ದಕ್ಷಿಣ ಭಾರತದಲ್ಲಿ ಪ್ರಾದೇಶಿಕ ಪಕ್ಷಗಳ ಜಿದ್ದಾಜಿದ್ದಿನ ರಾಜಕೀಯದಲ್ಲಿ, ರಾಷ್ಟ್ರೀಯ ಪಕ್ಷಗಳು ನೆಲೆ ಕಂಡುಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ. ನ್ಯಾಷನಲ್ ಪಾರ್ಟಿಗಳು ಅಲ್ಲಿ ಸೀಟು ಗೆಲ್ಲಬೇಕು ಅಂದ್ರೆ, ಪ್ರಾದೇಶಿಕ ಪಕ್ಷಗಳ ಬೆಂಬಲ ಬೇಕೇ ಬೇಕು. ಅದು ಬಿಜೆಪಿಯಾಗಲಿ, ಕಾಂಗ್ರೆಸ್ ಆಗಲಿ. ಅಷ್ಟರಮಟ್ಟಿಗೆ ಪ್ರಾದೇಶಿಕ ಪಾರ್ಟಿಗಳ ಹಿಡಿತದಲ್ಲಿರುವ, ಭಾರತದ ಕೆಲವೇ ಕೆಲವು ರಾಜ್ಯಗಳಲ್ಲಿ ತಮಿಳುನಾಡು ಒಂದು.
ಡಿಎಂಕೆ ಒಕ್ಕೂಟದ ನೇತೃತ್ವವನ್ನು ಕರುಣಾನಿಧಿ ವಹಿಸಿಕೊಂಡಿದ್ದ ಸಮಯದಿಂದ ಇದುವರೆಗೂ, ಇಂಡಿಯಾ ಅಥವಾ ಯುಪಿಎ ಮೈತ್ರಿಕೂಟದ ಜೊತೆ ಗುರುತಿಸಿಕೊಂಡು ಬಂದಿದೆ. ಇನ್ನೊಂದು ಕಡೆ, ದಿವಂಗತ ಮಾಜಿ ಸಿಎಂ ಜೆ.ಜಯಲಲಿತಾ ಅವರ ಹಿಡಿತದಲ್ಲಿದ್ದ aiadmk ಪಾರ್ಟಿಯ ನಿಯತ್ತು, ಒಂದೇ ಪಾರ್ಟಿಯ ಮೇಲೆ ಇರಲೇ ಇಲ್ಲ.
ಅಟಲ್ ಬಿಹಾರಿ ವಾಜಪೇಯಿ ಸರ್ಕಾರವನ್ನು ಉರುಳಿಸಲು ಜಯಲಲಿತಾ, ಹಿಂದೆ ಮುಂದೆ ನೋಡಿರಲಿಲ್ಲ. ಅದಾದ ನಂತರದ ಪಶ್ಚಾತ್ತಾಪದ ಮಾತುಗಳನ್ನಾಡಿದ್ರು. ಬದಲಾದ ರಾಜಕೀಯದಲ್ಲಿ ಮತ್ತು ಜಯಲಲಿತಾ ನಿಧನದ ನಂತರ, aiadmk ಪಾರ್ಟಿಯನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳುವಲ್ಲಿ ಬಿಜೆಪಿ ಬಹುತೇಕ ಯಶಸ್ವಿಯಾಗುತ್ತಾ ಬರುತ್ತಿದೆ. ಇಂತಹ ಸಮಯದಲ್ಲಿ, ತಮಿಳುನಾಡಿನಲ್ಲಿ, ಬಿಜೆಪಿಯ ನೆಲೆಯನ್ನು ಭದ್ರಗೊಳಿಸುವ ಜವಾಬ್ದಾರಿ, ಜನಪ್ರಿಯ ಯುವ ನಾಯಕ ಕೆ.ಅಣ್ಣಾಮಲೈ ಅವರ ಹೆಗಲಿಗೆ ಬಿತ್ತು.
