Political News: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಜಾನಪದ ಲೋಕವನ್ನು ಮುಚ್ಚುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನೂತನ ಸಂಸ್ಥೆಗಳನ್ನು ಕಟ್ಟುವುದಿರಲಿ, ಇರುವುದನ್ನು ಉಳಿಸಿಕೊಳ್ಳುವ ಕಳಕಳಿಯೂ ಇಲ್ಲದ, ತನ್ನ ನಿರ್ಲಕ್ಷ್ಯ, ಅಸಡ್ಡೆಗಳಿಂದ ಉತ್ತಮ ಸಂಸ್ಥೆಗಳನ್ನು ಹಾಳು ಮಾಡುತ್ತಿರುವ ಈ ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ! ನಾಡಿನ ಸಂಸ್ಕೃತಿ ಮತ್ತು ಜಾನಪದ ಶ್ರೀಮಂತಿಕೆಯ ಸಂರಕ್ಷಣಾ ಕೇಂದ್ರವಾಗಿರುವ ‘ಜಾನಪದ ಲೋಕ’ವನ್ನು ಈ ಕಾಂಗ್ರೆಸ್ ಸರ್ಕಾರ ಅಳಿಸಲು ಹೊರಟಿದೆ. ಕೋಟ್ಯಂತರ ಕನ್ನಡಿಗರ ಹೆಮ್ಮೆಯ ಜಾನಪದ ಲೋಕಕ್ಕೆ ಬೀಗ ಬೀಳುವ ಪರಿಸ್ಥಿತಿ ಬಂದಿದೆ!
ಕಾಂಗ್ರೆಸ್ ಸರ್ಕಾರ 4 ವರ್ಷಗಳಿಂದ ವಾರ್ಷಿಕ ಅನುದಾನ (1.3 ಕೋಟಿ ರೂ) ಬಿಡುಗಡೆ ಮಾಡಿಲ್ಲ. 5.2 ಕೋಟಿ ರೂ. ನಷ್ಟು ಸಿಬ್ಬಂದಿ ಸಂಬಳ ನೀಡಿಲ್ಲ. 1400+ ಗಂಟೆಗಳ ಧ್ವನಿಮುದ್ರಿಕೆ, 200 ಗಂಟೆಗಳ ವಿಡಿಯೋ ಸೇರಿದಂತೆ ಅಲ್ಲಿರುವ ಅಮೂಲ್ಯ ಆಕರಗಳು ನಿರ್ವಹಣೆಯಿಲ್ಲದೆ ನಾಶದ ಭೀತಿ ಎದುರಿಸುತ್ತಿವೆ. 2 ವರ್ಷಗಳ ಹಿಂದೆ ವಿಶೇಷ ಅನುದಾನದಲ್ಲಿ 1 ಕೋಟಿ ರೂ. ಬಿಡುಗಡೆಯಾಗಿದ್ದು, ಉಳಿದ 1 ಕೋಟಿ ರೂ.ನಲ್ಲಿ ಕೇವಲ 58 ಲಕ್ಷ ರೂ. ಮಾತ್ರ ಮಂಜೂರಾಗಿರುವುದು ಈ ಕಾಂಗ್ರೆಸ್ ಸರ್ಕಾರದ ನಿರಾಸಕ್ತಿ ಮತ್ತು ಆರ್ಥಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ ಎಂದು ವಿಜಯೇಂದ್ರ ಬೇಸರ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರದ ದುರಾಡಳಿತದಿಂದ ನಾಡಿನ ಸಾಂಸ್ಕೃತಿಕ ಕ್ಷೇತ್ರ ಬರಡಾಗಿದೆ. ಜಾನಪದ ಲೋಕಕ್ಕೆ ಈ ಕೊಡಲೇ 5 ಕೋಟಿ ರೂ. ಅನುದಾನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸುತ್ತೇನೆ. ಇದು ಬೇಡಿಕೆಯಲ್ಲ, ಕನ್ನಡಿಗರ ಆತ್ಮಾಭಿಮಾನದ ಹಕ್ಕೊತ್ತಾಯ! ಎಂದು ವಿಜಯೇಂದ್ರ ಆಗ್ರಹಿಸಿದ್ದಾರೆ.

