Political News: ಕರ್ನಾಟಕದ ಪೊಲೀಸ್ ಇಲಾಖೆ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ಇಂಡಿಯಾ ಜಸ್ಟಿಸ್ ವರದಿಯ ಪ್ರಕಾರ ರಾಷ್ಟ್ರಮಟ್ಟದಲ್ಲಿ ಮನ್ನಣೆ ಪಡೆದಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ ಜಿ ಪರಮೇಶ್ವರ ಅವರು ಹೇಳಿದರು.
ಪೊಲೀಸ್ ಸಿಬ್ಬಂದಿಗಳ ಪೀಕ್-ಕ್ಯಾಪ್ ಪರಿಚಯ ಮತ್ತು ವಿತರಣೆ ಹಾಗೂ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಪೀಕ್ ಕ್ಯಾಪ್ ವಿತರಣೆಯಿಂದ ಇಡೀ ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಹೊಸ ಚೈತನ್ಯ ಮೂಡಿದೆ. ಪೊಲೀಸರ ವೃತ್ತಿಪರ ಜೀವನದಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ. ಪಿಕ್ ಕ್ಯಾಪ್ ನೀಡುವ ವಿಷಯ ಬಹಳ ದಿನಗಳ ಬೇಡಿಕೆಯಿತ್ತು, ಈ ಬಾರಿ ಅದನ್ನು ಕಾರ್ಯಗತಗೊಳಿಸಲಾಗಿದೆ, ಎಂದು ಹೇಳಿದರು.
ಪೊಲೀಸ್ ಇಲಾಖೆ ವೃತ್ತಿಯಲ್ಲಿ ಸಾರ್ವಜನಿಕರಿಗೆ ಒಳಿತನ್ನು ಮಾಡುವ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಪ್ರತಿ ಕಾನ್ಸ್‌ಟೇಬಲ್‌ಗೂ ಸೈಬರ್ ಕ್ರೈಮ್ ತರಬೇತಿ ನೀಡಿ, ಸೈಬರ್ ಅಪರಾಧ ತಡೆಗಟ್ಟುವಲ್ಲಿ ಕರ್ನಾಟಕ ಎಲ್ಲ ರಾಜ್ಯಗಳಿಗೂ ಮಾದರಿಯಾಗುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತೇನೆ ಎಂದು ಹೇಳಿದರು.