2011ರ ಬ್ಯಾಚಿನ ಐಪಿಎಸ್ ಅಧಿಕಾರಿ ಕೆ.ಅಣ್ಣಾಮಲೈ, ತಮ್ಮ ಪೊಲೀಸ್ ವೃತ್ತಿಜೀವನವನ್ನು ಕಳೆದದ್ದು ಕರ್ನಾಟಕದಲ್ಲಿ. ಉಡುಪಿ, ಚಿಕ್ಕಮಗಳೂರು, ಬೆಂಗಳೂರು ದಕ್ಷಿಣದ, ಎಸ್ಪಿ/ಡಿಸಿಪಿಯಾಗಿ ಕೆಲಸ ನಿರ್ವಹಿಸಿದ್ದಾರೆ. ಸಿಂಗಂ ಎಂದೇ ಖ್ಯಾತಿ ಪಡೆದವರು. ಪೊಲೀಸ್ ವೃತ್ತಿ ಜೀವನದಲ್ಲಿ ಉನ್ನತ ಸ್ಥಾನಮಾನದಲ್ಲಿದ್ದ ಅಣ್ಣಾಮಲೈ, ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಬೇಕೆನ್ನುವ ನಿರ್ಧಾರಕ್ಕೆ ಬಂದಿದ್ರು. ಅವರ ಮುಂದಿನ ರಾಜಕೀಯ ಜೀವನ ಅತ್ಯಂತ ಸ್ಪಷ್ಟವಾಗಿತ್ತು. ಹಾಗಾಗಿ, ಅವರನ್ನು ಐಪಿಎಸ್ ಹುದ್ದೆಯಲ್ಲಿ ಉಳಿಸುವ ಯಾವುದೇ ಲಾಬಿ, ಒತ್ತಡ ನಡೆದಿರಲಿಲ್ಲ.
ಕರೂರ್ ನಿವಾಸಿಯಾದ ಅಣ್ಣಾಮಲೈ 2019ರಲ್ಲಿ ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿದ್ದರು. ತಮ್ಮ ಹಿರಿಯ ಸಹದ್ಯೋಗಿಯಾಗಿದ್ದ ಮಧುಕರ್ ಶೆಟ್ಟಿ ಅಕಾಲಿಕ ನಿಧನ, ನನ್ನನ್ನು ಬಹಳವಾಗಿ ಕಾಡುತ್ತಿದೆ. ಮಾನಸ ಸರೋವರದ ಭಾಗದಲ್ಲಿ ಸ್ವಲ್ಪ ದಿನ ಕಳೆಯುತ್ತೇನೆ. ಆ ಮೂಲಕ ನನ್ನ ಜೀವನದ ಮುಂದಿನ ಆದ್ಯತೆ /ಜೀವನವನ್ನು, ಮತ್ತೊಮ್ಮೆ ಅಧ್ಯಯನ ನಡೆಸಬೇಕಿದೆ ಎನ್ನುವ ಕಾರಣ ನೀಡಿದ್ರು. ಅಷ್ಟೊತ್ತಿಗೆ ಬಿಜೆಪಿಗೆ ಸೇರ್ಪಡೆಗೊಳ್ಳುವುದು ಬಹುತೇಕ ಖಚಿತವಾಗಿತ್ತು.
