ಪಿಂಕ್ ಲೈನ್ ಮೆಟ್ರೋ ಆರಂಭ? BMRCL ಅಧಿಕೃತ ಮಾಹಿತಿಯೇನು?

ಬೆಂಗಳೂರು ನಗರದ ಸಂಚಾರಕ್ಕೆ ಹೊಸ ಉಸಿರು ತುಂಬಿದ ಮೆಟ್ರೋ ಯೋಜನೆಗೆ ಮತ್ತೊಂದು ಪ್ರಮುಖ ಅಧ್ಯಾಯ ಶೀಘ್ರದಲ್ಲೇ ಸೇರ್ಪಡೆಯಾಗಲಿದೆ. ಕೆಲ ತಿಂಗಳ ಹಿಂದೆ ಆರಂಭವಾದ ಯೆಲ್ಲೋ ಲೈನ್ ನಂತರ ಇದೀಗ ಪಿಂಕ್ ಲೈನ್ ಬಗ್ಗೆ ಚರ್ಚೆ ಜೋರಾಗಿದೆ. ಡಿಸಿಎಂ ಡಿಕೆ ಶಿವಕುಮಾರ್ ಅವರು ಎಕ್ಸ್ ಮೂಲಕ ನೀಡಿದ್ದ ಸೂಚನೆ ಬಳಿಕ, ಜನರಲ್ಲಿ 2026ರ ಮೇ ವೇಳೆಗೆ ಪಿಂಕ್ ಲೈನ್ ಸಂಪೂರ್ಣವಾಗಿ ಕಾರ್ಯಾರಂಭವಾಗುತ್ತದೆಯೇ ಎಂಬ ಕುತೂಹಲ ಮೂಡಿತ್ತು.

ಆದರೆ ಬಿಎಂಆರ್‌ಸಿಎಲ್ ಈ ಬಗ್ಗೆ ಸ್ಪಷ್ಟನೆ ನೀಡಿದೆ. ಪಿಂಕ್ ಲೈನ್ ಸಂಪೂರ್ಣವಾಗಿ 2026ರ ಮೇ ವೇಳೆಗೆ ಚಾಲನೆಗೊಳ್ಳುವುದಿಲ್ಲ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ. ಪಿಂಕ್ ಲೈನ್ ಎರಡು ಹಂತಗಳಲ್ಲಿ ಉದ್ಘಾಟನೆಯಾಗಲಿದೆ. ಮೊದಲ ಹಂತದಲ್ಲಿ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗೆ 7.5 ಕಿಮೀ ಉದ್ದದ ಎಲಿವೇಟೆಡ್ ಮಾರ್ಗವನ್ನು 2026ರ ಮೇ ವೇಳೆಗೆ ಪ್ರಯಾಣಿಕರಿಗೆ ತೆರೆಯುವ ಯೋಜನೆ ಇದೆ.

ಇನ್ನೊಂದು ಹಂತವಾದ ಡೈರಿ ಸರ್ಕಲ್‌ನಿಂದ ನಾಗವಾರದವರೆಗೆ 13.76 ಕಿಮೀ ಉದ್ದದ ಅಡರ್‌ಗ್ರೌಂಡ್ ಮಾರ್ಗವು 2026ರ ಡಿಸೆಂಬರ್ ವೇಳೆಗೆ ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ. ಈ ವಿಭಾಗದಲ್ಲಿ 12 ನಿಲ್ದಾಣಗಳಿದ್ದು, ಎಂಜಿ ರಸ್ತೆಯಲ್ಲಿ ನಗರದ ನಾಲ್ಕನೇ ಇಂಟರ್‌ಚೇಂಜ್ ನಿಲ್ದಾಣವೂ ನಿರ್ಮಾಣವಾಗಲಿದೆ.

ಪಿಂಕ್ ಲೈನ್‌ನ ಎಲಿವೇಟೆಡ್ ವಿಭಾಗದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಇದೀಗ ಸಣ್ಣಪುಟ್ಟ ಕೆಲಸಗಳು ಮಾತ್ರ ಬಾಕಿ ಇವೆ. ಬನ್ನೇರುಘಟ್ಟ ರಸ್ತೆ ಸಾಗುವ ಈ ವಿಭಾಗದಲ್ಲಿ ಆರು ನಿಲ್ದಾಣಗಳಿದ್ದು ತಾವರೆಕೆರೆ, ಜಯದೇವ ಆಸ್ಪತ್ರೆ, ಜೆಪಿ ನಗರ 4ನೇ ಹಂತ, ಐಐಎಂಬಿ, ಹುಳಿಮಾವು ಮತ್ತು ಕಾಳೇನ ಅಗ್ರಹಾರ ಒಳಗೊಂಡಿವೆ. ಜಯದೇವ ಆಸ್ಪತ್ರೆ ನಿಲ್ದಾಣವು ದಕ್ಷಿಣ ಭಾರತದ ಅತಿ ಎತ್ತರದ ಮೆಟ್ರೋ ನಿಲ್ದಾಣವಾಗಲಿದ್ದು, ಇಂಟರ್‌ಚೇಂಜ್ ಪಾಯಿಂಟ್ ಆಗಿ ಕೆಲಸ ಮಾಡಲಿದೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

About The Author