Outgoing ಸಿಎಂ ಸಿದ್ದರಾಮಯ್ಯನವರ ಅಸಹಾಯಕತೆ ನೋಡಿದರೆ ನಿಜಕ್ಕೂ ಕನಿಕರ ಮೂಡುತ್ತಿದೆ: ಆರ್.ಅಶೋಕ್

Political News: ರೈತರಿಗೆ 30 ದಿನದಲ್ಲಿ ನೆರೆಪರಿಹಾರ ನೀಡುತ್ತೇವೆ ಎಂದಿದ್ದ ರಾಜ್ಯ ಸರ್ಕಾರ ಇದುವರೆಗೂ ಪರಿಹಾರ ನೀಡಲಿಲ್ಲವೆಂಬ ಆರೋಪ ಕೇಳಿ ಬರುತ್ತಿದೆ. ವಿಪಕ್ಷಗಳಾದ ಬಿಜೆಪಿ, ಜೆಡಿಎಸ್ ನಾಯಕರು ರಾಜ್ಯ ಸರ್ಕಾರದ ವಿರುದ್ಧ ಈ ವಿಷಯವಾಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ವಿರೋಧ ಪಕ್ಷದ ನಾಯಕನಾಗಿರುವ ಆರ್.ಅಶೋಕ್ ಅವರು ಕೂಡ ಈ ಬಗ್ಗೆ ಕಿಡಿಕಾರಿದ್ದು, ಅಧಿಕಾರ ಹಸ್ತಾಂತರ, ಸಂಪುಟ ವಿಸ್ತರಣೆ, ಆರ್ ಎಸ್ಎಸ್ ನಿಷೇಧ, ಬುರುಡೆ ಪ್ರಕರಣ ಹೀಗೆ ಅನವಶ್ಯಕ ಗೊಂದಲಗಳಲ್ಲೇ ಮುಳುಗಿ ಕಾಲಹರಣ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ, ರೈತರನ್ನ ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಕಾಟಾಚಾರಕ್ಕೆ ವೈಮಾನಿಕ ಸಮೀಕ್ಷೆ ಮಾಡಿ 30 ದಿನಗಳೊಳಗೆ ನೆರೆ ಪರಿಹಾರ ಕೊಡುತ್ತೇವೆ ಎಂದು ಹೇಳಿದರಲ್ಲ ಸಿಎಂ ಸಿದ್ದರಾಮಯ್ಯನವರೇ, ಎಲ್ಲಿ ಹೋಯಿತು ನಿಮ್ಮ ನುಡಿಯಂತೆ ನಡೆಯುವ ಸರ್ಕಾರದ ಬದ್ಧತೆ? ಎಂದು ಅಶೋಕ್ ಪ್ರಶ್ನಿಸಿದ್ದಾರೆ.

ಪಾಪ ನೀವು ತಾನೇ ಏನು ಮಾಡುತ್ತೀರಿ ಬಿಡಿ. ಅತ್ತ ರಾಹುಲ್ ಗಾಂಧಿ ಅವರು ಭೇಟಿ ಮಾಡುವುದಕ್ಕೂ ಸಮಯ ಕೊಡುತ್ತಿಲ್ಲ. ಇತ್ತ ಬೆಂಗಳೂರಿನಲ್ಲಿ ರಸ್ತೆ ಗುಂಡಿ ಮುಚ್ಚಲು ಡೆಡ್ ಲೈನ್ ಮೇಲೆ ಡೆಡ್ ಲೈನ್ ಕೊಟ್ಟರೂ ಅಧಿಕಾರಿಗಳು ಕ್ಯಾರೆ ಅನ್ನುತ್ತಿಲ್ಲ. ಇನ್ನು ನೆರೆ ಪರಿಹಾರ, ಕಬ್ಬು, ಜೋಳ ಬೆಳೆಗಾರರಿಗೆ ಹೆಚ್ಚುವರಿ ಬೆಂಬಲ ಬೆಲೆ ಕೊಡಬೇಕು ಅಂದರೆ ನಿಮ್ಮ ಮಾತು ಯಾರು ಕೇಳುತ್ತಾರೆ? ಎಂದು ಅಶೋಕ್ ಪ್ರಶ್ನಿಸಿದ್ದಾರೆ.

Outgoing ಸಿಎಂ ಸಿದ್ದರಾಮಯ್ಯನವರ ಅಸಹಾಯಕತೆ ನೋಡಿದರೆ ನಿಜಕ್ಕೂ ಕನಿಕರ ಮೂಡುತ್ತಿದೆ ಎಂದು ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.

About The Author