ತಮಿಳುನಾಡಿನಲ್ಲಿ ನೆಲೆಯೇ ಇಲ್ಲದ ಬಿಜೆಪಿ ಜವಾಬ್ದಾರಿಯನ್ನು, ಅಣ್ಣಾಮಲೈಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡುತ್ತಾರೆ. ಬಿಜೆಪಿಯ ವೋಟ್ ಬ್ಯಾಂಕನ್ನು ದ್ರಾವಿಡ ನೆಲದಲ್ಲಿ ಹೆಚ್ಚಿಸುವುದು ದೊಡ್ಡ ಟಾಸ್ಕ್ ಎನ್ನುವುದು ಗೊತ್ತಿದ್ದರೂ, ಅಣ್ಣಾಮಲೈ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತಾರೆ. ಅಲ್ಲಿಂದ, ಪಕ್ಷಕ್ಕಾಗಿ ಸುರಿಸಿದ ಬೆವರು ಅಷ್ಟಿಷ್ಟಲ್ಲ ಎನ್ನುವುದನ್ನು, ವಿರೋಧಿ ಡಿಎಂಕೆ ಬಣದ ನಾಯಕರೂ ಆಫ್ ದಿ ರೆಕಾರ್ಡ್ ಹೊಗಳಿದ್ದುಂಟು. ಆದರೆ, ಎಲ್ಲೋ ಇದು ಇತ್ತೀಚಿನ ದಿನಗಳಲ್ಲಿ ಅವರ ಹುಮ್ಮಸ್ಸಿಗೆ ತಣ್ಣೀರು ಎರೆಚುವ ಕೆಲಸವು ವ್ಯವಸ್ಥಿತವಾಗಿ ನಡೆಯುತ್ತಿದೆ ಎನ್ನುವುದು ಅಷ್ಟೇ ಸತ್ಯ.
ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಮೇಲೆ ಕಾಲಿಗೆ ಚಕ್ರ ಕಟ್ಟಿಕೊಂಡು, ತಮಿಳುನಾಡಿನ ಎಲ್ಲಾ 234 ಅಸೆಂಬ್ಲಿ ಕ್ಷೇತ್ರಗಳಲ್ಲಿ ಪ್ರಯಾಣಿಸಿದ್ರು. ಪಕ್ಷದ ಬೇಸ್ ಅನ್ನು ಬಲಪಡಿಸುವ ಕೆಲಸವನ್ನು ಮಾಡಿದರು. 2021ರ ವಿಧಾನಸಭಾ ಚುನಾವಣೆಯಲ್ಲಿ ಖುದ್ದು ಸ್ಪರ್ಧಿಸಿದರೂ, ಡಿಎಂಕೆ ಅಭ್ಯರ್ಥಿ ವಿರುದ್ದ ಸೋಲು ಅನುಭವಿಸಿದರು. ಆ ಚುನಾವಣೆಯಲ್ಲಿ, ಎನ್‌ಡಿಎ ಮೈತ್ರಿಕೂಟದ ಭಾಗವಾಗಿ aiadmk ಜೊತೆ ಸೇರಿಕೊಂಡು, ಬಿಜೆಪಿ ಇಪ್ಪತ್ತು ಕ್ಷೇತ್ರದಲ್ಲಿ ಸ್ಪರ್ಧಿಸಿತ್ತು. ಅಣ್ಣಾಮಲೈ, ಚುನಾವಣೆಯಲ್ಲಿ ಸೋತಿದ್ದರೂ, ಸಕ್ರಿಯ ರಾಜಕಾರಣಕ್ಕೆ ಇಳಿದ ಒಂದೇ ವರ್ಷದಲ್ಲಿ ಪಡೆದ ಮತ ಎಲ್ಲರ ಹುಬ್ಬೇರಿಸುವಂತೆ ಮಾಡಿತ್ತು.
aiadmk ನಾಯಕರನ್ನೇ ಪಕ್ಕಕ್ಕೆ ಸರಿಸಿ ಮುನ್ನಲೆಗೆ ಬರಲಾರಂಭಿಸಿದರು. ಸರಿಯಾದ ಪ್ರೋತ್ಸಾಹವೂ ಸಿಕ್ಕಿತು. ಹೆಚ್ಚಾಗಿ ಪ್ರಧಾನಿ ನರೇಂದ್ರ ಮೋದಿಗೆ, ಅಣ್ಣಾಮಲೈ ಹತ್ತಿರವಾಗಲು ಆರಂಭಿಸಿದರು. 2019ರ ಚುನಾವಣೆಗೆ ಹೋಲಿಸಿದಾಗ, ಬಿಜೆಪಿಯ ಮತಪ್ರಮಾಣ ಏರಿಕೆಯಾಗಿತ್ತು. ಪ್ರಮುಖ ಕಾರ, ಅಣ್ಣಾಮಲೈ ಅವರ ಅವಿರತ ಪ್ರಯತ್ನ ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ. ಇದೇ ಆಧಾರದಲ್ಲಿ 2026ರ ಚುನಾವಣೆಯಲ್ಲಿ, ಡಿಎಂಕೆ ಮೈತ್ರಿಕೂಟದಿಂದ ಅಧಿಕಾರ ತಪ್ಪುತ್ತಾ ಎನ್ನುವ ಮಾತುಗಳು ಶುರುವಾಗಿವೆ.
