Political News: ಐಸಿಸ್ ಉಗ್ರರಿಗೆ ಬೆಂಗಳೂರಿನಲ್ಲಿರುವ ಕೆಲವರು ಫಂಡಿಂಗ್ ಮಾಡುತ್ತಿದ್ದಾರೆಂಬ ಆರೋಪ ಕೇಳಿ ಬಂದಿದ್ದು, ರಾಜ್ಯ ಸರ್ಕಾರದ ಆಡಳಿತ ವೈಖರಿ ವಿರುದ್ಧ ಬಿಜೆಪಿ ಹಿರಿಯ ನಾಯಕ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದು ಕಾಲದಲ್ಲಿ ತಂತ್ರಜ್ಞಾನ, ಉದ್ಯಾನವನ, ಅಭಿವೃದ್ಧಿಗೆ ಹೆಸರಾಗಿದ್ದ ಬೆಂಗಳೂರಿನಲ್ಲಿ ಇಂದು ಐಸಿಸ್ ಉಗ್ರರಿಗೆ ಫಂಡಿಂಗ್ ನಡೆಯುತ್ತಿದೆ ಎನ್ನುವುದು ಆತಂಕಕಾರಿ ಬೆಳವಣಿಗೆ. ಐಸಿಸ್ ಉಗ್ರ ಸಂಘಟನೆಗೆ ಯುವಕರನ್ನು ಸೆಳೆಯಲು, ನೇಮಕಾತಿ ನಡೆಸಲು ರಾಜ್ಯದಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಇದನ್ನು ನಿಗ್ರಹಿಸಲು ಸೂಕ್ತ ಕ್ರಮ ಕೈಗೊಳ್ಳಬೇಕಿದ್ದ ಗೃಹ ಸಚಿವರು ಮಾತ್ರ ಟ್ವಿಟರ್‌ನಲ್ಲಿ ಟ್ರೋಲ್ ಮಾಡುತ್ತಾ, ಆರೆಸ್ಸೆಸ್ ಕುರಿತು ಹೇಳಿಕೆ ನೀಡುತ್ತಾ ಕಾಲ ಕಳೆಯುತ್ತಿದ್ದಾರೆ! ಎಂದು ಪ್ರಿಯಾಂಕ್ ಖರ್ಗೆ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಶಾಂತಿಗೆ ಹೆಸರಾದ ರಾಜಧಾನಿಯಲ್ಲಿ ಭಯೋತ್ಪಾದನೆಯ ಬೇರು ಬಿಡುತ್ತಿದೆ ಎಂದರೆ ಸರ್ಕಾರ ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ಬೆಂಗಳೂರನ್ನು ಭಯೋತ್ಪಾದನೆಯ ನೆಲೆಯಾಗದಂತೆ ತಡೆಗಟ್ಟಬೇಕು. ಭಯೋತ್ಪಾದಕರನ್ನೂ ಬ್ರದರ್ಸ್ ಎಂದು ಸಮರ್ಥಿಸಬೇಡಿ. ರಾಜ್ಯದ ಜನತೆ ಕಾಂಗ್ರೆಸ್ ಸರ್ಕಾರದ ಎಲ್ಲ ದುರ್ವ್ಯವಹಾರಗಳನ್ನು ಗಮನಿಸುತ್ತಿದ್ದಾರೆ! ಎಂದು ರವಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.




