ಅಂಧರ ಬಾಳಿಗೆ ಹೊಸ ಬೆಳಕು – ಸಂತೋಷ್‌ ಲಾಡ್‌ ಫೌಂಡೇಶನ್‌

ಸೇವಾ ಚಟುವಟಿಕೆಗಳ ಕ್ಷೇತ್ರದಲ್ಲಿ ಸದಾ ಸಕ್ರಿಯವಾಗಿರುವ ಸಂತೋಷ್ ಲಾಡ್ ಫೌಂಡೇಶನ್, ಸಹಾಯ ಕೇಳಿ ಬರುವ ಯಾರನ್ನೂ ಖಾಲಿಹಸ್ತರನ್ನಾಗಿ ಕಳಿಸದ ಸಂಸ್ಥೆಯಾಗಿ ರಾಜ್ಯದಾದ್ಯಂತ ಹೆಸರಾಗಿದೆ. ಧಾರವಾಡ ಜಿಲ್ಲೆಯ ಉಸ್ತುವಾರಿ ಮತ್ತು ಕಾರ್ಮಿಕ ಸಚಿವರಾದ ಸಂತೋಷ್ ಎಸ್. ಲಾಡ್ ಅವರ ಮಾರ್ಗದರ್ಶನದಲ್ಲಿ, ಫೌಂಡೇಶನ್ ಹಲವು ಮಾನವೀಯ ಕಾರ್ಯಗಳನ್ನು ವರ್ಷಗಳಿಂದ ನಿರಂತರವಾಗಿ ನಡೆಸುಕೊಂಡು ಬರುತ್ತಿದೆ.

ಇದೀಗ ತಂತ್ರಜ್ಞಾನವನ್ನು ಸೇವೆಗೆ ಜೋಡಿಸುವ ಮತ್ತೊಂದು ಮಹತ್ವದ ಹೆಜ್ಜೆಯಾಗಿ, ಫೌಂಡೇಶನ್ AI ಆಧಾರಿತ ಕನ್ನಡಕಗಳನ್ನು ಅಂಧರಿಗೆ ವಿತರಿಸುವ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ. ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದಲ್ಲಿ ಇತ್ತೀಚೆಗೆ 38 ಮಂದಿಗೆ ಈ ಕನ್ನಡಕಗಳನ್ನು ವಿತರಿಸಲಾಗಿದ್ದು, ಸಚಿವ ಸಂತೋಷ್ ಲಾಡ್ ಹಾಗೂ ಪಬ್ಲಿಕ್ ಟಿವಿ ಮುಖ್ಯಸ್ಥ ರಂಗನಾಥ್ ಉಪಸ್ಥಿತರಿದ್ದರು.

ಸ್ಮಾರ್ಟ್ ವಿಷನ್ ಗ್ಲಾಸ್ ಎಂದು ಕರೆಯಲಾಗುವ ಈ ಕನ್ನಡಕ ಅಮೆರಿಕಾದ ಅತ್ಯಾಧುನಿಕ ತಂತ್ರಜ್ಞಾನದಿಂದ ರೂಪಿತ. ಸೆನ್ಸಾರ್‌ಗಳ ಸಹಾಯದಿಂದ, ಸುತ್ತಮುತ್ತ ಇರುವ ವಸ್ತುಗಳು, ವಾಹನಗಳು, ಜನರು ಹಾಗೂ ಅಡೆತಡೆಗಳನ್ನು ಅಂಧರಿಗೆ ವಾಯ್ಸ್ ಕಮ್ಯಾಂಡ್ ಮುಖಾಂತರ ತಿಳಿಸುತ್ತದೆ. ಬಳಸುವವರು ಆಂಡ್ರಾಯ್ಡ್ ಅಥವಾ ಐಫೋನ್ ಮೊಬೈಲ್‌ನಲ್ಲಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡರೆ, ಈ ಕನ್ನಡಕ ತಕ್ಷಣ ಕೆಲಸ ಶುರು ಮಾಡುತ್ತದೆ.

ಈ ಕನ್ನಡಕದ ಮುಖ್ಯ ಗುರಿ—ಅಂಧರಿಗೆ ದಿನನಿತ್ಯ ಜೀವನವನ್ನು ಸುರಕ್ಷಿತ, ಸುಲಭ ಮತ್ತು ಸ್ವಾವಲಂಬಿ ಮಾಡುವುದು. ರಸ್ತೆ ದಾಟುವಾಗ ವಾಹನಗಳ ಚಲನೆ ತಿಳಿಸುವುದು, ಕಟ್ಟಡಗಳಲ್ಲಿ ನ್ಯಾವಿಗೇಟ್ ಮಾಡುವುದು, ಎದುರಿನ ವ್ಯಕ್ತಿಯ ಮುಖಭಾವ ತಿಳಿಸುವುದು, ಫೋನ್ ಕಾಲ್ ಬಂದರೆ ಯಾರು ಕರೆ ಮಾಡ್ತಿದ್ದಾರೆ ಎಂಬುದನ್ನೂ ತಕ್ಷಣ ಧ್ವನಿಯಲ್ಲಿ ಹೇಳುವುದು—ಇವೆಲ್ಲ ಇದರ ಪ್ರಮುಖ ವೈಶಿಷ್ಟ್ಯಗಳು.

