Hubli News: ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಪ್ರಸಾದ್ ಅಬ್ಬಯ್ಯ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಬೆಂಬಲಿಗರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದ್ದಾರೆ. ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಪ್ರಸಾದ್ ಅಬ್ಬಯ್ಯ ಅವರಿಗೆ ಸಚಿವ ಸ್ಥಾನ ನೀಡದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಒಂದು ಕಡೆ ಸಚಿವ ಸಂಪುಟ ವಿಸ್ತರಣೆಯ ಚರ್ಚೆ ಜೋರಾಗಿದ್ದರೆ, ಮತ್ತೊಂದೆಡೆ ಹುಬ್ಬಳ್ಳಿಯಲ್ಲಿ ಶಾಸಕ ಪ್ರಸಾದ್ ಅಬ್ಬಯ್ಯ ಪರವಾಗಿ ಧ್ವನಿ ಮತ್ತಷ್ಟು ಬಲವಾಗಿ ಕೇಳಿಬರುತ್ತಿದೆ. ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಪ್ರಸಾದ್ ಅಬ್ಬಯ್ಯ ಅವರಿಗೆ ಈ ಬಾರಿ ಸಚಿವ ಸ್ಥಾನ ನೀಡಲೇಬೇಕು ಎಂದು ಒತ್ತಾಯಿಸಿ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ.
ಹುಬ್ಬಳ್ಳಿಯಲ್ಲಿ ಜಮಾಯಿಸಿದ ಕಾರ್ಯಕರ್ತರು ಹಾಗೂ ಬೆಂಬಲಿಗರು, ಮೂರು ಬಾರಿ ಜನಪ್ರತಿನಿಧಿಯಾಗಿ ಆಯ್ಕೆಯಾಗಿರುವ ಪ್ರಸಾದ್ ಅಬ್ಬಯ್ಯ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು. ಕ್ಷೇತ್ರದ ಅಭಿವೃದ್ಧಿ ಹಾಗೂ ಜನಸೇವೆಯಲ್ಲಿ ಅವರು ತೊಡಗಿಸಿಕೊಂಡಿದ್ದು, ಎಲ್ಲ ಸಮುದಾಯಗಳ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ ಎಂದು ಬೆಂಬಲಿಗರು ಅಭಿಪ್ರಾಯಪಟ್ಟರು.
ಧಾರವಾಡ ಜಿಲ್ಲೆಗೆ ಸಚಿವ ಸಂಪುಟದಲ್ಲಿ ಸಮರ್ಪಕ ಪ್ರಾತಿನಿಧ್ಯ ಸಿಗುತ್ತಿಲ್ಲ ಎಂಬ ಅಸಮಾಧಾನವೂ ಪ್ರತಿಭಟನೆಯಲ್ಲಿ ವ್ಯಕ್ತವಾಯಿತು. ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯವಾಗುತ್ತಿದ್ದು, ಹುಬ್ಬಳ್ಳಿ-ಧಾರವಾಡದ ಅಭಿವೃದ್ಧಿಗಾಗಿ ಪ್ರಸಾದ್ ಅಬ್ಬಯ್ಯ ಅವರಿಗೆ ಸಚಿವ ಸ್ಥಾನ ನೀಡುವುದು ಅಗತ್ಯ ಎಂದು ಮುಖಂಡರು ಒತ್ತಾಯಿಸಿದರು.
ಪ್ರಸಾದ್ ಅಬ್ಬಯ್ಯ ಅವರು ಸ್ಲಂ ಬೋರ್ಡ್ ಅಧ್ಯಕ್ಷರಾಗಿದ್ದಾಗ ಹಾಗೂ ಶಾಸಕರಾಗಿ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದಾರೆ. ಹೀಗಾಗಿ ಅವರಿಗೆ ಸಚಿವ ಸ್ಥಾನ ನೀಡಿದರೆ ಇನ್ನಷ್ಟು ಅಭಿವೃದ್ಧಿ ಕಾರ್ಯಗಳಿಗೆ ವೇಗ ಸಿಗಲಿದೆ ಎಂದು ಬೆಂಬಲಿಗರು ಅಭಿಪ್ರಾಯಪಟ್ಟರು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಹಲವು ಮುಖಂಡರು ಹಾಗೂ ಕಾರ್ಯಕರ್ತರು, ಸಚಿವ ಸ್ಥಾನ ವಿಚಾರದಲ್ಲಿ ನಿರ್ಲಕ್ಷ್ಯ ಮುಂದುವರಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಹೈಕಮಾಂಡ್ ಕೂಡಲೇ ಈ ಭಾಗದ ಜನರ ಭಾವನೆಗಳಿಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು.
ಒಟ್ಟಾರೆಯಾಗಿ ಪ್ರಸಾದ್ ಅಬ್ಬಯ್ಯ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಹುಬ್ಬಳ್ಳಿಯಲ್ಲಿ ನಡೆದ ಪ್ರತಿಭಟನೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಸಚಿವ ಸಂಪುಟ ವಿಸ್ತರಣೆಯಲ್ಲಿ ಅಬ್ಬಯ್ಯ ಅವರಿಗೆ ಸ್ಥಾನ ಸಿಗುತ್ತದೆಯೇ ಎಂಬ ಕುತೂಹಲ ಇದೀಗ ಬೆಂಬಲಿಗರಲ್ಲಿ ಹೆಚ್ಚಾಗಿದೆ.
ಕ್ಯಾಮೆರಾ ಪರ್ಸನ್ ಹೇಮಂತ್ ಜೊತೆ, ಸಂಗಮೇಶ್ ಸತ್ತಿಗೇರಿ, ಕರ್ನಾಟಕ ಟಿವಿ, ಹುಬ್ಬಳ್ಳಿ.




