ಬಿಹಾರ ಮುಸ್ಲಿಂ ಸಮುದಾಯದವರ ಪ್ರಾಬಲ್ಯವಿರುವ ಸೀಮಾಂಚಲ ಭಾಗದಲ್ಲಿ, aimim ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಮಹಾಘಟಬಂಧನ್ ವಿರುದ್ದ ಅದರಲ್ಲೂ ಪ್ರಮುಖವಾಗಿ, ಮಾಜಿ ಡಿಸಿಎಂ ತೇಜಸ್ವಿ ಯಾದವ್ ವಿರುದ್ದ ತೀವ್ರ ವಾಗ್ದಾಳಿಯನ್ನು ನಡೆಸುತ್ತಿದ್ದಾರೆ. ಮಹಾಘಟಬಂಧನ್ ಭಾಗವಾಗಲು ಪ್ರಯತ್ನಿಸಿದರೂ, ನಮ್ಮನ್ನು ತೇಜಸ್ವಿ ಯಾದವ್ ಕಡೆಗಣಿಸಿದ್ದಾರೆ ಎಂದು ಓವೈಸಿ ಕಿಡಿಕಾರಿದ್ದಾರೆ. ಜೊತೆಗೆ, ತೇಜಸ್ವಿ ಅವರನ್ನು ಮಹಾಭಾರತದ ಕೌರವರಿಗೆ ಹೋಲಿಸಿದ್ದು, ನಿಮ್ಮ ಪತನಕ್ಕೆ ನೀವೇ ಮುನ್ನುಡಿ ಬರೆದಿದ್ದೀರಾ ಎಂದು ಎಚ್ಚರಿಸಿದ್ದಾರೆ.
ನಾನು ಬಿಹಾರ ಚುನಾವಣೆಗೆ ಸೀಟು ಹಂಚಿಕೆ ಮುನ್ನ ತೇಜಸ್ವಿ ಯಾದವ್ ಅವರನ್ನು ಸಂಪರ್ಕಿಸಿದ್ದೆ. ನಮ್ಮ ಪಾರ್ಟಿಯನ್ನೂ ಮಹಾಘಟಬಂಧನ್‌ನಲ್ಲಿ ಸೇರಿಸಿಕೊಳ್ಳಿ ಎಂದಿದ್ದೆ. ಕೇವಲ ಆರು ಸೀಟು ನಮಗೆ ಬಿಟ್ಟುಕೊಡಿ ಎಂದು ಕೇಳಿದ್ದೆ. ಆದರೆ ನನ್ನ ಮಾತನ್ನು ಅವರು ಕಡೆಗಣಿಸಿದರು. ಮಹಾಭಾರತದಲ್ಲಿ ಪಾಂಡವರಿಗೆ 5 ಗ್ರಾಮವನ್ನು ಕೌರವ ಚಕ್ರವರ್ತಿ ದುರ್ಯೋಧನ ನೀಡಿದ್ರೆ, ಮಹಾಭಾರತ ಯುದ್ದವೇ ನಡೆಯುತ್ತಿರಲಿಲ್ಲ. ನಾನು ಕೂಡಾ ಕೇವಲ 6 ಸೀಟು ಕೇಳಿದ್ದೆ. ಅದನ್ನು ಕೊಡದೇ ತಮ್ಮ ಪತನಕ್ಕೆ ಅವರೇ ನಾಂದಿ ಹಾಡಿದ್ದಾರೆ.
ಮಹಾರಾಷ್ಟ್ರದ ಚುನಾವಣೆಯಲ್ಲೂ ಮಹಾವಿಕಾಸ್ ಆಘಾಡಿ ಕೂಡ ಇದೇ ರೀತಿ ಮಾಡಿತ್ತು. ನಮ್ಮನ್ನು ತೀವ್ರವಾದಿಗಳು ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ. ನಿಮ್ಮ ಈ ಟೀಕೆಗೆ ಸೀಮಾಂಚಲದ ಜನ ಈ ಬಾರಿ ಚುನಾವಣೆಯಲ್ಲಿ ಉತ್ತರಿಸಲಿದ್ದಾರೆ. ನಮ್ಮನ್ನು ಬಿಜೆಪಿಯ b ಟೀಂ ಎಂದು ರಾಹುಲ್ ಬಾಬಾ ಕರೆಯುತ್ತಾರೆ. ಅಸಲಿಗೆ, ಒಕ್ಕೂಟದಲ್ಲಿ ಒಗ್ಗಟ್ಟು ಇಲ್ಲದೇ, ಬಿಜೆಪಿಯನ್ನು ಗೆಲ್ಲಿಸಲು ಪರೋಕ್ಷವಾಗಿ ಸಹಾಯ ಮಾಡುವುದು ಇದೇ ಕಾಂಗ್ರೆಸ್ ಪಾರ್ಟಿ ಎಂದು ಅಸಾದುದ್ದೀನ್ ಓವೈಸಿ ವ್ಯಂಗ್ಯವಾಡಿದ್ದಾರೆ.
ಸೀಮಾಂಚಲ ಭಾಗದ ಜಿಲ್ಲೆಗಳಾದ ಪುರ್ನೇಯಾ, ಕೃಷ್ಣಗಂಜ್, ಅರಾರಿಯಾ ಮತ್ತು ಕತಿಹಾರ್‌ನಲ್ಲಿ 2ನೇ ಹಂತದಲ್ಲಿ ನವೆಂಬರ್ 11ರಂದು ಚುನಾವಣೆ ನಡೆಯಲಿದೆ. ಮಹಾಘಟಬಂಧನ್ ಪಾರ್ಟಿಗಳಿಗೆ ಸೆಡ್ಡು ಹೊಡೆಯಲು, 25 ಕ್ಷೇತ್ರಗಳಲ್ಲಿ ಓವೈಸಿ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾರೆ. ಬಿಜೆಪಿಯಿಂದ ದುಡ್ಡು ತೆಗೆದುಕೊಂಡ ಆರೋಪ ಮಾಡುತ್ತಿರುವ, ಇಂಡಿಯಾ ಮೈತ್ರಿಕೂಟದ ನಾಯಕರ ವಿರುದ್ದ ತೊಡೆ ತಟ್ಟಿದ್ದಾರೆ.

