ಭಾರತ-ಅಮೆರಿಕ ಮಧ್ಯೆ ಸದ್ಯದಲ್ಲೇ ವ್ಯಾಪಾರ ಒಪ್ಪಂದ ಕುದುರುವ ನಿರೀಕ್ಷೆ ಇದೆ. ಈ ಒಪ್ಪಂದ ಈ ಹಿಂದೆ ನಾವು ಮಾಡಲು ಉದ್ದೇಶಿಸಿದ್ದ ಒಪ್ಪಂದಕ್ಕಿಂತ ಭಿನ್ನವಾಗಿರಲಿದೆ. ಬಳಿಕ ಭಾರತದ ಮೇಲಿನ ಭಾರಿ ತೆರಿಗೆ ತೆಗೆದುಹಾಕಲಿದ್ದೇವೆ ಎಂದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದಾರೆ.
ಭಾರತಕ್ಕೆ ಅಮೆರಿಕದ ನೂತನ ರಾಯಭಾರಿ ಸೆರ್ಗಿಯೋ ಗೋರ್, ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಟ್ರಂಪ್ ಮಾತನಾಡಿದ್ದಾರೆ. ನಾವು ನ್ಯಾಯಯುತವಾದ ಒಪ್ಪಂದ ಮಾಡಿಕೊಳ್ಳಲಿದ್ದೇವೆ. ಈ ಹಿಂದಿನ ಒಪ್ಪಂದ ನ್ಯಾಯಸಮ್ಮತ ವಾಗಿರಲಿಲ್ಲ. ಇದೀಗ ನಾವು ಒಪ್ಪಂದದ ಕೊನೆಯ ಹಂತದಲ್ಲಿದ್ದೇವೆ. ಈ ಒಪ್ಪಂದ ಎಲ್ಲರಿಗೂ ಹಿತಕರವಾಗಿರಲಿದೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಜತೆ ಉತ್ತಮ ಬಾಂಧವ್ಯ ಹೊಂದಿದ್ದೇನೆ. ಭಾರತವು ರಷ್ಯಾದಿಂದ ತೈಲ ಖರೀದಿಸುತ್ತಿದ್ದ ಹಿನ್ನೆಲೆ ಭಾರೀ ತೆರಿಗೆ ವಿಧಿಸಲಾಗಿದೆ. ಆದರೆ ಈಗ ಅವರು ರಷ್ಯಾ ತೈಲ ಖರೀದಿ ಕಡಿಮೆ ಮಾಡಿದ್ದಾರೆ. ಹೀಗಾಗಿ ಅವರ ಮೇಲೆ ಹೇರಲಾಗಿರುವ ತೆರಿಗೆ ಕಡಿಮೆ ಮಾಡಲಿದ್ದೇವೆ. ಭಾರತವು ಅಮೆರಿಕದ ಪಾಲಿಗೆ ಇಂಡೋ ಫೆಸಿಫಿಕ್ ಪ್ರದೇಶದಲ್ಲಿ, ಪ್ರಮುಖ ಆರ್ಥಿಕ ಮತ್ತು ಭದ್ರತಾ ಪಾಲುದಾರ ರಾಷ್ಟ್ರವಾಗಿದೆ ಎಂದು ಟ್ರಂಪ್ ಹೇಳಿದ್ದಾರೆ.
ಇನ್ನು, ಪ್ರಮಾಣ ವಚನ ಸ್ವೀಕರಿಸಿದ ನಂತರ ಮಾತನಾಡಿದ ಸೆರ್ಗಿಯೊ ಗೋರ್, ಉಭಯ ದೇಶಗಳ ನಡುವಿನ ಸಂಬಂಧ ವೃದ್ದಿ ಪಡಿಸಲು ಸೇವೆ ಸಲ್ಲಿಸುವ ನನಗೆ ಗೌರವ ಸಿಕ್ಕಿದೆ. ನಮ್ಮ ಎರಡು ರಾಷ್ಟ್ರಗಳ ನಡುವಿನ ಸಂಬಂಧವನ್ನು ಸುಧಾರಿಸಲು ನಾನು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ.

