ಅಸಂಘಟಿತ ಕಾರ್ಮಿಕರ ಹಿತಕ್ಕಾಗಿ ರಾಜ್ಯ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಪ್ರತಿಯೊಬ್ಬ ಕಾರ್ಮಿಕರೂ ಇದರ ಸದುಪಯೋಗ ಪಡೆಯಬೇಕು ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಎಸ್. ಲಾಡ್ ತಿಳಿಸಿದ್ದಾರೆ. ಅವರು ಮಂಡ್ಯದಲ್ಲಿ ನಡೆದ ಅಸಂಘಟಿತ ಕಾರ್ಮಿಕರ ಸ್ಮಾರ್ಟ್ ಕಾರ್ಡ್ ವಿತರಣೆ ಮತ್ತು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸ್ವಿಗ್ಗಿ, ಜೋಮ್ಯಾಟೋ ಮುಂತಾದ ಸಂಸ್ಥೆಗಳಲ್ಲಿ ಕೆಲಸ ಮಾಡುವ ಯುವಕರಿಗಾಗಿ ಹೊಸ ಅಪಘಾತ ವಿಮೆ ಯೋಜನೆ ಜಾರಿಗೆ ತರಲಾಗಿದೆ. ಅಪಘಾತದಲ್ಲಿ ಮರಣವಾದರೆ ₹5 ಲಕ್ಷ ಪರಿಹಾರ, ಅಂಗವೈಕಲ್ಯವಾದರೆ ₹2 ಲಕ್ಷ ಪರಿಹಾರ ಮತ್ತು ಆಸ್ಪತ್ರೆ ವೆಚ್ಚಕ್ಕೆ ₹1 ಲಕ್ಷ ಸಹಾಯ ನೀಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಯುವಕರಿಗೆ ಖಾಸಗಿ ವಲಯದಲ್ಲಿ ಉದ್ಯೋಗ ನೀಡಲು ‘ಆಶಾದೀಪ ಯೋಜನೆ’ ಅಡಿಯಲ್ಲಿ ಸರ್ಕಾರ ಮಾಸಿಕ ವೇತನದ 50% ಧನಸಹಾಯ ನೀಡಲಿದೆ ಎಂದು ಘೋಷಿಸಿದರು.
ರಾಜ್ಯದಲ್ಲಿ ಈಗಾಗಲೇ 101 ವಿಧದ ಅಸಂಘಟಿತ ಕಸುಬು ಮಾಡುವ ಕಾರ್ಮಿಕರನ್ನು ಗುರುತಿಸಿ, ಲಕ್ಷಾಂತರ ಜನರಿಗೆ ಕಾರ್ಮಿಕ ಕಾರ್ಡ್ ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಕೃಷಿ ಕಾರ್ಮಿಕರನ್ನೂ ಅಸಂಘಟಿತ ಕಾರ್ಮಿಕರ ಪಟ್ಟಿಗೆ ಸೇರಿಸಲಾಗುವುದು ಎಂದು ಸಚಿವ ಲಾಡ್ ಹೇಳಿದರು. ಕಾರ್ಯಕ್ರಮದಲ್ಲಿ ಶಾಸಕರಾದ ಕೆ.ಎಂ. ಉದಯ್, ದರ್ಶನ್ ಪುಟ್ಟಣ್ಣಯ್ಯ, ಹಾಗೂ ಜಿಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ




