Political News: ಇಂದು ಸಿಎಂ ಸಿದ್ದರಾಮಯ್ಯ ಸಂಪುಟ ಸಭೆ ಕರೆದು ಮಾತನಾಡಿದ್ದು, ರೈತರ ವಿಚಾರದಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಮಾಡುತ್ತಿದೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಸರ್ವರೋಗಕ್ಕೂ ಒಂದೇ ಮದ್ದು ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡುವುದು ಎಂದು ಜರಿದಿದ್ದಾರೆ.
2020 ಮೇ 8ರಂದು ಸಿಎಂ ಸಿದ್ದರಾಮಯ್ಯ ರೈತರ ಬೆಳೆಗಳ ಉತ್ಪಾಾದನಾ ವೆಚ್ಚವನ್ನು ಆಧರಿಸಿ, ಸರ್ಕಾರವೇ ಬೆಲೆ ನಿಗದಿ ಮಾಡಬೇಕು. ನಿಗದಿತ ಬೆಲೆಗಿಂತ ಕಡಿಮೆ ಬೆಲೆ ರೈತರಿಗೆ ಸಿಗುವಂತಿದ್ದರೆ, ಸರ್ಕಾರ ಮಧ್ಯ ಪ್ರವೇಶ ಮಾಡಿ ಬೆಂಬಲ ಬೆಲೆ ನೀಡಲು 5 ಸಾವಿರ ಕೋಟಿಯ ಆವರ್ತ ನಿಧಿಯನ್ನು ಸ್ಥಾಪಿಸಿ, ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಖರೀದಿ ಕೇಂದ್ರಗಳನ್ನು ತೆಗೆಯಬೇಕು ಎಂದು ಎಕ್ಸ್ ಖಾತೆಯಲ್ಲಿ ಬರೆದಿದ್ದರು. ಇದೇ ಪೋಸ್ಟ್ ಸ್ಕ್ರೀನ್ ಶಾಟ್ ತೆಗೆದು ಹಾಕಿರುವ ಅಶೋಕ್, ವ್ಯಂಗ್ಯವಾಡಿದ್ದಾರೆ.
ವಿಜಯಪುರ, ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳಲ್ಲಿ ಕಬ್ಬು ಬೆಳೆಗಾರರು ಕಳೆದ ಒಂದು ವಾರದಿಂದ ನಡೆಸುತ್ತಿರುವ ಪ್ರತಿಭಟನೆಯ ಬಿಸಿ ಸರ್ಕಾರಕ್ಕೆ ತಟ್ಟುತ್ತಿದ್ದಂತೆ ಗಾಢ ನಿದ್ದೆಯಿಂದ ಎದ್ದಿರುವ ಸಿಎಂ ಸಿದ್ದರಾಮಯ್ಯ ಸರ್ಕಾರ ಎಂದಿನಂತೆ ಕಾಟಾಚಾರದ ಸುದ್ದಿ ಗೋಷ್ಠಿ ಮಾಡಿ ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡಿ ಕೈತೊಳೆದುಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂದು ಅಶೋಕ್ ಕಿಡಿಕಾರಿದ್ದಾರೆ.
ಸ್ವಾಮಿ ಸಿಎಂ ಸಿದ್ದರಾಮಯ್ಯನವರೇ, ತಮಗೆ ನಿಜವಾಗಿಯೂ ರೈತರ ಬಗ್ಗೆ ಕಾಳಜಿ ಇದ್ದರೆ, ಪ್ರತಿಭಟನಾ ನಿರತ ಕಬ್ಬು ಬೆಳೆಗಾರರ ಬೇಡಿಕೆಗೆ ಸ್ಪಂದಿಸುವ ಬದ್ಧತೆ ಇದ್ದರೆ, ಕೇಂದ್ರ ಸರ್ಕಾರ ನಿಗದಿ ಮಾಡುವ FRPಗೆ ಹೆಚ್ಚುವರಿಯಾಗಿ ರಾಜ್ಯ ಸರ್ಕಾರದ ವತಿಯಿಂದ ಪ್ರತಿ ಟನ್ ಗೆ 500 ರೂಪಾಯಿ ಪ್ರೋತ್ಸಾಹ ಧನ ಘೋಷಣೆ ಮಾಡಿ.
ವಿರೋಧ ಪಕ್ಷದಲ್ಲಿದ್ದಾಗ ಬೆಲೆ ನಿಗದಿ ಮಾಡಿ, ಆವರ್ತ ನಿಧಿ ಸ್ಥಾಪನೆ ಮಾಡಿ ಎಂದು ಸರ್ಕಾರಗಳಿಗೆ ಬಿಟ್ಟಿ ಸಲಹೆ ನೀಡುವ ತಾವು, ಅಧಿಕಾರದಲ್ಲಿದ್ದಾಗ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಿ ಜಾರಿಕೊಳ್ಳುವುದು ಯಾವ ಸೀಮೆ ನ್ಯಾಯ ಸ್ವಾಮಿ? ಎಂದು ಅಶೋಕ್ ಸಿಎಂ ಸಿದ್ದರಾಮಯ್ಯಗೆ ಪ್ರಶ್ನಿಸಿದ್ದಾರೆ.
ಪ್ರೋತ್ಸಾಹ ಧನ ಕೊಡುವುದು ಬಿಡಿ, ಕನಿಷ್ಠ ಪಕ್ಷ ಪ್ರತಿಭಟನಾನಿರತ ರೈತರನ್ನು ಭೇಟಿ ಮಾಡಿ ಸಮಾಧಾನ ಮಾಡುವ ಸೌಜನ್ಯವೂ ನಿಮ್ಮ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ. ಪದೇ ಪದೇ ಈ ರೀತಿ ರೈತ ವಿರೋಧಿ ನೀತಿ ಅನುಸರಿಸುತ್ತಿರುವ ಕಾಂಗ್ರೆಸ್ ಸರ್ಕಾರದ ಧೋರಣೆಗೆ ಮುಂದಿನ ದಿನಗಳಲ್ಲಿ ಬಹಳ ದೊಡ್ಡ ಬೆಲೆ ತೆತ್ತಬೇಕಾಗುತ್ತದೆ ಎಂದು ಆರ್.ಅಶೋಕ್ ಎಚ್ಚರಿಕೆ ನೀಡಿದ್ದಾರೆ.
ಸರ್ವರೋಗಕ್ಕೂ ಒಂದೇ ಮದ್ದು
ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡುವುದುವಿಜಯಪುರ, ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳಲ್ಲಿ ಕಬ್ಬು ಬೆಳೆಗಾರರು ಕಳೆದ ಒಂದು ವಾರದಿಂದ ನಡೆಸುತ್ತಿರುವ ಪ್ರತಿಭಟನೆಯ ಬಿಸಿ ಸರ್ಕಾರಕ್ಕೆ ತಟ್ಟುತ್ತಿದ್ದಂತೆ ಗಾಢ ನಿದ್ದೆಯಿಂದ ಎದ್ದಿರುವ ಸಿಎಂ @siddaramaiah ಸರ್ಕಾರ ಎಂದಿನಂತೆ ಕಾಟಾಚಾರದ ಸುದ್ದಿ ಗೋಷ್ಠಿ ಮಾಡಿ… pic.twitter.com/OyvPjXm6w3
— R. Ashoka (@RAshokaBJP) November 6, 2025