ಎನ್ ಮಣ್ ಎನ್ ಮಕ್ಕಳ್ ಎನ್ನುವ ಯಾತ್ರೆಯನ್ನು ಅಣ್ಣಾಮಲೈ ಶುರು ಮಾಡಿದ್ರು. ಜುಲೈ 8, 2023ರಲ್ಲಿ ಗೃಹ ಸಚಿವ ಅಮಿತ್ ಶಾ ಚಾಲನೆ ನೀಡಿದ್ರು. ಯಾತ್ರೆಗೆ ಸಿಗುತ್ತಿದ್ದಂತಹ ಜನ ಬೆಂಬಲ ನೋಡಿ ದ್ರಾವಿಡ ಪಾರ್ಟಿಗಳೂ ಹೌಹಾರಿದ್ದವು. ತಿರುಪುರ್ ಜಿಲ್ಲೆಯ ಪಲ್ಲಾದಂನಲ್ಲಿ 2024ರ ಫೆಬ್ರವರಿಯಲ್ಲಿ ಯಾತ್ರೆ ಮುಕ್ತಾಯಗೊಂಡಿತು. ಸಮಾರೋಪಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದರು. ಕಣ್ಣು ಹಾಯಿಸಿದಲೆಲ್ಲಾ ಜನಸಾಗರ. ತುಂಬಿದ ಸಭೆಯಲ್ಲಿ ಅಣ್ಣಾಮಲೈ ಅವರನ್ನು ಪ್ರಧಾನಿ ಹಾಡಿಹೊಗಳಿದ್ದರು.
ಇದಾದ ಕೆಲವೇ ದಿನಗಳಲ್ಲೇ ಸಾರ್ವತ್ರಿಕ ಚುನಾವಣೆಗೆ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಘೋಷಿಸಿತು. ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಎಡಪ್ಪಾಡಿ ಪಳನಿಸ್ವಾಮಿ ಒಪ್ಪದೇ, ಪ್ರತ್ಯೇಕವಾಗಿ ಸ್ಪರ್ಧಿಸುವ ನಿರ್ಧಾರಕ್ಕೆ ಬಂದರು. ಇದು, ಡಿಎಂಕೆ ಮೈತ್ರಿಕೂಟಕ್ಕೆ ಭರ್ಜರಿ ವರವಾಗಿ ಪರಿಣಮಿಸಿತು.
ಮತ್ತೆ ಎನ್‌ಡಿಎ ಮೈತ್ರಿಕೂಟ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ, ಬಿಜೆಪಿ -ಎಐಎಡಿಎಂಕೆ ಮೈತ್ರಿ ಸಂಬಂಧ ಮಾತುಕತೆ ಆರಂಭವಾಯಿತು. ಮೈತ್ರಿಗೆ ಎಡಪ್ಪಾಡಿ ಪಳನಿಸ್ವಾಮಿ ಒಪ್ಪಿಕೊಳ್ಳುವ ಮುನ್ನ, ಕಂಡೀಷನ್ ಹಾಕಿದ್ರು. ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾಗಿ ಅಣ್ಣಾಮಲೈ ಮುಂದುವರಿಯಬಾರದು ಎನ್ನುವ ಬೇಡಿಕೆ ಇಟ್ಟಿದ್ರು. ಇದಕ್ಕೆ ಅಮಿತ್ ಶಾ ಮತ್ತು ಮೋದಿ ಆರಂಭದಲ್ಲಿ ಒಪ್ಪಿಕೊಳ್ಳದಿದ್ದರೂ, ಮುಂದಿನ ವರ್ಷ ಚುನಾವಣೆ ನಡೆಯುತ್ತಿರುವ ಹಿನ್ನೆಲೆ ಇದಕ್ಕೆ ಒಪ್ಪಿಕೊಳ್ಳಬೇಕಾಯಿತು. ಅಮಿತ್ ಶಾ ಚೆನ್ನೈಗೆ ಬಂದು, ಮೈತ್ರಿಯನ್ನು ಘೋಷಿಸಿ ಹೋದರು.
