Mandya News: ಮಂಡ್ಯ: ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆ ಮಾಡುವುದಕ್ಕೆ ಜಾಗ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬೃಹತ್ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ಇಬ್ಬರಿಗೂ ಪತ್ರ ಬರೆದಿದ್ದೇನೆ ಎಂದು ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಹೇಳಿದರು.
ಮಂಡ್ಯದಲ್ಲಿ ದಿಶಾ ಸಮಿತಿ ಸಭೆಯ ನಂತರ ಮಾಧ್ಯಮಗೋಷ್ಟಿಯಲ್ಲಿ ಕೇಂದ್ರ ಸಚಿವರು; ಮಂಡ್ಯ ಜಿಲ್ಲೆಯಲ್ಲಿ ದೊಡ್ಡ ಕೈಗಾರಿಕೆ ಸ್ಥಾಪನೆ ಮಾಡಬೇಕೆನ್ನುವ ಬೇಡಿಕೆ ಇದೆ. ನಾನು ಸಂಸದನಾಗಿ ಒಂದೂವರೆ ವರ್ಷ ಆಯಿತು. ಕೈಗಾರಿಕೆಗೆ ಜಾಗ ಕೊಡಿ ಎಂದು ಡಿಸಿ ಅವರಿಗೆ ಪತ್ರ ಬರೆದಿದ್ದೇನೆ. ಪಾಪ.. ಅವರು ಜಾಗ ಹುಡುಕುತ್ತಲೇ ಇದ್ದಾರೆ. ಜಿಲ್ಲಾಧಿಕಾರಿಗಳು ಜಾಗ ಹುಡುಕಿದ್ರು ಸಿಕ್ಕಿಲ್ಲ ಎಂದರು.
ರಾಜ್ಯದಲ್ಲಿ ಕೇಂದ್ರದಿಂದ ಏನೇ ಕೆಲಸ ಆಗಬೇಕಿದ್ದರೂ ರಾಜ್ಯದ ಸಹಕಾರ ಬೇಕಿದೆ. ಸಹಕಾರ ಸಿಗುತ್ತದೆ ಎಂಬ ನಂಬಿಕೆ ಇದೆ ಎಂದು ಸಚಿವರು ಹೇಳಿದರು.
ಮಂಡ್ಯ ಶಾಸಕರು ಜಾಗ ಕೊಡುವುದಾದರೆ ಕೊಡಲಿ. ಸರಕಾರದಿಂದ ಸ್ವಾಧೀನ ಮಾಡಿಸಿ ನಮಗೆ ಕೊಡಲಿ. ಎಲ್ಲರೂ ಸೇರಿ ಕೈಗಾರಿಕೆ ತಂದು ಉದ್ಯೋಗ ಸೃಷ್ಟಿ ಮಾಡೋಣ. ಮಂಡ್ಯಕ್ಕೆ ಏನು ತಂದ್ರಿ ಅಂತ ಕೇಳುವವರು ನೀವು ಜಿಲ್ಲೆಗೆ ಏನು ತಂದಿದ್ದೀರಾ ಹೇಳಿ. ಚಿಲ್ಲರೆ ರಾಜಕೀಯ ಮಾಡುವುದನ್ನು ನಿಲ್ಲಿಸಲಿ. ಕಾರ್ಖಾನೆ ಸ್ಥಾಪನೆ ವಿಚಾರವಾಗಿ ಸಿಎಂ ಸಿದ್ಧರಾಮಯ್ಯ ಅವರು, ಸಚಿವ ಎಂ.ಬಿ. ಪಾಟೀಲ್ ಅವರಿಗೆ ಪತ್ರ ಬರೆದಿದ್ದೇನೆ. ಅವರಿಂದ ಏನು ಪ್ರತಿಕ್ರಿಯೆ ಬರುತ್ತದೋ ನೋಡೋಣ ಎಂದು ಸಚಿವರು ತಿಳಿಸಿದರು.
ಶಿಕ್ಷಕರ ಕಷ್ಟ ನೋಡಲಾಗದೆ ವೇತನಕ್ಕೆ ಹಣ ನೀಡುತ್ತಿದ್ದೇನೆ:
ಮೈಷುಗರ್ ಶಾಲೆ ಶಿಕ್ಷಕರಿಗೆ ಸಂಬಳ ಕೊಡುವ ಯೋಗ್ಯತೆ ಇಲ್ಲ ಈ ಸರ್ಕಾರಕ್ಕೆ. ಸಂಬಳ ಕೊಡಲು ದುಡ್ಡಿಲ್ಲ ಎಂದರೆ ಈ ಸರ್ಕಾರದಲ್ಲಿ ದುಡ್ಡಿಲ್ಲ ಅಂತ ಆಯ್ತು. ನಾನು ಸಿಎಂ ಆಗಿದ್ದಾಗ ಕಾರ್ಖಾನೆಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ಬಜೆಟ್ ನಾಲ್ಕು ₹100 ಕೋಟಿ ಇಟ್ಟಿದ್ದೆ. ಆ ದುಡ್ಡು ಎಲ್ಲಿ ಹೋಯಿತು? ಈಗ ನೋಡಿದರೆ ಕೀಳು ಮಟ್ಟದಲ್ಲಿ ಮಾತನಾಡುತ್ತೀರಾ? ಎಂದು ಸಚಿವರು ತರಾಟೆಗೆ ತೆಗೆದುಕೊಂಡರು.
ಮಂಡ್ಯ ಕೃಷಿ ವಿವಿ ತಂದಿದ್ದೇವೆ, ಸಂತೋಷ. ಐದು ವರ್ಷ ಬಿಟ್ಟು ಮಾತಾಡೋಣ. ಬೆಂಗಳೂರು ನಗರ ವಿವಿಯಲ್ಲಿ 161 ಪ್ರಾಧ್ಯಾಪಕರು ಇರಬೇಕು. ಆದರೆ ಈಗ ಕೇವಲ 9 ಜನ ಪ್ರಾಧ್ಯಾಪಕರು ಇದ್ದಾರೆ. ರಾಜ್ಯದಲ್ಲಿ 65 ಸಾವಿರ ಶಿಕ್ಷಕರ ಕೊರತೆ ಇದೆ. ಇವರು ಯಾರನ್ನು ನೇಮಕ ಮಾಡುವ ಯೋಗ್ಯತೆ ಇಲ್ಲ ಎಂದು ಸಚಿವರು ಹರಿಹಾಯ್ದರು.

