ಕರ್ನಾಟಕದಲ್ಲಿ ಅಂಗನವಾಡಿ ಆರಂಭವಾಗಿ 50 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ, ನವೆಂಬರ್ 28ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಭವ್ಯ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೂರು ಪ್ರಮುಖ ಯೋಜನೆಗಳಿಗೆ ಚಾಲನೆ ನೀಡಲು ಸಜ್ಜಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ.
ರಾಮನಗರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಐಸಿಡಿಎಸ್ ಸುವರ್ಣ ಮಹೋತ್ಸವ, ಅಕ್ಕಪಡೆ ಯೋಜನೆ ಲೋಕಾರ್ಪಣೆ, ಗೃಹಲಕ್ಷ್ಮಿ ಬ್ಯಾಂಕ್ ಆರಂಭ—ಈ ಮೂರು ಯೋಜನೆಗಳು ಇತಿಹಾಸ ನಿರ್ಮಾಣ ಮಾಡುವ ಕಾರ್ಯಕ್ರಮವಾಗಲಿದೆ ಎಂದು ಹೇಳಿದ್ದಾರೆ.
1975ರಲ್ಲಿ ಇಂದಿರಾ ಗಾಂಧಿಯವರು ಮೈಸೂರು ಜಿಲ್ಲೆಯಲ್ಲಿ ಅಂಗನವಾಡಿ ಆರಂಭಿಸಿದ ಬಳಿಕ, ಇದು ಮಕ್ಕಳ ಪೌಷ್ಠಿಕತೆ ಮತ್ತು ಶಿಕ್ಷಣಕ್ಕೆ ಮಹತ್ತರ ಕೊಡುಗೆ ನೀಡಿದ ಯೋಜನೆ ಎಂದು ಅವರು ಸ್ಮರಿಸಿದರು. 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ, ಈ ಬಾರಿ ಎಲ್ಕೆಜಿ-ಯುಕೆಜಿ ಮಾದರಿಯ ಹೊಸ ಶಿಕ್ಷಣ ಯೋಜನೆಗಳನ್ನೂ ಆರಂಭಿಸಲಾಗುತ್ತಿದೆ.
ಕಾಂಗ್ರೆಸ್ ಅಂದರೆ ಗ್ಯಾರಂಟಿ ಸರ್ಕಾರ. ಮಹಿಳೆಯರ ಪರ ಹಲವು ಕಲ್ಯಾಣ ಯೋಜನೆಗಳನ್ನು ನಾವು ನಿರಂತರವಾಗಿ ಜಾರಿಗೊಳಿಸುತ್ತಿದ್ದೇವೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನೇತೃತ್ವದ ನಮ್ಮ ಸರ್ಕಾರ 2028ರಲ್ಲಿಯೂ ಮುಂದುವರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಗೃಹಲಕ್ಷ್ಮಿ ಯೋಜನೆಯ ಯಶಸ್ಸಿಗೆ ಅಂಗನವಾಡಿ ಕಾರ್ಯಕರ್ತೆಯರ ಸಹಕಾರವೇ ಮುಖ್ಯ. ಬೆಂಗಳೂರಿನ ದಕ್ಷಿಣ ಜಿಲ್ಲೆಯಲ್ಲಿ 2.80 ಲಕ್ಷ ಫಲಾನುಭವಿಗಳಿದ್ದು, ಇವರಲ್ಲಿ 2.50 ಲಕ್ಷ ಮಂದಿಯನ್ನು ಗೃಹಲಕ್ಷ್ಮಿ ಸಹಕಾರಿ ಸಂಘದ ಷೇರುದಾರರನ್ನಾಗಿಸಲು ಗುರಿ ಇಡಲಾಗಿದೆ.
ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಕಳೆದ ಬಾರಿ 1000 ರೂ. ಹೆಚ್ಚಿಸಲಾಗಿದೆ. ಇನ್ನೂ 1000 ರೂ. ಹೆಚ್ಚಿಸುವ ಮನವಿಯನ್ನು ಸಿಎಂ ಅವರಿಗೆ ಸಲ್ಲಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದೂ ಭರವಸೆ ನೀಡಲಾಯಿತು. ಸಭೆಯಲ್ಲಿ ಶಾಸಕ ಇಕ್ಬಾಲ್ ಹುಸೇನ್, ಎಂಎಲ್ಸಿ ಎಸ್. ರವಿ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ




