Wednesday, November 19, 2025

Latest Posts

Health Tips: ಅತೀಯಾದ ಆಂಟಿಬಯೋಟಿಕ್‌ ಔಷಧಿಗಳ ಬಳಕೆ ಮಕ್ಕಳ ಆರೋಗ್ಯಕ್ಕೆ ಮಾರಕ: ಡಾ. ಅಶೋಕ್‌ ಎಂ.ವಿ

- Advertisement -

Health Tips: ಅತಿಯಾದ ಆಂಟಿಬಯೋಟಿಕ್‌ ಔಷಧಿಗಳ ಬಳಕೆ ಮಕ್ಕಳ ಆರೋಗ್ಯಕ್ಕೆ ಮಾರಕ ಎಂದು ಬೆಂಗಳೂರಿನ ವಾಸವಿ ಆಸ್ಪತ್ರೆಯ ಮಕ್ಕಳ ತಜ್ಞರಾದ ಡಾ. ಅಶೋಕ್‌ ಎಂ.ವಿ. ಹೇಳಿದ್ದಾರೆ.

ಪ್ರತಿ ವರ್ಷ ನವೆಂಬರ್‌ 18 ರಿಂದ 24ರ ವರೆಗೆ ಆಂಟಿಬಯೋಟಿಕ್‌ ಜಾಗೃತಿ ಸಪ್ತಾಹವನ್ನು ಆಚರಿಸಲಾಗುತ್ತದೆ. ಈ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಾಹಿತಿ ಹಂಚಿಕೊಂಡ ತಜ್ಞ ಡಾ. ಅಶೋಕ್‌, ಆಂಟಿಬಯೋಟಿಕ್‌ ಎಂದರೆ ಪ್ರತಿಜೀವಕ ಎಂದು ಕರೆಯಲಾಗುತ್ತದೆ. ರೋಗಾಣುಗಳ ವಿರುದ್ಧ ಹೋರಾಡಲು ಬಳಸುವ ಔಷಧಿ. ಆಂಟಿಬಯೋಟಿಕ್ ಬಳಕೆ ಹೆಚ್ಚಾದಲ್ಲಿ ಮತ್ತು ಅನಗತ್ಯವಾಗಿ ಬಳಕೆ ಮಾಡಿದಾಗ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಪೋಷಕರು ಈ ಕುರಿತು ಹೆಚ್ಚು ಕಾಳಜಿಸವಹಿಸಬೇಕು. ಸಾಮಾನ್ಯವಾಗಿ ಬಳಸಲಾಗುವ ಔಷಧಿಗಳು ಹೆಚ್ಚು ಕಾಲ ಪ್ರಭಾವ ಬೀರದ ಹಿನ್ನೆಲೆಯಲ್ಲಿ ವೈದ್ಯರು ದ್ವಿತೀಯ ಮತ್ತು ತೃತೀಯ ಶ್ರೇಣಿಯ ಆಂಟಿಬಯೋಟಿಕ್‌ಗಳನ್ನು ನೀಡುವ ಅನಿವಾರ್ಯತೆ ಹೆಚ್ಚಾಗುತ್ತಿದೆ. ವೈದ್ಯರು ಆಂಟಿಬಯೋಟಿಕ್‌ಗಳ ಬಳಕೆಗೆ ಸಲಹೆ ನೀಡುತ್ತಿರುವುದು ಮತ್ತು ಪೋಷಕರು ಸ್ವಯಂ ನಿರ್ಧಾರ ತೆಗೆದುಕೊಂಡು ಹೆಚ್ಚಿನ ಬಳಕೆ ಮಾಡುತ್ತಿರುವುದು ಅಪಾಯಕ್ಕೆ ದಾರಿ ಮಾಡಿಕೊಡುತ್ತಿದೆ ಎಂದು ತಜ್ಞರು ಹೇಳಿದರು.

ಬಹುತೇಕ ಸಂದರ್ಭಗಳಲ್ಲಿ ವೈದ್ಯರು ಸೂಚಿಸಿದ ಕೋರ್ಸ್‌ ಅವಧಿಯನ್ನು ಪೂರ್ಣಗೊಳಿಸದಿರುವುದು ಕೂಡ ಅಪಾಯಕ್ಕೆ ಕಾರಣ. ಉದಾಹರಣೆಗೆ ವೈದ್ಯರು ಸೂಚಿಸಿದ 5 ಮಿಲಿ ಡೋಸ್‌ ಬದಲಿಗೆ 2 ಅಥವಾ 3 ಮಿಲಿ ಬಳಸುವುದು ಅಥವಾ ಐದು ದಿನಗಳ ಕೋರ್ಸ್‌ ಅವಧಿಯಲ್ಲಿ ಔಷಧಿ ಬಳಕೆ ಸೂಚಿಸಿದಾಗ ಅರ್ಧಕ್ಕೆ ಮೊಟಕುಗೊಳಿಸುವುದು. ಈ ರೀತಿ ಮಾಡಿದಾಗ ರೋಗ ನಿರೋಧಕ ಬ್ಯಾಕ್ಟೀರಿಯಾಗಳು ಬದುಕುಳಿಯಲು, ದುಪ್ಪಟ್ಟಾಗಲು ಮತ್ತು ಪ್ರತಿರೋಧವನ್ನು ಬೆಳೆಸಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಇದರಿಂದಾಗಿ ಆರಂಭಿಕವಾಗಿ ನೀಡಿದ ಚಿಕಿತ್ಸೆಯು ನಿಷ್ಪ್ರಯೋಜನವಾಗುತ್ತದೆ, ಆಗ ಆರೋಗ್ಯ ಸಮಸ್ಯೆಯನ್ನು ಗುಣಪಡಿಸಲು ಹೆಚ್ಚಿನ ಆಂಟಿಬಯೋಟಿಕ್‌, ಇಂಟ್ರಾವೆನಸ್ (IV) ನೀಡುವಿಕೆ ಅಥವಾ ಆಸ್ಪತ್ರೆಗೆ ದಾಖಲಾಗುವ ಅನಿವಾರ್ಯತೆ ಎದುರಾಗಬಹುದು ಎಂದು ಡಾ. ಅಶೋಕ್‌ ಎಂ.ವಿ. ವಿವರಿಸಿದರು.

