Wednesday, November 19, 2025

Latest Posts

ಇಂದಿನಿಂದಲೇ ಉದ್ಯೋಗದಾತರಾಗುವತ್ತ ವಿದ್ಯಾರ್ಥಿಗಳು ಚಿಂತನಶೀಲರಾಗಬೇಕು

- Advertisement -

Bengaluru News: ಇಂದಿನ ಯುವಪೀಳಿಗೆ ಉದ್ಯೋಗ ಅರಸುವ ಮನಸ್ಥಿತಿಯಿಂದ ಹೊರ ಬಂದು ಸ್ವಂತ ಉದ್ಯಮ ಸ್ಥಾಪಿಸಿ ಉದ್ಯೋಗದಾತರಾಗುವತ್ತ ಹೆಚ್ಚು ಗಮನ ಹರಿಸಬೇಕಾದ ಅವಶ್ಯಕತೆಯಿದೆ ಎಂದು ಮೀಡಿಯಾ ಕನೆಕ್ಟ್ ಸಂಸ್ಥೆಯ ಸಂಸ್ಥಾಪಕಿ ಹಾಗೂ ಸಿಇಒ ದಿವ್ಯಾ ರಂಗೇನಹಳ್ಳಿ ಅಭಿಪ್ರಾಯಪಟ್ಟರು.

ನಗರದ ರಾಜಾಜಿನಗರದಲ್ಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಕೆಎಲ್ ಇ ಸೊಸೈಟಿಯ ಎಸ್ ನಿಜಲಿಂಗಪ್ಪ ಕಾಲೇಜ್ ಆಯೋಜಿಸಿದ್ದ ಅಂತರ್ ಕಾಲೇಜ್ ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಮನರಂಜನಾ ಸ್ಫರ್ಧಾ ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿ ಸಾಧನೆಯ ಹಿಂದೆ ಒಂದು ದೊಡ್ಡ ಹೋರಾಟವಿರುತ್ತದೆ. ಶಿಸ್ತು, ಬದ್ಧತೆ ಮತ್ತು ಛಲವಿದ್ದರೆ ಜೀವನದಲ್ಲಿ ಅಂದುಕೊಂಡಿದ್ದನ್ನ ಸಾಧಿಸಬಹುದು. ಅದಕ್ಕಾಗಿ ಹೇರಳ ಅವಕಾಶಗಳು ಇಂದು ನಿಮ್ಮ ಮುಂದಿವೆ. ತಂತ್ರಜ್ಞಾನ ಮತ್ತು ವಿನೂತನ ಆವಿಷ್ಕಾರಗಳನ್ನ ಅರ್ಥ ಮಾಡಿಕೊಂಡರೆ ಉದ್ಯಮ ರಂಗದಲ್ಲಿ ಅನೇಕ ಅವಕಾಶಗಳು ತೆರೆದುಕೊಳ್ಳಲಿವೆ. ಆ ನಿಟ್ಟಿನಲ್ಲಿ ಇಂದಿನ ಯುವ ಪೀಳಿಗೆ ಯೋಚಿಸಬೇಕು. ಮಹಿಳೆಗೂ ಕೂಡಾ ಇಂದು ಸಮಾನ ಅವಕಾಶಗಳು ಸಿಗುತ್ತಿವೆ. ಅಸಾಧ್ಯವಾದುದೆಲ್ಲವನ್ನ ಸಾಧಿಸುವತ್ತ ಮುನ್ನಡೆಯುತ್ತಿದ್ದಾರೆ. ಸವಾಲುಗಳನ್ನ ಎದುರಿಸಿ ಮುನ್ನುಗ್ಗುವ ಛಾತಿಯನ್ನ ಯುವತಿಯರು ಹೊಂದಬೇಕು. ರೂಢಿಗತವಾಗಿದ್ದನ್ನ ಬದಿಗೊತ್ತಿ ಹೊಸ ಸಾಧ್ಯತೆಗಳನ್ನ ಕೈಗೊಳ್ಳುವತ್ತ ಯೋಚಿಸಬೇಕು. ಕಾಲೇಜು ವಿದ್ಯಾರ್ಥಿನಿಯರು ಇಂದು ನಮ್ಮ ಮುಂದಿರುವ ಅನೇಕ ಮಹಿಳಾ ಸಾಧಕಿಯರನ್ನ ಸ್ಫೂರ್ತಿಯಾಗಿ ತೆಗೆದುಕೊಳ್ಳಬೇಕು ಎಂದು ಹೇಳಿದರು.

