ಕುಮಾರಸ್ವಾಮಿ ಅಭಿಮಾನಿ ಆತ್ಮಹತ್ಯೆ : ಮೃತನ ಕುಟುಂಬಕ್ಕೆ ನಿಖಿಲ್ ಸಾಂತ್ವನ

ಮಂಡ್ಯ: ಜಿಲ್ಲೆಯ ಮದ್ದೂರು ತಾಲ್ಲೂಕಿನ ದೇವೇಗೌಡನದೊಡ್ಡಿಯಲ್ಲಿ ದಾರುಣ ಘಟನೆ ನಡೆದಿದೆ. ಕುಟುಂಬದಲ್ಲಿನ ವೈಯಕ್ತಿಕ ಸಮಸ್ಯೆಯಿಂದ ಖಿನ್ನಗೊಂಡಿದ್ದ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರ ಅಭಿಮಾನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗ್ರಾಮದ 31ವರ್ಷದ ಮಹದೇವು ಎಂಬ ಯುವಕ ಮೂರು ದಿನಗಳ ಹಿಂದೆ ಮರಕ್ಕೆ ನೇಣು ಬಿಗಿದು ಜೀವ ತ್ಯಜಿಸಿದ್ದಾನೆ. ಭಾನುವಾರ ಕುಟುಂಬಸ್ಥರು ಅಂತ್ಯಕ್ರಿಯೆ ನೆರವೇರಿಸಿದರು.

ಮಹದೇವು ಕುಮಾರಸ್ವಾಮಿ ಅವರ ಅಪ್ಪಟ ಅಭಿಮಾನಿಯಾಗಿದ್ದು, ಅವರು ಮತ್ತೆ ಸಿಎಂ ಆಗುವವರೆಗೂ ಚಪ್ಪಲಿ ತೊಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರಂತೆ. ಜೆಡಿಎಸ್ ಕಾರ್ಯಕರ್ತನಾಗಿದ್ದ ಮಹದೇವು, ಕುಮಾರಸ್ವಾಮಿ ಅಧಿಕಾರ ಕಳೆದುಕೊಂಡ ನಂತರವೂ ಇದೇ ಪ್ರತಿಜ್ಞೆಯನ್ನು ಮುಂದುವರಿಸಿಕೊಂಡು ಚಪ್ಪಲಿ ತೊಡದೆ ಓಡಾಡುತ್ತಿದ್ದರು. ಅವರ ಆಕಾಲಿಕ ನಿಧನಕ್ಕೆ ಹೆಚ್‌ಡಿಕೆ ಸೇರಿದಂತೆ ಜೆಡಿಎಸ್ ನಾಯಕರು ದುಃಖ ವ್ಯಕ್ತಪಡಿಸಿದ್ದಾರೆ.

ಈ ನಡುವೆ, ಮಹದೇವು ಅವರ ಮನೆಗೆ ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರ ನಿಸ್ವಾರ್ಥ ಅಭಿಮಾನಿ ಮಹದೇವು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರಣ ನಮಗೆ ತಿಳಿದಿಲ್ಲ. ಹೋದ ಜೀವ ಹಿಂದಿರುಗಲ್ಲ, ಕುಮಾರಣ್ಣ ಮತ್ತು ನಮ್ಮ ಮನಸ್ಸಿಗೆ ತುಂಬಾ ನೋವಾಗಿದೆ. ಅವರು ‘ಕುಮಾರಣ್ಣ ಸಿಎಂ ಆಗುವವರೆಗೂ ಚಪ್ಪಲಿ ಧರಿಸಲ್ಲ’ ಅಂತ ಹೇಳಿದ್ದರಂತೆ. ಅವರ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ. ಜೀವನೋಪಾಯಕ್ಕೆ ನಾವು ನೆರವು ಕೊಡುತ್ತೇವೆ ಎಂದು ಭರವಸೆ ನೀಡಿದರು.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

About The Author