ಕೆಎಂಎಫ್ ನಂದಿನಿ ತುಪ್ಪದ ಬೆಲೆ ದಿಢೀರ್ ಏರಿಕೆಯಾಗಿದ್ದು, 1 ಕೆ.ಜಿ.ಗೆ 90 ರೂಪಾಯಿ ಹೆಚ್ಚಿಸಲಾಗಿದೆ. ಈ ಬಗ್ಗೆ ಮಾತನಾಡಿದ ಬಮೂಲ್ ಅಧ್ಯಕ್ಷ ಡಿ.ಕೆ ಸುರೇಶ್ ಅವರು ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ದೇಶದಾದ್ಯಂತ ಬೆಣ್ಣೆ ಕೊರತೆ ಇದೆ. ಆದ್ದರಿಂದ ತುಪ್ಪ ಮತ್ತು ಬೆಣ್ಣೆಗೆ ಬೇಡಿಕೆ ಹೆಚ್ಚಾಗಿದೆ. ರಾಜ್ಯದಲ್ಲಿ ಬೆಣ್ಣೆ ಮತ್ತು ತುಪ್ಪಕ್ಕೆ ಕಡಿಮೆ ಬೆಲೆ ಇತ್ತು. ಈಗ ಬೆಲೆ ಏರಿಕೆ ಮಾಡಿದ ಬಳಿಕವೂ ನಮ್ಮದೇ ಕಡಿಮೆ ಬೆಲೆ ಇದೆ ಎಂದಿದ್ದಾರೆ.
ತುಪ್ಪದ ಗುಣಮಟ್ಟದಲ್ಲಿ ನಾವು ಮುಂಚೂಣಿಯಲ್ಲಿ ಇದ್ದೇವೆ. ಶೇಕಡಾ 100ರಷ್ಟು ಶುದ್ಧ ತುಪ್ಪವನ್ನ ನಾವು ನೀಡಿದ್ದೇವೆ. ಆದ್ದರಿಂದ ಎಲ್ಲಾ ಒಕ್ಕೂಟಗಳಿಂದ ಮನವಿ ಮಾಡಲಾಗಿತ್ತು. ಬೇರೆ ಬೇರೆ ಬ್ರ್ಯಾಂಡ್‌ನವರು ನಮಗಿಂತ ಹೆಚ್ಚು ಅಂದರೆ ಸುಮಾರು 1000-1200 ರೂಪಾಯಿವರೆಗೂ ತುಪ್ಪವನ್ನು ಮಾರಾಟ ಮಾಡುತ್ತಿದ್ದಾರೆ. ನಮಗೆ ಎದುರಾಗುತ್ತಿರುವ ನಷ್ಟವನ್ನು ಎದುರಿಸಲು ಬೆಲೆ ಹೆಚ್ಚಳ ಮಾಡುವ ಬಗ್ಗೆ ಮನವಿ ಮಾಡಲಾಗಿತ್ತು. ತುಪ್ಪ ಉತ್ಪಾದನೆ ಹೆಚ್ಚಳ ಮಾಡಲು ಸಾಕಷ್ಟು ಬೇಡಿಕೆ ಇತ್ತು.
ನಮ್ಮ ರಾಜ್ಯದಲ್ಲಿ ಮಾತ್ರ ಹಾಲಿನ ಕಡಿಮೆ ಬೆಲೆ ಇದೆ. ಬೇರೆ ರಾಜ್ಯಗಳಲ್ಲಿ ಹಾಲಿನ ದರ ಇನ್ನೂ ಹೆಚ್ಚಿದೆ. ಹಾಲಿನ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿಲ್ಲ. ಆದರೆ ಬೆಲೆ ಹೆಚ್ಚಳ ಮಾಡಲು ಮನವಿ ಸಲ್ಲಿಸಿದ್ದೇವೆ. ಇಷ್ಟು ಎಂಬುದನ್ನ ಹೇಳಿಲ್ಲ ಎಂದ್ರು. ಈ ಮೂಲಕ ಪರೋಕ್ಷವಾಗಿ ಹಾಲಿನ ದರ ಹೆಚ್ಚಳದ ಬಗ್ಗೆ ಮುನ್ಸೂಚನೆ ನೀಡಿದ್ದಾರೆ.
ನಮಗೆ ಅರ್ಧ ಲೀಟರ್ ಹಾಲು ಮಾರಾಟ ಮಾಡಿದರೆ ನಷ್ಟ ಆಗ್ತಿದೆ. ಒಂದು ಲೀಟರ್ ಹಾಲು ಮಾರಾಟ ಮಾಡಿದರೆ ಮಾತ್ರ ಲಾಭ ಸಿಗುತ್ತಿದೆ. ಬೇರೆ ಕಂಪನಿಯ ಹಾಲು ಆನ್‌ಲೈನ್ ಮಾರ್ಕೆಟಿಂಗ್ ಜಾಸ್ತಿ ಆಗಿದೆ. ನಾವು ರೈತರಿಗೆ ಹಾಲಿನ ಹಣವನ್ನು ಕೂಡಲೇ ಕೊಡಬೇಕು. ಬೇರೆ ರಾಜ್ಯಗಳಂತೆ ನಾವು ಹೆಚ್ಚು ಬಾಕಿ ಹಣ ಉಳಿಸಿಕೊಂಡಿಲ್ಲ.
ಪ್ರತಿ ಲೀಟರ್‌ಗೆ ನಮಗೆ 1 ರೂಪಾಯಿ 40 ಪೈಸೆ ನಷ್ಟ ಆಗ್ತಿದೆ. ಸರ್ಕಾರ ಏನು ತೀರ್ಮಾನ ಮಾಡುತ್ತೆ ಎಂದು ನೋಡುತ್ತೇವೆ. ಹಾಲು ಉತ್ಪಾದನೆ ಮಾಡುವವರಿಂದಲೂ ಒತ್ತಡ ಇದೆ, ಇದರಿಂದ ಒಕ್ಕೂಟಗಳಿಗೆ ನಷ್ಟ ಆಗ್ತಿದೆ. ಈ ಬಗ್ಗೆ ಕೆಎಂಎಫ್‌ಗೆ ತಿಳಿಸಿದ್ದೀವಿ. ಸರ್ಕಾರದೊಂದಿಗೆ ಮಾತನಾಡಿ ತೀರ್ಮಾನ ಮಾಡಬೇಕಿದೆ ಎಂದು, ಮಾಜಿ ಸಂಸದ ಡಿ.ಕೆ. ಸುರೇಶ್ ಸ್ಪಷ್ಟಪಡಿಸಿದ್ದಾರೆ.