ಜೀವನದಲ್ಲಿ ಸೋಲು, ಗೆಲುವುಗಳು ಮುಖ್ಯವಲ್ಲ. ಬದುಕನ್ನ ಪ್ರತಿ ದಿನವೂ ಸಂಭ್ರಮದಿಂದ ಕಳೆಯುವುದರತ್ತ ಯೋಚಿಸಬೇಕಿದೆ. ಸಣ್ಣ ವಿಷಯಗಳಿಗೂ ಇಂದಿನ ಯುವ ಜನಾಂಗ ಅಧೀರರಾಗುತ್ತಿದ್ದಾರೆ. ಆದರೆ ಬದುಕನ್ನು ಸದಾ ಖುಷಿಯಿಂದ ಕಳೆಯಬೇಕು. ಅದಕ್ಕೆ ಆದರ್ಶವಾಗಿ ಸದಾ ನಮ್ಮ ಮುಂದೆ ಪುನೀತ್‌ ರಾಜ್‌ಕುಮಾರ್‌ ಅವರಿರುತ್ತಾರೆ. ಅವರು ತಮ್ಮ ಪ್ರತಿ ಸಂದರ್ಶನದಲ್ಲೂ ಜೀವನ ಪ್ರೀತಿಯ ಬಗ್ಗೆಯೇ ಮಾತನಾಡುತ್ತಿದ್ದರು. ಬದುಕನ್ನು ಸಂಭ್ರಮದಿಂದ ಕಳೆಯಬೇಕು ಎಂಬುದಕ್ಕೆ ನಮಗೆ ಅವರಿಗಿಂತ ದೊಡ್ಡ ರೋಲ್‌ ಮಾಡೆಲ್‌ ಇಲ್ಲ. ವಿದ್ಯಾರ್ಥಿಗಳು ಇಂದು ಅಂಥಹ ಸ್ವಭಾವವನ್ನ ಮೈಗೂಡಿಸಿಕೊಳ್ಳಬೇಕಿದೆ. ಹಾಗಾದಾಗ ಬದುಕಿನಲ್ಲಿ ಎಂಥಹ ಕಷ್ಟಗಳನ್ನ ಬೇಕಾದರೂ ಸಲೀಸಾಗಿ ಎದುರಿಸಬಹುದು. ಸದ್ಯ ಕಾಲೇಜು ಈ ಕಾರ್ಯಕ್ರಮದಲ್ಲಿ ಆಯೋಜಿಸಿರುವ ಸ್ಪರ್ಧೆಗಳು ಯುವಕರನ್ನ ಅಂಥಹ ಸಾಧನೆಯೆಡೆಗೆ ಪ್ರೇರೇಪಿಸಲು ಪೂರಕವಾಗಿವೆ. ಸಾಕಷ್ಟು ಕ್ರಿಯಾಶೀಲವಾಗಿ ಯೋಚಿಸಲು ಅವಕಾಶ ಮಾಡಿಕೊಡುತ್ತವೆ. ಇದೊಂದು ಅರ್ಥಪೂರ್ಣ ಕಾರ್ಯಕ್ರಮ. ನಾನು ಇದರ ಭಾಗವಾಗಿದ್ದಕ್ಕೆ ಹೆಮ್ಮೆಯಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಹಾಯಕ ಪೊಲೀಸ್‌ ಆಯುಕ್ತರಾದ ಚಂದನ್‌ ಕುಮಾರ್‌ ಸೇರಿದಂತೆ ಕಾಲೇಜಿನ ಪ್ರಾಂಶುಪಾಲರು ಹಾಗೂ ಭೋಧಕ ವರ್ಗ ಹಾಗೂ ವಿವಿಧ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

- Advertisement -

Latest Posts

Don't Miss