ನೆಲ್ಲಿಕಾಯಿ ಉತ್ತಮ ಮನೆ ಮದ್ದು ,ಆಯುರ್ವೇದ ಹೇಳುವ ಸೂಪರ್‌ಫುಡ್, ಆದರೆ ಗರ್ಭಾವಸ್ಥೆಯಲ್ಲಿ ಇದನ್ನು ಸೇವಿಸಬಹುದೇ? ಅಂತ ಕೆಲವರಿಗೆ ಪ್ರಶ್ನೆ ಇರುತ್ತೆ,ಹೌದು, ಆಯುರ್ವೇದ ವೈದ್ಯರ ಪ್ರಕಾರ ಗರ್ಭಾವಸ್ಥೆಯಲ್ಲಿ ಸೀಮಿತ ಪ್ರಮಾಣದಲ್ಲಿ ನೆಲ್ಲಿಕಾಯಿ ಸೇವಿಸುವುದು ತಾಯಿ ಮತ್ತು ಮಗುವಿಗೆ ತುಂಬಾ ಉಪಯುಕ್ತ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ದೇಹದಲ್ಲಿನ ರಕ್ತಹೀನತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮಲಬದ್ಧತೆ, ಬೆಳಗಿನ ಬೇನೆ, ಜೀರ್ಣಕ್ರಿಯೆಯ ಸಮಸ್ಯೆಗಳು — ಇವೆಲ್ಲಕ್ಕೂ ನೆಲ್ಲಿಕಾಯಿ ನೈಸರ್ಗಿಕ ಪರಿಹಾರ.
ಗರ್ಭಿಣಿಯರು ನೆಲ್ಲಿಕಾಯಿಯನ್ನು ಹಲವು ವಿಧಾನಗಳಲ್ಲಿ ಸೇವಿಸಬಹುದು. ತಾಜಾ ನೆಲ್ಲಿಕಾಯಿ, ನೀರಿನಲ್ಲಿ ಬೆರೆಸಿದ ರಸ, ಅಲ್ಪ ಪ್ರಮಾಣದ ನೆಲ್ಲಿಕಾಯಿ ಪುಡಿ ಅಥವಾ ಸಕ್ಕರೆ ರಹಿತ ನೆಲ್ಲಿಕಾಯಿ ಕ್ಯಾಂಡಿ ಎಲ್ಲವೂ ಸುರಕ್ಷಿತ. ಆದರೆ “ಸೀಮಿತ ಪ್ರಮಾಣ” ಬಹಳ ಮುಖ್ಯ. ಹೆಚ್ಚು ತಿಂದರೆ ಅಜೀರ್ಣ, ಅತಿಸಾರ, ನಿರ್ಜಲೀಕರಣದ ತೊಂದರೆ ಉಂಟಾಗಬಹುದು. ಆದ್ದರಿಂದ ದಿನಕ್ಕೆ 1–2 ಚಿಕ್ಕ ಪೀಸ್ಗಿಂತ ಹೆಚ್ಚು ಬೇಡ ಅಂತ ವೈದ್ಯರು ಹೇಳ್ತಾರೆ…
ಇಂಟರ್‌ನ್ಯಾಷನಲ್ ಜರ್ನಲ್ ಆಫ್ ರಿಸರ್ಚ್ ಪ್ರಕಾರ, ಗರ್ಭಾವಸ್ಥೆಯಲ್ಲಿ ನೆಲ್ಲಿಕಾಯಿ ಸೇವಿಸುವುದು ರಕ್ತದೊತ್ತಡ ನಿಯಂತ್ರಣಕ್ಕೆ, ಜೀರ್ಣಕ್ರಿಯೆ ಸುಧಾರಣೆಗೆ, ದೇಹದ ವಿಷಪದಾರ್ಥಗಳನ್ನು ಹೊರಹಾಕಲು, ಗರ್ಭಧಾರಣಾ ಮಧುಮೇಹ ತಡೆಯಲು ಸಹ ಸಹಕಾರಿಯಾಗಿದೆ. ವಿಶೇಷವಾಗಿ ಬೆಳಗಿನ ಬೇನೆ ಅಥವಾ ಬೌಲ್ಮೂವ್‌ಮೆಂಟ್ ಸಮಸ್ಯೆ ಇರುವ ಗರ್ಭಿಣಿಯರಿಗೆ ಇದು ಉತ್ತಮ ನೈಸರ್ಗಿಕ ನೆರವು. ತಂಪು ಸ್ವಭಾವದ ಫಲವಾದ್ದರಿಂದ ದೇಹದ ಉರಿ/ಹೀಟ್ ಅನ್ನು ಕೂಡ ಕಡಿಮೆ ಮಾಡುತ್ತದೆ.
ಆದರೆ ಒಂದು ಮುಖ್ಯ ಸೂಚನೆ, ಗರ್ಭಾವಸ್ಥೆಯಲ್ಲಿ ಏನೇ ಆಹಾರ ಸೇವಿಸಿದರೂ ವೈದ್ಯರ ಸಲಹೆ ಅತ್ಯವಶ್ಯ. ನಿಮಗೆ ಮಧುಮೇಹ, ಆಸಿಡ್ ರಿಫ್ಲಕ್ಸ್, ಜೀರ್ಣಕೋಶದ ಸಮಸ್ಯೆಗಳು ಇದ್ದರೆ ನೆಲ್ಲಿಕಾಯಿ ಪ್ರಮಾಣವನ್ನು ನಿಮ್ಮ ವೈದ್ಯರು ನಿರ್ಧರಿಸಿದರೆ ಉತ್ತಮ. ಒಟ್ಟಾರೆಯಾಗಿ, ತಾಜಾ ಮತ್ತು ನೈಸರ್ಗಿಕ ರೂಪದಲ್ಲಿ, ಅತಿ ಕಡಿಮೆ ಪ್ರಮಾಣದಲ್ಲಿ ಸೇವಿಸಿದರೆ ನೆಲ್ಲಿಕಾಯಿ ಗರ್ಭಿಣಿಯರ ಆರೋಗ್ಯಕ್ಕೆ ತುಂಬಾ ಲಾಭಕಾರಿ.
ವರದಿ : ಗಾಯತ್ರಿ ಗುಬ್ಬಿ