ಆಂಟಿಬಯೋಟಿಕ್‌ ಔಷಧಿಗಳ ಪ್ರಭಾವವು ದೀರ್ಘಾವಧಿಯವರೆಗೆ ಪರಿಣಾಮ ಬೀರಬಹುದು. ಏಕೆಂದರೆ ಜಾಗತಿಕವಾಗಿ ಹೊಸ ಔಷಧಿಗಳ ಅಭಿವೃದ್ಧಿ ಕಡಿಮೆಯಿದ್ದು, ಕಳೆದ ಕೆಲವು ವರ್ಷಗಳಿಂದ ಹೊಸ ಆಂಟಿಬಯೋಟಿಕ್‌ಗಳ ಸಂಶೋಧನೆ ಸೀಮಿತವಾಗಿದೆ. ಹೀಗಾಗಿ ಈಗಾಗಲೆ ಬಳಕೆಯಲ್ಲಿರುವ ಔಷಧಿಗಳನ್ನು ಹೆಚ್ಚು ಬಳಕೆ ಮಾಡಲಾಗುತ್ತಿದೆ. ಮಗುವಿಗೆ ಚಿಕಿತ್ಸೆ ನೀಡಲು ಬೇರೆ ಆಯ್ಕೆ ಇಲ್ಲದಿದ್ದಾಗ ಮತ್ತು ಅಗತ್ಯವಿದ್ದಾಗ ಮಾತ್ರ ಆಂಟಿಬಯೋಟಿಕ್ ಬಳಕೆಯನ್ನು ವೈದ್ಯರು ಶಿಫಾರಸು ಮಾಡಬೇಕು. ಅಲ್ಲದೆ ಪೋಷಕರು ಸ್ವಯಂ ನಿರ್ಧರಿಸಿ ಚಿಕಿತ್ಸೆಗೆ ಮುಂದಾಗುವುದು ಮತ್ತು ವೈದ್ಯರು ಸೂಚಿಸಿದ ಕೋರ್ಸ್ ಅವಧಿಯನ್ನು ಪೂರ್ಣಗೊಳಿಸದೆ ಅರ್ಧಕ್ಕೆ ಮೊಟಕುಗೊಳಿಸುವುದನ್ನು ತಪ್ಪಿಸಬೇಕು. ಆಂಟಿಬಯೋಟಿಕ್ಗಳ ಅತಿಯಾದ ಬಳಕೆಯು ಮಕ್ಕಳ ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ದೀರ್ಘಾವಧಿಯಾಗಿ ಪರಿಣಾಮ ಬೀರಬಹುದು ಎನ್ನುತ್ತಾರೆ ತಜ್ಞರು.

ಪೋಷಕರು ತಿಳಿಯಬೇಕಾದ ವಿಷಯವೆಂದರೆ ಎಲ್ಲಾ ಔಷಧಿಗಳಂತೆ ಆಂಟಿಬಯೋಟಿಕ್ಗಳಲ್ಲೂ ಸಹ ಅಡ್ಡಪರಿಣಾಮಗಳಿರುತ್ತವೆ, ಅವುಗಳೆಂದರೆ ಜಠರದಲ್ಲಿನ ಕರುಳು ಉರಿಯೂತ (gastroenteritis), ತಲೆನೋವು ಅಥವಾ ದದ್ದು ಉಂಟಾಗುವುದು. ಈ ರೀತಿಯ ಲಕ್ಷಣಗಳು ಕಂಡೊಡನೆ ವೈದ್ಯರನ್ನು ಭೇಟಿ ಮಾಡುವುದು ಒಳಿತು. ವೈದ್ಯರು ಯಾವುದೇ ಆಂಟಿಬಯೋಟಿಕ್ ಔಷಧಿಗಳನ್ನು ನೀಡುವ ಮುನ್ನ ಪರೀಕ್ಷಿಸಿ ನೀಡಿದರೆ ಅಡ್ಡಪರಿಣಾಮಗಳನ್ನು ತಡೆಗಟ್ಟಬಹುದು. ಆಂಟಿಬಯೋಟಿಕ್ ಅಂದರೆ ಕೆಟ್ಟದ್ದು ಎನ್ನುವ ತಪ್ಪು ಕಲ್ಪನೆ ಇದೆ, ಆದರೆ ಅದು ಹಾಗಲ್ಲ ಬ್ಯಾಕ್ಟೀರಿಯಾದಂತಹ ಸೋಂಕುಗಳಿಗೆ ಅಗತ್ಯವಿದ್ದಾಗ ವೈದ್ಯರ ಮಾರ್ಗದರ್ಶನದೊಂದಿಗೆ ಸಂಪೂರ್ಣ ಅವಧಿಯ ಆಂಟಿಬಯೋಟಿಕ್ ಔಷಧಿಗಳನ್ನು ತೆಗೆದುಕೊಂಡರೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ವಾಸವಿ ಆಸ್ಪತ್ರೆಯ ಮಕ್ಕಳ ತಜ್ಞರಾದ ಡಾ. ಅಶೋಕ್ ಎಂ.ವಿ ಸಲಹೆ ನೀಡಿದ್ದಾರೆ.

- Advertisement -

Latest Posts

Don't Miss