ರಾಜ್ಯದ ಪ್ರಮುಖ ಮಹಿಳಾ ಕಲ್ಯಾಣ ಯೋಜನೆಗಳಲ್ಲಿ ಒಂದಾದ ‘ಗೃಹಲಕ್ಷ್ಮೀ ಯೋಜನೆ’ ಈಗ ಹೊಸ ಹಂತಕ್ಕೇರಿದೆ. ಯೋಜನೆಯಡಿ ಈಗಾಗಲೇ ಪ್ರತಿ ತಿಂಗಳು ₹2,000 ರೂ. ಆರ್ಥಿಕ ನೆರವು ನೀಡಲಾಗುತ್ತಿತ್ತು. ಇದೀಗ ಫಲಾನುಭವಿಗಳಿಗೆ ₹3 ಲಕ್ಷ ರೂಪಾಯಿವರೆಗೆ ಕಡಿಮೆ ಬಡ್ಡಿದರದ ಸಾಲ ನೀಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಘೋಷಿಸಿದ್ದಾರೆ.
ಶನಿವಾರ ಮಾತನಾಡಿದ ಅವರು, ವಿಶ್ವದ ಅತಿದೊಡ್ಡ ಸಾಮಾಜಿಕ ಕಲ್ಯಾಣ ಯೋಜನೆಗಳಲ್ಲಿ ಗೃಹಲಕ್ಷ್ಮೀ ಒಂದು. ನಾವು ಯೋಜನೆಯನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದೇವೆ. ಇದೀಗ ಫಲಾನುಭವಿಗಳ ಆರ್ಥಿಕ ಶಕ್ತಿ ಹೆಚ್ಚಿಸಲು ‘ಗೃಹಲಕ್ಷ್ಮೀ ಬಹುಪಯೋಗಿ ಸಹಕಾರಿ ಸಂಘ’ವನ್ನು ಸ್ಥಾಪಿಸಲಾಗಿದೆ. ಇದರ ಮೂಲಕ ಮಹಿಳೆಯರಿಗೆ ಸಾಲ ಸೌಲಭ್ಯ ನೀಡಲಾಗುವುದು ಎಂದು ತಿಳಿಸಿದರು.
ಸಂಘದ ಅಧಿಕೃತ ಚಾಲನೆ ನವೆಂಬರ್ 19ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದೇ ದಿನ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಜನ್ಮದಿನದ ಅಂಗವಾಗಿ ಗೃಹಲಕ್ಷ್ಮೀ ಬ್ಯಾಂಕ್, ಮಹಿಳಾ ಸುರಕ್ಷತೆಗೆ ಹೊಸ ಉಪಕ್ರಮವಾಗಿ ಅಕ್ಕ ಪಡೆ (ಸಿಸ್ಟರ್ ಸ್ಕ್ವಾಡ್), ಸೈಬರ್ ಅಪರಾಧ ಜಾಗೃತಿ ಕಾರ್ಯಕ್ರಮ ಈ ಮೂರು ಪ್ರಮುಖ ಯೋಜನೆಗಳಿಗೆ ಚಾಲನೆ ನೀಡಲಾಗುವುದು ಅಂತ ಸಚಿವೆ ಹೆಬ್ಬಾಳ್ಕರ್ ತಿಳಿಸಿದ್ದಾರೆ
ಈಗಾಗಲೇ 2,000ಕ್ಕೂ ಹೆಚ್ಚು ಸದಸ್ಯರಿಂದ ಹಣ ಸಂಗ್ರಹಿಸಲಾಗಿದೆ. ಎಲ್ಲ ಹಣಕಾಸು ವಹಿವಾಟುಗಳನ್ನು ಫೋನ್‌ಪೇ ಮೂಲಕ ಪಾರದರ್ಶಕವಾಗಿ ನಡೆಸಲಾಗುತ್ತಿದೆ. ಮುಂದಿನ ಮೂರು ತಿಂಗಳಲ್ಲಿ ಸಂಘದ ವ್ಯಾಪ್ತಿಯನ್ನು ಎಲ್ಲಾ ಜಿಲ್ಲೆಗಳಿಗೆ ವಿಸ್ತರಿಸುವ ಗುರಿ ಸರ್ಕಾರ ಹೊಂದಿದೆ.
ಮಹಿಳಾ ಸುರಕ್ಷತೆಗೆ ‘ಅಕ್ಕ ಪಡೆ’ ಎಂಬ ಹೊಸ ತಂಡವನ್ನು ರಚಿಸಲಾಗುತ್ತಿದೆ. ಇದು ಗೃಹರಕ್ಷಕರು ಮತ್ತು ಎನ್‌ಸಿಸಿ ಕಡೆಯಟ್‌ಗಳಿಂದ ಕೂಡಿದ್ದು, ಬೆಳಿಗ್ಗೆ 8ರಿಂದ ರಾತ್ರಿ 8ರವರೆಗೆ ಶಾಲೆಗಳು, ಕಾಲೇಜುಗಳು, ಉದ್ಯಾನಗಳು ಮತ್ತು ಮಾಲ್‌ಗಳಲ್ಲಿ ಗಸ್ತು ತಿರುಗುವ ಮೂಲಕ ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸಲಿದೆ. ರಾಜ್ಯದಾದ್ಯಂತ ಸುಮಾರು 40,000 ಮಹಿಳೆಯರು ಈ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ. ಒಟ್ಟಿನಲ್ಲಿ, ಗೃಹಲಕ್ಷ್ಮೀ ಯೋಜನೆ ಈಗ ಮಹಿಳೆಯರಿಗೆ ಆರ್ಥಿಕ ನೆರವಿನೊಂದಿಗೆ ಭದ್ರತೆ ಮತ್ತು ಸಬಲೀಕರಣದ ಹೊಸ ಅಧ್ಯಾಯವನ್ನು ಆರಂಭಿಸಿದೆ.
ವರದಿ : ಲಾವಣ್ಯ ಅನಿಗೋಳ

