Tuesday, November 18, 2025

Latest Posts

ನಿಜವಾದ ದೇಶಭಕ್ತ ಭಾರತೀಯರಿಗೆ ಯಾವಾಗಲೂ ‘ದೇಶ ಮೊದಲು’, ಉಳಿದದ್ದೆಲ್ಲವೂ ನಂತರ: ಸಿಎಂಗೆ ವಿಜಯೇಂದ್ರ ಟಾಂಗ್..?

- Advertisement -

Political News: ದೆಹಲಿಯಲ್ಲಿ ನಡೆದ ಸ್ಪೋಟದ ಬಗ್ಗೆ ಸಿಎಂ ಸಿದ್ದರಾಮಯ್ಯ, ಚುನಾವಣೆ ಸಮಯದಲ್ಲೇ ಯಾಕೆ ದಾಳಿಯಾಗುತ್ತದೆ ಎಂದು ಪ್ರಶ್ನಿಸಿದ್ದರು. ಅಲ್ಲದೇ ಹಲವು ಕಾಂಗ್ರೆಸ್ ನಾಯಕರು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ನಿಜವಾದ ದೇಶಭಕ್ತ ಭಾರತೀಯರಿಗೆ ಯಾವಾಗಲೂ ‘ದೇಶ ಮೊದಲು’, ಉಳಿದದ್ದೆಲ್ಲವೂ ನಂತರ ಎಂದಿದ್ದಾರೆ.

ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಪ್ರಬಲ ಸ್ಫೋಟದಲ್ಲಿ ಕನಿಷ್ಠ 12 ನಾಗರಿಕರು ಮೃತಪಟ್ಟು, ಹಲವರು ಗಾಯಗೊಂಡ ಭಯೋತ್ಪಾದಕ ಕೃತ್ಯದ ಬಗ್ಗೆ ತನಿಖೆ ನಡೆಯುತ್ತಿರುವಾಗಲೇ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರ, ಮತ್ತಿತರ ಕಾಂಗ್ರೆಸ್ ನಾಯಕರ ಬೇಜವಾಬ್ದಾರಿ, ಅಸಂವೇದನೀಯ, ಕೀಳು ರಾಜಕೀಯ ಹೇಳಿಕೆಗಳು ಖಂಡನೀಯ ಮಾತ್ರವಲ್ಲ ಆತಂಕಕಾರಿಯೂ ಆಗಿದೆ ಎಂದು ವಿಜಯೇಂದ್ರ ಹೇಳಿದ್ದಾರೆ.

ದೇಶದ ವಿರುದ್ಧ ನಡೆದಿರಬಹುದಾದ ಭಯೋತ್ಪಾದಕ ದಾಳಿಯ ಸಂದರ್ಭದಲ್ಲಿ ಇಡೀ ದೇಶ ಒಂದು ಧ್ವನಿಯಲ್ಲಿ ಮಾತನಾಡಬೇಕಾದ ಸೂಕ್ಷ್ಮ ಸಂದರ್ಭದಲ್ಲೂ ಇವರುಗಳು ಕೀಳು ಮಟ್ಟದ ರಾಜಕೀಯ ಮಾಡುತ್ತಿರುವುದು ರಾಜ್ಯದ ದುರಂತ, ದೇಶದ ದೌರ್ಭಾಗ್ಯ. ಕಾಂಗ್ರೆಸ್ ಪಕ್ಷಕ್ಕೆ ದೇಶದ ಭದ್ರತೆ, ನಾಗರಿಕರ ಸಾವು-ನೋವುಗಳು, ನಮ್ಮ ಸೈನಿಕರ ತ್ಯಾಗ, ರಾಷ್ಟ್ರೀಯ ಗೌರವಗಳಂತಹ ವಿಷಯಗಳೂ ಕೂಡ ಕೇವಲ ರಾಜಕೀಯ ಅಸ್ತ್ರವಾಗಿರುವುದು ನಿಜಕ್ಕೂ ಆತಂಕಕಾರಿಯಾಗಿದೆ ಎಂದು ಕಾಂಗ್ರೆಸ್ ವಿರುದ್ಧ ವಿಜಯೇಂದ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

