ಬಿಹಾರ ರಾಜಕೀಯದಲ್ಲಿ ಹೊಸ ವಿವಾದ ಸೃಷ್ಟಿಯಾಗುವ ರೀತಿಯಲ್ಲಿ, RJD ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ರೋಹಿಣಿ ಆಚಾರ್ಯ ತಾನೀಗ ರಾಜಕೀಯವನ್ನು ತ್ಯಜಿಸುತ್ತೇನೆ ಮತ್ತು ಕುಟುಂಬವನ್ನೂ ಬಿಡುತ್ತಿದ್ದೇನೆ ಎಂದು ಘೋಷಣೆ ಮಾಡಿದ್ದಾರೆ. ಬಿಹಾರ ವಿಧಾನಸಭಾ ಚುನಾವಣೆಯಲ್ಲಿ RJD ಪಕ್ಷ ಭಾರೀ ಸೋಲು ಕಂಡ ಹಿನ್ನೆಲೆಯಲ್ಲಿ, ಕುಟುಂಬದೊಳಗೇ ತೀವ್ರ ವಾಗ್ವಾದ ನಡೆದಿರುವ ಮಾಹಿತಿ ಸದ್ಯ ಹೊರಬಿದ್ದಿದೆ.
ಮೂಲಗಳ ಪ್ರಕಾರ, ತೇಜಸ್ವಿ ಯಾದವ್ ಪಕ್ಷದ ಸೋಲಿಗೆ ತಮ್ಮ ಸಹೋದರಿ ರೋಹಿಣಿ ಆಚಾರ್ಯ ಅವರನ್ನೇ ಹೊಣೆ ಮಾಡುವ ಮೂಲಕ ಶನಿವಾರ ನಡೆದ ತೀವ್ರವಾದ ಚರ್ಚೆಯಲ್ಲಿ ಕೋಪಗೊಂಡಿದ್ದಾರೆ ಎನ್ನಲಾಗಿದೆ. ವಿವಾದದ ವೇಳೆ ತೇಜಸ್ವಿ, ನಿಮ್ಮಿಂದಾಗಿ ನಾವು ಚುನಾವಣೆಯಲ್ಲಿ ಸೋತಿದ್ದೇವೆ. ನಿಮ್ಮ ಹಾಯ್ ನಮ್ಮ ಮೇಲೆ ಬಿದ್ದಿದೆ ಎಂದು ಹೇಳಿ ತಮ್ಮ ಅಕ್ಕನ ಮೇಲೆ ಚಪ್ಪಲಿ ಎಸೆದು ನಿಂದಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಕುರಿತು ಎಕ್ಸ್‌ನಲ್ಲಿ ಮಾಡಿರುವ ನಿಗೂಢ ಪೋಸ್ಟ್‌ನಲ್ಲಿ, ತೇಜಶ್ವಿಯವರ ಆಪ್ತ ಸಹಾಯಕರಾಗಿರುವ ಆರ್‌ಜೆಡಿ ಹಿರಿಯ ನಾಯಕ ಸಂಜಯ್ ಯಾದವ್ ಮತ್ತು ತೇಜಶ್ವಿಯವರ ದೀರ್ಘಕಾಲದ ಸ್ನೇಹಿತ ಮತ್ತು ಅವರ ಕೋರ್ ತಂಡದ ಸದಸ್ಯ ರಮೀಜ್ ನೆಮತ್ ಖಾನ್ ಅವರು ಹಾಗೆ ಮಾಡಲು ಕೇಳಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಕಳೆದ ವರ್ಷದ ಲೋಕಸಭಾ ಚುನಾವಣೆಯಲ್ಲಿ ಸರನ್‌ನಿಂದ ಸ್ಪರ್ಧಿಸಿ ಸೋಲು ಕಂಡಿದ್ದ ರೋಹಿಣಿ ಆಚಾರ್ಯ ಅವರು, ಎಲ್ಲ ಆಪಾದನೆಗಳನ್ನು ನಾನು ಹೊರುತ್ತಿದ್ದೇನೆ ಎಂದು ಹೇಳಿದ್ದು, ಯಾವುದನ್ನೂ ನಿರ್ದಿಷ್ಟಪಡಿಸಿಲ್ಲ.
ಅದಾದ ಕೆಲವು ಗಂಟೆಗಳ ನಂತರ ಅವರ ಪೋಸ್ಟ್ ಬಗ್ಗೆ ವರದಿಗಾರರು ಪ್ರಶ್ನಿಸಿದಾಗ, ನನಗೆ ಈಗ ಕುಟುಂಬವಿಲ್ಲ. ಹೋಗಿ ಸಂಜಯ್, ರಮೀಜ್ ಮತ್ತು ತೇಜಸ್ವಿ ಯಾದವ್ ಅವರನ್ನು ಕೇಳಿ. ಸೋಲಿನ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಇಷ್ಟವಿಲ್ಲದ ಕಾರಣ ಅವರು ನನ್ನನ್ನು ಕುಟುಂಬದಿಂದ ಹೊರಗೆ ಹಾಕಿದ್ದಾರೆ ಎಂದಿದ್ದಾರೆ.
ನೀವು ಸಂಜಯ್ ಮತ್ತು ರಮೀಜ್ ಅವರ ಹೆಸರನ್ನು ಹೇಳಿದಾಗ, ನಿಮ್ಮನ್ನು ಮನೆಯಿಂದ ಹೊರಹಾಕಲಾಗುತ್ತದೆ. ನಿಮ್ಮ ಮಾನಹಾನಿ ಮಾಡಲಾಗುತ್ತದೆ ಮತ್ತು ನಿಮ್ಮ ಮೇಲೆ ಚಪ್ಪಲಿಯಿಂದ ಹಲ್ಲೆ ಮಾಡಲಾಗುತ್ತದೆ ಎಂದು ಅವರು ಆರೋಪಿಸಿದ್ದಾರೆ.
ವರದಿ : ಲಾವಣ್ಯ ಅನಿಗೋಳ

