕ ಸುಳ್ಳು ಸಾಕ್ಷ್ಯ ಸೃಷ್ಟಿ, 227 ಉದ್ದೇಶಪೂರ್ವಕ ಸುಳ್ಳು ಹೇಳಿಕೆ, 248 ಸುಳ್ಳು ಕ್ರಿಮಿನಲ್ ಮೊಕದ್ದಮೆ ಸೇರ್ಪಡೆ ಮಾಡಿದ ಕಲಂಗಳಾಗಿವೆ.
ಮಾಸ್ಕ್‌ಮ್ಯಾನ್ ಚಿನ್ನಯ್ಯನ ದೂರಿನ ಆಧಾರದ ಮೇಲೆ ರಾಜ್ಯ ಸರ್ಕಾರ ತನಿಖೆಗೆ ವಿಶೇಷ ತಂಡ ರಚಿಸಿತ್ತು. ಆದರೆ ಮೂಲ ಎಫ್‌ಐಆರ್ ರದ್ದಾದರೆ ಎಸ್‌ಐಟಿಯ ಅಸ್ತಿತ್ವವೇ ಕೊನೆಗಾಣಬಹುದು. ಪ್ರಾರಂಭದಲ್ಲಿ ತನಿಖೆಯನ್ನು ಸ್ವಾಗತಿಸಿದ್ದ ಅರ್ಜಿದಾರರು ಈಗ ಅದನ್ನೇ ರದ್ದುಪಡಿಸಲು ಯತ್ನಿಸುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

