ಬಾಲಿವುಡ್‌ಗೆ ಮತ್ತೊಂದು ಆಘಾತ ಎದುರಾಗಿದೆ. ಖ್ಯಾತ ನಟ ಗೋವಿಂದಾ ಅವರ ಆರೋಗ್ಯ ಹದಗೆಟ್ಟಿದ್ದು, ಅವರನ್ನು ಮುಂಬೈನ ಜುಹು ಪ್ರದೇಶದ ಆಸ್ಪತ್ರೆಗೆ ದಾಖಲಿಸಲಾಗಿದೆ. 61 ವರ್ಷದ ನಟ ಗೋವಿಂದ ಮಂಗಳವಾರ ರಾತ್ರಿ ತಮ್ಮ ಮನೆಯಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ.
ರಾತ್ರಿ ಎರಡು ಬಾರಿ ಪ್ರಜ್ಞೆ ತಪ್ಪಿದ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಅವರ ಸ್ಥಿತಿ ಸ್ಥಿರವಾಗಿದೆ. ಪ್ರಸ್ತುತ ಅವರು ಐಸಿಯು ವಿಭಾಗದಲ್ಲಿ ವೈದ್ಯರ ನಿಗಾದಲ್ಲಿದ್ದಾರೆ. ಮೂಲಗಳ ಪ್ರಕಾರ, ನಟ ಗೋವಿಂದ ಇದ್ದಕ್ಕಿದ್ದಂತೆ ತಲೆತಿರುಗಿ ನೆಲಕ್ಕೆ ಬಿದ್ದರು. ವೈದ್ಯರು ತಕ್ಷಣ ಚಿಕಿತ್ಸೆ ನೀಡಿದ್ದು, ಪ್ರಸ್ತುತ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.
ಗೋವಿಂದ ಅವರಿಗೆ ಕಂಡುಬಂದ ಸಮಸ್ಯೆ ದಿಗ್ಭ್ರಮೆ. ಇದು ಪ್ರತ್ಯೇಕ ಕಾಯಿಲೆಯಲ್ಲ. ಮೆದುಳಿಗೆ ತಾತ್ಕಾಲಿಕವಾಗಿ ಆಮ್ಲಜನಕ ಕಡಿಮೆ ಸಿಗುವ ಲಕ್ಷಣವಾಗಿದೆ. ಇದರ ಪರಿಣಾಮವಾಗಿ ಕೆಲಕ್ಷಣಗಳ ಕಾಲ ಪ್ರಜ್ಞೆ ಕಳೆದುಕೊಳ್ಳುವುದು ಸಾಮಾನ್ಯ ಎಂದಿದ್ದಾರೆ.
ಇನ್ನು ನಟ ಗೋವಿಂದ ಆಸ್ಪತ್ರೆಗೆ ದಾಖಲಾದ ಬೆನ್ನಲ್ಲೇ ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ಅವರನ್ನು ಬುಧವಾರ ಬೆಳಿಗ್ಗೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಹೀಗಂತ ಸನ್ನಿ ಡಿಯೋಲ್ ತಂಡ ಮಾಧ್ಯಮಗಳಿಗೆ ದೃಢಪಡಿಸಿದೆ. ಧರ್ಮೇಂದ್ರ ಅವರನ್ನು ಕಳೆದ ತಿಂಗಳು ನಿಯಮಿತ ಆರೋಗ್ಯ ತಪಾಸಣೆಗಾಗಿ ದಾಖಲಿಸಲಾಗಿತ್ತು. ಅವರ ಮೇಲೆ ನಿಗಾ ಇಡಲಾಗಿದೆ ಎಂದು ಡಿಯೋಲ್ ಕುಟುಂಬದ ಆಪ್ತ ಮೂಲಗಳು ತಿಳಿಸಿವೆ.
ವರದಿ : ಲಾವಣ್ಯ ಅನಿಗೋಳ