2019ರ ಭೀಕರ ಪುಲ್ವಾಮಾ ದಾಳಿಯ ನಂತರವೂ ಕಾಂಗ್ರೆಸ್‌ ನಾಯಕರು, ಪಾಕಿಸ್ತಾನದ ಪ್ರಚಾರಕ್ಕೆ ಸಹಾಯವಾಗುವ ಹೇಳಿಕೆಗಳನ್ನು ನೀಡಿದ್ದನ್ನು ದೇಶ ಮರೆತಿಲ್ಲ. ಮುಖ್ಯಮಂತ್ರಿಗಳ ಈಗಿನ ಹೇಳಿಕೆ ಕೂಡ ಕಾಂಗ್ರೆಸ್‌ನ ಅದೇ ರಾಷ್ಟ್ರ ವಿರೋಧಿ ಪರಂಪರೆಯ ಮುಂದುವರಿಕೆಯಾಗಿದೆ. ದೇಶದ ಸಾರ್ವಭೌಮತೆ ಮತ್ತು ಭದ್ರತೆಗೆ ಧಕ್ಕೆ ಬಂದಾಗ ಇಡೀ ದೇಶ ಒಗ್ಗಟ್ಟಿನಿಂದ ನಿಲ್ಲಬೇಕು. ಇದನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವ ಕಾಂಗ್ರೆಸ್ ನಾಯಕರ ಧೋರಣೆ ಅವರ ಅಸಲಿಯತ್ತನ್ನು ಬಯಲು ಮಾಡಿದೆ. ಯುಪಿಎ ಅವಧಿಯಲ್ಲಿ (2004-2014) ಮುಂಬೈ ದಾಳಿ ಸೇರಿದಂತೆ ದೇಶದಲ್ಲಿ 45ಕ್ಕೂ ಅಧಿಕ ಬಾಂಬ್ ಸ್ಫೋಟ, ಉಗ್ರಕೃತ್ಯಗಳು ನಡೆದು ಸಾವಿರಾರು ಮಂದಿ ಸಾವನ್ನಪ್ಪಿದಾಗ, ಆಗಿನ ಅಸಮರ್ಥ ಕೇಂದ್ರ ಸರ್ಕಾರ ಪ್ರತಿ ಕ್ರಮಗಳೇನನ್ನೂ ತೆಗೆದುಕೊಳ್ಳದೆ ಇದ್ದಾಗಲೂ ದೇಶದ ಭದ್ರತೆ ವಿಷಯದಲ್ಲಿ ದೇಶ ಒಂದಾಗಿರಬೇಕೆಂದು ಆಗ ಪ್ರತಿಪಕ್ಷ ರಾಜಕೀಯ ನಡೆಸಲಿಲ್ಲ ಎಂದು ವಿಜಯೇಂದ್ರ ಹೇಳಿದ್ದಾರೆ.

ರಾಜ್ಯದ ಆಡಳಿತ ವೈಫಲ್ಯ, ಶೂನ್ಯ ಅಭಿವೃದ್ಧಿ ಮತ್ತು ಭ್ರಷ್ಟಾಚಾರದ ಮೇಲಿನ ಆರೋಪಗಳಿಗೆ ಉತ್ತರದಾಯಿಗಳಾಗಿರುವ ಮುಖ್ಯಮಂತ್ರಿಗಳು ಮತ್ತು ಆಡಳಿತ ಪಕ್ಷದ ನಾಯಕರು, ಜನರ ಗಮನ ಬೇರೆಡೆ ಸೆಳೆಯಲು ಹೀಗೆ ಅಗ್ಗದ ರಾಜಕೀಯ ತಂತ್ರವನ್ನು ಅನುಸರಿಸುತ್ತಿರುವುದನ್ನು ನೋಡಿ ಜನರೇ ಛೀಮಾರಿ ಹಾಕುತ್ತಿದ್ದಾರೆ.

ಮುಖ್ಯಮಂತ್ರಿಗಳು ತಮ್ಮ ಹೇಳಿಕೆಯನ್ನು ಕೂಡಲೇ ಹಿಂಪಡೆಯಬೇಕು. ಕಾಂಗ್ರೆಸ್‌ನ ದೇಶ-ವಿರೋಧಿ, ಸಂವೇದನಾರಹಿತ, ಕೀಳು ರಾಜಕೀಯಕ್ಕೆ ಬಿಹಾರದ ಜನತೆ ಉತ್ತರ ನೀಡುತ್ತಿರುವಂತೆಯೇ ರಾಜ್ಯದ ಜನರೂ ಕೂಡ ತಕ್ಕ ಉತ್ತರ ನೀಡಲಿದ್ದಾರೆ. ಇದು ಪಕ್ಷ ರಾಜಕಾರಣದ ಮಾತಲ್ಲ, ನಿಜವಾದ ದೇಶಭಕ್ತ ಭಾರತೀಯರಿಗೆ ಯಾವಾಗಲೂ ‘ದೇಶ ಮೊದಲು’, ಉಳಿದದ್ದೆಲ್ಲವೂ ನಂತರ ಎಂದು ಸಿಎಂ ಸಿದ್ದರಾಮಯ್ಯಗೆ ವಿಜಯೇಂದ್ರ ಟಾಂಗ್ ನೀಡಿದ್ದಾರೆ.

- Advertisement -

Latest Posts

Don't Miss