ಕೊಪ್ಪಳ: ರಾಜ್ಯ ಕಾಂಗ್ರೆಸ್‌ನಲ್ಲಿ ಮುಂದುವರಿದಿರುವ ಕುರ್ಚಿ ಕದನದ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಕಿಡಿ ಕಾರಿದ್ದಾರೆ. ಕೊಪ್ಪಳದಲ್ಲಿ ಮಾತನಾಡಿದ ಅವರು, ನೀವೇ ಅಗ್ರಿಮೆಂಟ್ ಮಾಡಿಕೊಂಡರೆ ಇದೇನು ಕಾಂಟ್ರಾಕ್ಟಾ? ಎಂದು ತೀವ್ರವಾಗಿ ಪ್ರಶ್ನಿಸಿದರು.
ರಾಯರೆಡ್ಡಿ ಪಕ್ಷದೊಳಗಿನ ಬಣ ರಾಜಕೀಯದ ಆರೋಪವನ್ನೇ ತಳ್ಳಿಹಾಕಿದರು. ನಮ್ಮ ಪಕ್ಷದಲ್ಲಿ ಸಿದ್ದರಾಮಯ್ಯ ಬಣ, ಡಿ.ಕೆ. ಶಿವಕುಮಾರ್ ಬಣ ಅಂತ ಇಲ್ಲ. ನಾವು ಎಲ್ಲರೂ ಕಾಂಗ್ರೆಸ್ ಕಾರ್ಯಕರ್ತರು. ಸಿಎಂ ಆಗಬೇಕು, ಸಚಿವರಾಗಬೇಕು ಅನ್ನೋ ಆಸೆ ಇರುವುದು ಸಹಜ ಎಂದಿದ್ದಾರೆ.
2013ರಿಂದಲೂ ನಡೆದ ಘಟನೆಗಳನ್ನು ಉಲ್ಲೇಖಿಸಿದ ಅವರು,2023 ಮೇ 20ರಂದು ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕರಿಸಿದರು. ಅದಕ್ಕೂ ಮುಂಚೆ ಶಾಸಕಾಂಗ ಸಭೆ ನಡಿತು. ಅಲ್ಲಿ ಸಿದ್ದರಾಮಯ್ಯಗೆ ಬಹುಮತ ಬಂತು. ಹೀಗಾಗಿ ಅವರು ಆಯ್ಕೆಯಾದರು. ಈಗ ಅವರನ್ನು ಬದಲಿಸುವ ಮಾತು ಯಾಕೆ? ಎಂದು ಪ್ರಶ್ನಿಸಿದ್ದಾರೆ.
ನಾಯಕರ ನಡುವೆ ನಡೆದಿದ್ದೇನೆನ್ನಲಾದ ‘ಪವರ್‌ಶೇರ್ ಮಾತುಕತೆ’ ಕುರಿತು ಸ್ಪಷ್ಟನೆ ನೀಡಿದ ರಾಯರೆಡ್ಡಿ, ಎರಡೂವರೆ ವರ್ಷ ಅವರು, ಎರಡು ವರ್ಷ ಇವರು ಅಂತ ಮಾತುಕತೆ ಆಗಿದೆ ಅಂತಾರೆ. ಕೊಟ್ಟಿದ್ದೇವೆ ಅಂದ್ರೆ. ಆಗ ನಾನು ಮೊದಲೇ ಯಾಕೆ ಹೇಳಿಲ್ಲ ಅಂತಾ ಕೇಳುತ್ತೇನೆ. ಮೊದಲೇ ಹೇಳಬೇಕಲ್ಲಾ? ನೀವ್ ನೀವೆ ಅಗ್ರಿಮೆಂಟ್ ಮಾಡಕೊಂಡ್ರೆ ಇದೇನು ಕಾಂಟ್ರಾಕ್ಟ್? ಡಿಕೆ ಶಿವಕುಮಾರ್ ಹತ್ರ ಗೊಂದಲ ಇಲ್ಲ. ಸಿದ್ದರಾಮಯ್ಯ ಹತ್ರ ಗೊಂದಲ ಇಲ್ಲ.
ಕರ್ನಾಟಕ ಸರ್ಕಾರ ಅಸ್ಥಿರ ಗೊಳಿಸೋ ಕೆಲಸ ನಡೀತಿದೆ. ನನಗೆ ಗೊತ್ತಿರೋ ಪ್ರಕಾರ ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿ ಇರ್ತಾರೆ ಎಂದು ಭವಿಷ್ಯ ನುಡಿದರು. ಸಿದ್ದರಾಮಯ್ಯ ಒಬ್ಬ ಸಾಮಾಜಿಕ ವ್ಯಕ್ತಿ, ಬಸವಣ್ಣನ ಪರ ಇರೋ ವ್ಯಕ್ತಿ. ಬಸವಣ್ಣನ ಪರ ಲಿಂಗಾಯತರಗಿಂತ ಹೆಚ್ಚು ಪ್ರಚಾರ ಮಾಡೋದೆ ಸಿದ್ದರಾಮಯ್ಯ. ಹೀಗಾಗಿ, ಸಿದ್ದರಾಮಯ್ಯ ಅವರನ್ನು ಎಲ್ಲ ಲಿಂಗಾಯತರು ಇಷ್ಟ ಪಡ್ತಾರೆ. ನನ್ನನ್ನು ಸೇರಿ ಎಲ್ಲ ಲಿಂಗಾಯತರು ಇಷ್ಟ ಪಡ್ತಾರೆ ಎಂದರು.
ವರದಿ : ಲಾವಣ್ಯ ಅನಿಗೋಳ

