25 ನವೆಂಬರ್ ಮಹಿಳಾ ದೌರ್ಜನ್ಯ ವಿರೋಧಿ ದಿನ !

ಮಹಿಳೆಯರ ಮೇಲೆ ನಡೆಯುತ್ತಿರುವ ದೈಹಿಕ, ಮಾನಸಿಕ, ಸಾಮಾಜಿಕ ಹಿಂಸಾಚಾರಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿ ವರ್ಷ ನವೆಂಬರ್ 25ರಂದು ಅಂತಾರಾಷ್ಟ್ರೀಯ ಮಹಿಳಾ ದೌರ್ಜನ್ಯ ವಿರೋಧಿ ದಿನವನ್ನು ಜಗತ್ತಿನಾದ್ಯಂತ ಆಚರಿಸಲಾಗುತ್ತದೆ. ಮಹಿಳೆಯರ ಸುರಕ್ಷತೆ ಮತ್ತು ಗೌರವಕ್ಕೆ ಈ ದಿನ ಮಹತ್ವದ ಸಂದೇಶ ನೀಡುತ್ತದೆ.

1960 ರಲ್ಲಿ ಡೊಮಿನಿಕನ್ ರಿಪಬ್ಲಿಕ್‌ನಲ್ಲಿ ಮಿನರ್ವಾ, ಮರಿಯಾ ಹಾಗೂ ಪ್ಯಾಟ್ರಿಯಾ ಮಿರಾಬೆಲ್ ಸಹೋದರಿಯರನ್ನು ಸರ್ವಾಧಿಕಾರಿ ಆಡಳಿತದ ವಿರುದ್ಧ ನಿಂತಿದ್ದಕ್ಕಾಗಿ ಕ್ರೂರವಾಗಿ ಕೊಲ್ಲಲಾಗಿತ್ತು. ಮಹಿಳಾ ಹೋರಾಟದ ಪ್ರತೀಕವಾಗಿದ್ದ ಈ ಮೂವರ ನೆನಪಿಗಾಗಿ 1981ರಲ್ಲಿ ಸ್ತ್ರೀವಾದಿ ಕಾರ್ಯಕರ್ತರು ಈ ದಿನವನ್ನು ಆಚರಿಸಲು ಪ್ರಾರಂಭಿಸಿದರು. ನಂತರ 1999ರಲ್ಲಿ ವಿಶ್ವಸಂಸ್ಥೆ ಅಧಿಕೃತವಾಗಿ ಈ ದಿನವನ್ನು ಅಂತಾರಾಷ್ಟ್ರೀಯ ಮಹಿಳಾ ದೌರ್ಜನ್ಯ ವಿರೋಧಿ ದಿನವೆಂದು ಘೋಷಿಸಿತು.

ಹೆಣ್ಣನ್ನು ದೇವಿಯಾಗಿ ಪೂಜಿಸುವ ನಾಡಿನಲ್ಲಿ, ಅದೇ ಹೆಣ್ಣಿನ ಮೇಲಿನ ದೌರ್ಜನ್ಯ ನಡೆಯುತ್ತಿರುವುದು ದೊಡ್ಡ ವಿಪರ್ಯಾಸ. ಪ್ರತಿನಿತ್ಯ ಅನೇಕರಿಗೆ ಕಿರುಕುಳ, ಹಿಂಸೆ, ಅಸಮಾನತೆ ಎದುರಾಗುತ್ತಲೇ ಇದೆ. ಪ್ರಪಂಚ ಎಷ್ಟೇ ಅಭಿವೃದ್ಧಿಯಾಗಿದ್ದರೂ ಮಹಿಳೆಯರ ಮೇಲಿನ ಹಿಂಸೆ ಇನ್ನೂ ಸಂಪೂರ್ಣವಾಗಿ ನಿಂತಿಲ್ಲ.

ಈ ದಿನದ ಉದ್ದೇಶ ಕೇವಲ ನೆನಪಲ್ಲ, ಜಾಗೃತಿ ಮೂಡಿಸುವುದು. ಮಹಿಳೆಯರ ಹಕ್ಕುಗಳ ಬಗ್ಗೆ ಸಮಾಜಕ್ಕೆ ಅರಿವು ನೀಡುವುದು. ದೌರ್ಜನ್ಯವನ್ನು ಎದುರಿಸಲು ಧೈರ್ಯ ನೀಡುವುದು. ಹೆಣ್ಣುಮಕ್ಕಳು ಭಯವಿಲ್ಲದೆ, ಮುಕ್ತವಾಗಿ ಬದುಕುವ ಹಕ್ಕು ಹೊಂದಿದ್ದಾರೆ ಎಂಬುದನ್ನು ಈ ದಿನ ನೆನಪಿಸುತ್ತದೆ.

ಮಹಿಳೆಯರ ಸುರಕ್ಷತೆ ನಮ್ಮೆಲ್ಲರ ಜವಾಬ್ದಾರಿ. ಮನೆಯಲ್ಲಿ, ಕೆಲಸದ ಜಾಗದಲ್ಲಿ, ಸಮಾಜದಲ್ಲಿ, ಎಲ್ಲಾ ಕಡೆ ಗೌರವ, ಭದ್ರತೆ, ಸಮಾನತೆ ಮತ್ತು ಬೆಂಬಲ ದೊರಕುವ ಪರಿಸ್ಥಿತಿಯನ್ನು ನಾವು ನಿರ್ಮಿಸಿದಾಗ ಮಾತ್ರ, ನಿಜವಾದ ಬದಲಾವಣೆ ಸಾಧ್ಯ. ದೌರ್ಜನ್ಯ ವಿರೋಧಿ ದಿನದ ಸಂದೇಶ, ನಮ್ಮ ಮನಸ್ಸಿನಲ್ಲಿ ಮಾತ್ರವಲ್ಲ, ನಮ್ಮ ನಡೆ-ನುಡಿಗಳಲ್ಲೂ ಪ್ರತಿಫಲಿಸಬೇಕು.

ವರದಿ : ಗಾಯತ್ರಿ ಗುಬ್ಬಿ

About The Author