ಪಕ್ಷದ ನಿರ್ಧಾರದಿಂದಾಗಿ ಅಣ್ಣಾಮಲೈ, ರಾಜ್ಯಾಧ್ಯಕ್ಷ ಹುದ್ದೆಯಿಂದ ಕೆಳಗಿಳಿಯಬೇಕಾಯ್ತು. ನೈನಾರ್ ನಾಗೇಂದ್ರನ್ ರಾಜ್ಯಾಧ್ಯಕ್ಷರಾದರು. ಆದರೆ, ಬಿಜೆಪಿ ವರಿಷ್ಠರ ಈ ನಿರ್ಧಾರ, ಕಾರ್ಯಕರ್ತರ ಮಟ್ಟದಲ್ಲಿ ವ್ಯಾಪಕ ಅಸಮಾಧಾನಕ್ಕೆ ಕಾರಣವಾಯಿತು. ಅಂದಿನಿಂದ, ಎಐಎಡಿಎಂಕೆ ನಾಯಕರೂ, ಅಣ್ಣಾಮಲೈರನ್ನು ಲೇವಡಿ ಮಾಡಲು ಆರಂಭಿಸಿದ್ರು. ಅಮಿತ್ ಶಾ ಸೂಚನೆ ಮೇರೆಗೆ ಸುಮ್ಮನಿದ್ದೇನೆ. ಇಲ್ಲದಿದ್ರೆ ಇವರ ಬಾಯಿ ಮುಚ್ಚಿಸಲು ನನಗೆ 2 ನಿಮಿಷ ಸಾಕು, ಎನ್ನುವ ಮಾತನ್ನು ಅಣ್ಣಾಮಲೈ ಹೇಳಿದ್ರು.
ಇನ್ನು, ಕಳೆದ ವಾರ ಅಣ್ಣಾಮಲೈ ಆಡಿರುವ ಮಾತು, ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಪಕ್ಷದೊಳಗಿನ ಭಿನ್ನಾಭಿಪ್ರಾಯದ ಬಗ್ಗೆ ಮೌನ ಮುರಿದಿದ್ದಾರೆ. ಹೊಸ ಪಾರ್ಟಿ ಕಟ್ಟುವ ಸುದ್ದಿ ಊಹಾಪೋಹ ಎಂದಿದ್ದರೂ, ಯಾರನ್ನೂ ಒತ್ತಾಯಪೂರ್ವಕವಾಗಿ ಹೆಗಲ ಮೇಲೆ ಗನ್ ಇಟ್ಟುಕೊಂಡು ಉಳಿಸಿಕೊಳ್ಳಲು ಸಾಧ್ಯವಿಲ್ಲವೆಂಬ ಮಾತನ್ನು ಹೇಳಿದ್ದಾರೆ. ಸಮಯ ಬಂದಾಗ ಎಲ್ಲವನ್ನೂ ಮಾತನಾಡುತ್ತೇನೆ ಎಂದು ಅಣ್ಣಾಮಲೈ ಹೇಳಿದ್ದಾರೆ. ಬಿಜೆಪಿಯಿಂದ ಹೊರಬರಲು ಸಿದ್ದತೆಯನ್ನು ಅಣ್ಣಾಮಲೈ ಮಾಡಿಕೊಳ್ಳುತ್ತಿದ್ದಾರಾ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

