ಬಿಹಾರ ವಿಧಾನಸಭಾ ಚುನಾವಣೆಯ 2ನೇ ಹಂತದ ಮತದಾನ ಇಂದು ನಡೆಯುತ್ತಿದೆ. ಮಂಗಳವಾರ 20 ಜಿಲ್ಲೆಗಳ 122 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. ಈ ಹಂತದ 122 ಸ್ಥಾನಗಳಲ್ಲಿ 101 ಸ್ಥಾನಗಳು ಸಾಮಾನ್ಯ ವರ್ಗಕ್ಕೆ, 19 ಪರಿಶಿಷ್ಟ ಜಾತಿಗಳಿಗೆ ಮತ್ತು 2 ಪರಿಶಿಷ್ಟ ಪಂಗಡಗಳಿಗೆ ಮೀಸಲಾಗಿವೆ.
ನವೆಂಬರ್ 6ರಂದು ಮೊದಲ ಹಂತದಲ್ಲಿ ಶೇಕಡ 65.08ರಷ್ಟು ಮತದಾನವಾಗಿದ್ದು, ಇದುವರೆಗಿನ ಅತೀ ಹೆಚ್ಚು ಮತದಾನದ ದಾಖಲೆ ಬರೆದಿತ್ತು. ಇದೀಗ 2ನೇ ಹಂತದಲ್ಲೂ ಅತೀ ಹೆಚ್ಚಿನ ಮತದಾನವಾಗುವ ನಿರೀಕ್ಷೆ ಇದೆ. ಇಂದು ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಪ್ರಕ್ರಿಯೆ ಪ್ರಾರಂಭವಾಗಿದೆ. 3.7 ಕೋಟಿಗೂ ಅಧಿಕ ಮತದಾರರು 1302 ಅಭ್ಯರ್ಥಿಗಳ ಭವಷ್ಯ ನಿರ್ಧರಿಸಲಿದ್ದಾರೆ. 45,399 ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ನಡೆಯುತ್ತಿದೆ.
ರಾಜ್ಯ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ರಾಮ್ ಸೇರಿದಂತೆ 30 ಮಂದಿ ಘಟಾನುಘಟಿಗಳ ಹಣೆಬರಹವನ್ನು ಮತದಾರರು ಬರೆಯಲಿದ್ದಾರೆ. ಇಬ್ಬರು ಮಾಜಿ ಡಿಸಿಎಂಗಳು, 27 ಮಾಜಿ ಸಂಸದರು ಅದೃಷ್ಟ ಪರೀಕ್ಷಿಸಲಿದ್ದು, 136 ಮಹಿಳಾ ಅಭ್ಯರ್ಥಿಗಳು, ಒಬ್ಬ ತೃತೀಯ ಲಿಂಗಿ ಅಭ್ಯರ್ಥಿ ಸಹ ಕಣದಲ್ಲಿದ್ದಾರೆ.
ಔರಂಗಾಬಾದ್, ನವಾಡಾ, ಅರ್ವಾಲ್, ಜೆಹನಾಬಾದ್, ಮಧುಬನಿ, ಜಮೂಯಿ, ಭಭುವಾ, ಅರಾರಿಯಾ, ಭಾಗಲ್ಪುರ, ಬಂಕಾ, ರೋಹ್ಟಾಸ್, ಭಾಘಾ, ಸುಪೌಲ್ ಕ್ಷೇತ್ರಗಳು ಭಾರಿ ಕುತೂಹಲ ಕೆರಳಿಸಿವೆ.
ದಿಲ್ಲಿ ಸ್ಫೋಟ ಹಿನ್ನೆಲೆ ಬಿಹಾರ ರಾಜ್ಯದಲ್ಲಿ ಚುನಾವಣೆ ನಡೆಯುವ ಜಿಲ್ಲೆಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಉಗ್ರ ನಿಗ್ರಹ ಪಡೆಗಳು, ವಿಶೇಷ ಕಾರ್ಯಪಡೆ ಯೋಧರು, ಕ್ಷಿಪ್ರ ಕಾರ್ಯಪಡೆ ಪೊಲೀಸರನ್ನು ಭದ್ರತೆಗೆ ಬಳಸಿಕೊಳ್ಳಲಾಗಿದೆ. ರಾಜ್ಯದ 60 ಸಾವಿರ ಪೊಲೀಸರ ಜತೆಗೆ ಅರೆಸೇನಾಪಡೆಗಳ 4 ಲಕ್ಷ ಯೋಧರನ್ನು ನಿಯೋಜಿಸಲಾಗಿದೆ. ಅತಿ ಸೂಕ್ಷ್ಮ ಮತಗಟ್ಟೆ ಎಂದು ಗುರುತಿಸಲಾದ 8,491 ಮತಗಟ್ಟೆಗಳಲ್ಲಿ, ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜನೆ ಮಾಡಲಾಗಿದೆ.




