Sunday, November 16, 2025

Latest Posts

ಡೇಟಿಂಗ್ ಆ್ಯಪ್ ಡೇಂಜರ್, ಲಾಡ್ಜ್‌ನಲ್ಲಿ ‘ಮಹಾ’ ಕುತಂತ್ರ!

- Advertisement -

ಹುಡ್ಗಿರ್ ಜೊತೆ ಡೇಟಿಂಗ್ ಮಾಡ್ತೀರಾ? ಡೇಟಿಂಗ್ ಆ್ಯಪ್‌ನಲ್ಲಿ ಚಾಟ್ ಮಾಡ್ತೀರಾ? ಹಾಗಾದ್ರೆ ಹುಷಾರ್. ಯಾಕಂದ್ರೆ ಇಲ್ಲೊಬ್ಬ ಯುವತಿ ಬೆಂಗಳೂರಿನಲ್ಲಿ ಡೇಟಿಂಗ್ ಆ್ಯಪ್‌ ಮೂಲಕ ಸ್ನೇಹ ಬೆಳೆಸಿಕೊಂಡ ಯುವಕನಿಗೆ ಲಾಡ್ಜ್‌ನಲ್ಲಿ ಬಲೆ ಬೀಸಿದ್ದಾಳೆ. 7 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿದ ಯುವತಿ ಬಂಧಿತೆಯಾಗಿರುವ ಪ್ರಕರಣ ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.

ಪೀಣ್ಯದ ನಾಗಸಂದ್ರದಲ್ಲಿರುವ ಪೇಯಿಂಗ್ ಗೆಸ್ಟ್‌ ನಲ್ಲಿ ವಾಸಿಸುತ್ತಿದ್ದ ಹಾಗೂ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ, ಎರಡು ತಿಂಗಳ ಹಿಂದೆ ‘ಹ್ಯಾಪನ್’ ಹೆಸರಿನ ಡೇಟಿಂಗ್ ಆ್ಯಪ್‌ನಲ್ಲಿ ಯುವತಿಯನ್ನು ಪರಿಚಯಿಸಿಕೊಂಡಿದ್ದ. ಬಳಿಕ ಇಬ್ಬರೂ ಮೊಬೈಲ್ ಸಂಖ್ಯೆ ವಿನಿಮಯ ಮಾಡಿಕೊಂಡು ನಿರಂತರವಾಗಿ ಮಾತನಾಡುತ್ತಿದ್ದರು.

ನವೆಂಬರ್ 1ರಂದು, ಇಂದಿರಾನಗರದ ರೆಸ್ಟೋರೆಂಟ್‌ನಲ್ಲಿ ಇಬ್ಬರೂ ಭೇಟಿಯಾಗಿ ಮದ್ಯಪಾನ ಮಾಡಿದ್ದಾರೆ. ನಂತರ ಪಿಜಿಗೆ ಹೋಗಲು ಸಾಧ್ಯವಿಲ್ಲ ಎಂದು ಹೇಳಿ, ಯುವತಿಯೇ ಲಾಡ್ಜ್‌ ಒಂದು ಬುಕ್ ಮಾಡಿದ್ದಳು. ಆನ್‌ಲೈನ್ ಮೂಲಕ ಆಹಾರ ತರಿಸಿಕೊಂಡು ಸೇವಿಸಿದ ನಂತರ, ಯುವತಿಯು ನೀಡಿದ ನೀರು ಕುಡಿದ ಬಳಿಕ ಯುವಕ ಪ್ರಜ್ಞೆ ಕಳೆದುಕೊಂಡಿದ್ದಾನೆ.

ಯುವಕ ಪ್ರಜ್ಞೆಗೆ ಬಂದು ನೋಡಿದಾಗ, ಚಿನ್ನದ ಸರ, ಚಿನ್ನದ ಕೈಬಳೆ,
ಒಟ್ಟು 58 ಗ್ರಾಂ ಚಿನ್ನಾಭರಣ, ಜೊತೆಗೆ ₹10,000 ನಗದು ದೋಚಲ್ಪಟ್ಟಿರುವುದು ತಿಳಿದುಬಂದಿದೆ. ತಕ್ಷಣ ಪೊಲೀಸರಿಗೆ ದೂರು ನೀಡಿದ ಬಳಿಕ ತನಿಖೆ ಆರಂಭಿಸಿದ ಇಂದಿರಾನಗರ ಪೊಲೀಸರು, ಆರೋಪಿಗಳಾದ ಕವಿಪ್ರಿಯಾ ಮತ್ತು ಹರ್ಷವರ್ಧನ್ ನಿವಾಸವನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.

ವಿಚಾರಣೆ ವೇಳೆ, ಇಬ್ಬರೂ ಪರಸ್ಪರ ಡೇಟಿಂಗ್ ಆ್ಯಪ್‌ ಮೂಲಕ ಪರಿಚಯವಾಗಿದ್ದು, ಸಂಬಂಧ ಹೊಂದಿದ್ದರು ಎನ್ನುವುದು ತಿಳಿದುಬಂದಿದೆ. ಐಷಾರಾಮಿ ಜೀವನದ ಆಸೆಗಾಗಿ ಸಾಲದ ಆ್ಯಪ್‌ಗಳಲ್ಲಿ ಹಣ ತೆಗೆದುಕೊಂಡಿದ್ದರು. ಸಾಲ ಮರುಪಾವತಿಸಲು ಸಾಧ್ಯವಾಗದೆ, ಡೇಟಿಂಗ್ ಆ್ಯಪ್‌ ಮೂಲಕ ಶ್ರೀಮಂತ ಯುವಕರನ್ನು ಗುರಿಯಾಗಿಸಿಕೊಂಡು ವಂಚನೆ ಮಾಡಲು ಯೋಜಿಸಿದ್ದರು. ಈಗ ಇಬ್ಬರ ವಿರುದ್ಧ ಕಳ್ಳತನ, ವಂಚನೆ ವಿಭಾಗಗಳಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸಲಾಗುತ್ತಿದೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss