ಇಂದಿರಾ ಆಹಾರ ಕಿಟ್ನಲ್ಲಿ ಹೆಸರುಕಾಳು ಬದಲು ತೊಗರಿಬೇಳೆ ಹೆಚ್ಚುವರಿಯಾಗಿ ಕೊಡಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ. ಅನ್ನಭಾಗ್ಯ ಫಲಾನುಭವಿಗಳ ಹಿತ ಕಾಯುವ ಜೊತೆಗೆ ರಾಜ್ಯದ ರೈತರ ನೆರವಾಗುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ಪಡಿತರ ಚೀಟಿದಾರರಿಗೆ ವಿತರಿಸಲಾಗುವ ಕಿಟ್ನಲ್ಲಿದ್ದ 1 ಕೆ.ಜಿ. ಹೆಸರುಕಾಳನ್ನು ಕೈ ಬಿಟ್ಟು, ಅದರ ಬದಲಿಗೆ ತೊಗರಿಬೇಳೆಯನ್ನು ಹೆಚ್ಚುವರಿಯಾಗಿ ವಿತರಿಸಲು ತೀರ್ಮಾನಿಸಲಾಗಿದೆ. ರಾಜ್ಯದ ತೊಗರಿಬೇಳೆ ಬೆಳೆಗಾರರ ಹಿತಾಸಕ್ತಿ ಕಾಪಾಡುವ ಮತ್ತು ಪಡಿತರದಾರರಿಗೆ ಮತ್ತಷ್ಟು ಪ್ರೋಟೀನ್ಯುಕ್ತ ಪೌಷ್ಟಿಕಾಂಶ ಒದಗಿಸುವ ಉದ್ದೇಶದೊಂದಿಗೆ ಈ ಬದಲಾವಣೆ ಮಾಡಲಾಗಿದೆ ಎಂದು, ಕಾನೂನು ಸಚಿವ ಹೆಚ್.ಕೆ. ಪಾಟೀಲ್ ತಿಳಿಸಿದರು.
ಈ ಹಿಂದೆ ‘ಇಂದಿರಾ ಆಹಾರ ಕಿಟ್’ನಲ್ಲಿ ತಲಾ 1 ಕೆ.ಜಿ. ತೊಗರಿಬೇಳೆ, ಹೆಸರುಕಾಳು, ಸಕ್ಕರೆ, ಉಪ್ಪು ಹಾಗೂ 1 ಲೀಟರ್ ಅಡುಗೆ ಎಣ್ಣೆಯನ್ನು ಸೇರಿಸಲಾಗಿತ್ತು. ಉತ್ತರ ಕರ್ನಾಟಕ ಭಾಗದಲ್ಲಿ ತೊಗರಿ ಪ್ರಮುಖ ಬೆಳೆಯಾಗಿದೆ. ರೈತರ ಹಿತ ಕಾಪಾಡಲು ಹೆಸರುಕಾಳಿನ ಬದಲಿಗೆ ತೊಗರಿಬೇಳೆ ನೀಡುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಈ ಬಗ್ಗೆ ಸಚಿವ ಶರಣ ಪ್ರಕಾಶ್ ಪಾಟೀಲ್, ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಕೆಲವರು ಮನವಿ ಮಾಡಿದ್ರು. ಈ ಹಿನ್ನೆಲೆಯಲ್ಲಿ ಬದಲಾವಣೆ ಮಾಡಲಾಗಿದೆ.
ಇಂದಿರಾ ಕಿಟ್ನಲ್ಲಿ ತೊಗರಿಬೇಳೆ, ಅಡುಗೆ ಎಣ್ಣೆ, ಸಕ್ಕರೆ, ಉಪ್ಪು ಪದಾರ್ಥಗಳನ್ನು ಒಳಗೊಂಡಿರುತ್ತದೆ. ಆಹಾರ ಪದಾರ್ಥಗಳ ಖರೀದಿ ಪ್ರಕ್ರಿಯೆಯನ್ನು, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಬದಲು, ಇನ್ಮುಂದೆ ಆಹಾರ ಇಲಾಖೆಯ ಆಯುಕ್ತರ ಮೂಲಕವೇ ಟೆಂಡರ್ ಕರೆಯಲು, ಅನುಮೋದನೆ ನೀಡಲಾಗಿದೆ.
ಪರಿಷ್ಕೃತ ಯೋಜನೆಯ ಪ್ರಕಾರ, ಇಂದಿರಾ ಕಿಟ್ನಲ್ಲಿರುವ ಇತರ ವಸ್ತುಗಳ ಜೊತೆಗೆ, ಕುಟುಂಬದ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ತೊಗರಿಬೇಳೆಯನ್ನು ವಿತರಿಸಲಾಗುತ್ತದೆ. 1 ಮತ್ತು 2 ಸದಸ್ಯರಿರುವ ಕುಟುಂಬಕ್ಕೆ ¼ ಕೆ.ಜಿ., 3 ಮತ್ತು 4 ಸದಸ್ಯರಿರುವ ಕುಟುಂಬಕ್ಕೆ ½ ಕೆ.ಜಿ., 5 ಮತ್ತು ಅದಕ್ಕಿಂತ ಹೆಚ್ಚು ಸದಸ್ಯರಿರುವ ಕುಟುಂಬಕ್ಕೆ ¾ ಕೆ.ಜಿ ನೀಡಲು ಸಚಿವ ಸಂಪುಟ ನಿರ್ಣಯಿಸಿದೆ.