ಅಂಧರು ಹೆಚ್ಚಾಗಿ ನೋಡುವ ಸಮಸ್ಯೆ ಹಣ ಗುರುತಿಸುವುದು. ನೋಟಿನ ಮೌಲ್ಯ ತಿಳಿಯದೆ ತಪ್ಪು ವ್ಯವಹಾರ ಆಗುವ ಸಾಧ್ಯತೆ ಹೆಚ್ಚು. ಆದರೆ ಈ ಎಐ ಗ್ಲಾಸ್ ನೋಟಿನ ಮೌಲ್ಯವನ್ನು ನಿಖರವಾಗಿ ಗುರುತಿಸಿ ಹೇಳುತ್ತದೆ. ವ್ಯಾಪಾರದಲ್ಲಿ ಕೊಟ್ಟ ಚಿಲ್ಲರೆ ಸರಿಯಾಗಿದೆಯೇ ಎಂಬುದನ್ನೂ ತಿಳಿಸುವ ಸಾಮರ್ಥ್ಯ ಇದಕ್ಕಿದೆ. ಜೊತೆಗೆ ಸೂಚನಾ ಫಲಕಗಳನ್ನು ಓದಿ ಹೇಳುವುದು, ಬೇರೆ ಭಾಷೆಯ ಬೋರ್ಡ್‌ಗಳನ್ನು ಸ್ಥಳೀಯ ಭಾಷೆಗೆ ಅನುವಾದಿಸಿ ಹೇಳುವುದು, ಪುಸ್ತಕಗಳನ್ನು ಓದಿ ಕೇಳಿಸುವುದು ಇದು ಅಂಧರಿಗೆ ಸಂಪೂರ್ಣ ಹೊಸ ಅನುಭವಾಗಿರುತ್ತದೆ.

ಸಾಮಾನ್ಯ ದೃಷ್ಟಿ ದೋಷವಿರುವವರು ಧರಿಸುವ ಕನ್ನಡಕ ಗಾತ್ರದಲ್ಲೇ ಇರುವ ಈ ಎಐ ಕನ್ನಡಕ, ತೂಕದಲ್ಲೂ ಹಗುರ. ಬ್ಲೂಟೂತ್ ಸಂಪರ್ಕದಿಂದ ಕೆಲಸ ಮಾಡುವ ಈ ಸಾಧನವನ್ನು ಮೊಬೈಲ್‌ನಂತೆ ಚಾರ್ಜ್ ಮಾಡಬೇಕಾಗುತ್ತದೆ. ಒಮ್ಮೆ ಒಬ್ಬರ ಹೆಸರಿನಲ್ಲಿ ನೋಂದಾಯಿಸಿದ ನಂತರ ಅದನ್ನು ಬೇರೆ ಯಾರೂ ಬಳಸಲು ಸಾಧ್ಯವಿಲ್ಲ. ಅಂದರೆ, ಇದು ಸಂಪೂರ್ಣ ವೈಯಕ್ತಿಕ ತಂತ್ರಜ್ಞಾನ.

ಇನ್ನು ಎಐ ಕನ್ನಡಕ ಪಡೆದ ಅಂಧರು ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ. ಹೊರಗೆ ಹೋಗುವುದು, ರಸ್ತೆ ದಾಟುವುದು, ಜನರ ಜೊತೆ ಮಾತನಾಡುವುದು. ಇವನ್ನೆಲ್ಲ ನಾವು ಈಗ ಆತಂಕವಿಲ್ಲದೆ ಮಾಡ್ತಿದ್ದೇವೆ. ಓದಿ ಹೇಳುವುದು ಹೊಸ ಜಗತ್ತಿಗೆ ನಮ್ಮನ್ನು ಕರೆದೊಯ್ತು. ನಮಗೆ ಹೊಸ ಬದುಕು ಕೊಟ್ಟಂತಾಗಿದೆ ಎಂದು ಬೆಂಗಳೂರಿನ ಹೆಗ್ಗನಹಳ್ಳಿಯ ತ್ರಿಶಕ್ತಿ ಟ್ರಸ್ಟ್‌ನ ಅಂಧರು ಹೇಳಿದ್ದಾರೆ. ಮತ್ತೊಬ್ಬರು ಕಾದಂಬರಿ ಓದುತ್ತಾ, ಹೊಸ ಭಾಷೆಗಳು ಕಲಿಯುತ್ತಾ ಇದ್ದೀನಿ. ಇದರಿಂದ ನನ್ನ ಜೀವನವೇ ಬದಲಾಗುತ್ತಿದೆ ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

About The Author