ನೀವು ದಿನವಿಡೀ ಕುಳಿತು ಕೆಲಸ ಮಾಡ್ತೀರಾ? ಆರೋಗ್ಯ ಕಾಪಾಡಿಕೊಳ್ಳಲು ಸಂಜೆ ಅಥವಾ ಬೆಳಿಗ್ಗೆ 10,000 ಹೆಜ್ಜೆ ನಡೆಯುತ್ತೀರಾ? ಹಾಗಿದ್ರೆ ಒಂದಷ್ಟು ಜಾಗ್ರತೆ, ವೈದ್ಯರ ಪ್ರಕಾರ, ದಿನವಿಡೀ ಒಂದೇ ಕಡೆ ಕುಳಿತುಕೊಂಡು ನಂತರ ಸಾವಿರ ಸಾವಿರ ಹೆಜ್ಜೆ ನಡೆದರೂ ಅದರ ಫಲ ಶೂನ್ಯ. ಬೆಳಿಗ್ಗೆ 9 ರಿಂದ ಸಂಜೆ 7ರವರೆಗೂ ಚಲನೆಯೇ ಇಲ್ಲದಿದ್ದರೆ, ನಂತರ ಮಾಡಿದ ನಡಿಗೆ ದೇಹಕ್ಕೆ ಆಗಿರುವ ಹಾನಿಯನ್ನು ಸರಿಪಡಿಸಲಾರದು. ಇದೊಂದು ನಮ್ಮಲ್ಲಿ ಬಹುತೇಕರಿಗೆ ಗೊತ್ತೇ ಇಲ್ಲದ ಕಠಿಣ ಸತ್ಯ.
ವೈದ್ಯರೊಬ್ಬರು ಈ ಬಗ್ಗೆ ಅಚ್ಚರಿಯ ಸತ್ಯವನ್ನ ಹೇಳಿದ್ದಾರೆ “ಕುಳಿತು ಕೆಲಸ ಮಾಡುವುದು ಧೂಮಪಾನ ಮಾಡಿದಷ್ಟು ಹಾನಿಕಾರಕ.” ಅಂದ್ರೆ, ದಿನವಿಡೀ ಕುಳಿತುಕೊಂಡು ಬಳಿಕ ಮಾಡುತ್ತಿರುವ 10,000 ಸ್ಟೆಪ್ಸ್ ವಾಕ್ ಕೂಡ ನಿಮ್ಮ ರಕ್ತನಾಳಗಳ ಮೇಲೆ ಆಗಿರುವ ಒತ್ತಡವನ್ನು ನಿವಾರಿಸಲು ಸಾಕಾಗುವುದಿಲ್ಲ. ಏಕೆಂದರೆ ಕುಳಿತಿರುವಾಗಲೇ ನಿಮ್ಮ ರಕ್ತನಾಳಗಳು ಹಾನಿಯಾಗೋಕೆ ಶುರು ಆಗ್ತವೆ ನಾವಂತೂ ‘ಸ್ವಲ್ಪ ಹೆಜ್ಜೆ ನಡೆದ್ರೆ ಸಾಕು’ ಎಂದು ಯೋಚಿಸುತ್ತೇವೆ, ಆದರೆ ವಾಸ್ತವಕ್ಕೆ ಅದು ತಪ್ಪು.
ಇಂದಿನ ಕೆಲಸದ ಶೈಲಿ, ವಿಶೇಷವಾಗಿ ವರ್ಕ್ ಫ್ರಂ ಹೋಮ್ ಅಥವಾ ಆಫೀಸ್ ಅಲ್ಲಿ ಕುಳಿತು ಕೆಲಸ, ಆರೋಗ್ಯದ ಹಿಡನ್ ಶತ್ರು. ಒಂದೇ ಜಾಗದಲ್ಲಿ ದೀರ್ಘಕಾಲ ಕುಳಿತುಕೊಳ್ಳುವುದರಿಂದ ದೇಹದ ರಕ್ತ ಪರಿಚಲನೆ ನಿಧಾನಗೊಳ್ಳುತ್ತದೆ, ರಕ್ತ ನಿಶ್ಚಲತೆ ಹೆಚ್ಚುತ್ತದೆ. ಇದು ರಕ್ತನಾಳದ ಕವಚ ದೌರ್ಬಲ್ಯ, ಕಾಲುಗಳಲ್ಲಿ ಉಬ್ಬು, ಉಬ್ಬಿರುವ ರಕ್ತನಾಳಗಳು ಮತ್ತು ರಕ್ತ ಹೆಪ್ಪುಗಟ್ಟುವ ಅಪಾಯಕ್ಕೆ ದಾರಿ ಮಾಡಿಕೊಡುತ್ತದೆ. ದೇಹದ ಆರೋಗ್ಯ ನೀವು ಎಷ್ಟು ನಡೆದುಬಿಟ್ಟೀರಾ ಅನ್ನೋದಕ್ಕೆ ಸಂಬಂಧವಿಲ್ಲ; ನೀವು ದಿನದಲ್ಲಿ ಎಷ್ಟು ಬಾರಿ ಎದ್ದು ಚಲಿಸಿದ್ದೀರಾ ಎಂಬುದೇ ಮುಖ್ಯ.
ಈ ಸಮಸ್ಯೆಗೆ ಪರಿಹಾಳರ ಇದೆ , ಪ್ರತಿ 45 ರಿಂದ 60 ನಿಮಿಷಗಳಿಗೊಮ್ಮೆ ಎದ್ದು ನಿಲ್ಲಿ, even 2 ನಿಮಿಷ ನಡೆದರೂ ಸಾಕು. ಕುಳಿತಲ್ಲೇ ಸ್ಟ್ರೆಚಿಂಗ್ ಮಾಡಿ, ಸ್ನಾಯು ಬಿಗಿತ ಕಡಿಮೆ ಮಾಡಿ. ಜೊತೆಗೆ, ಪ್ರತಿ 30 ನಿಮಿಷಕ್ಕೂ ಒಂದು ಬಾರಿ ಕುಳಿತುಕೊಂಡೇ ಮಾಡಬಹುದಾದ “ಹೀಲ್ ರೈಸ್” ವ್ಯಾಯಾಮ ಮಾಡಿ. ಇದು ರಕ್ತ ಪರಿಚಲನೆ ಹೆಚ್ಚಿಸಿ, ರಕ್ತ ಗಟ್ಟಿಯಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ. ನಿಮಗೆ ದೊಡ್ಡ ದೊಡ್ಡ ವ್ಯಾಯಾಮಗಳು ಬೇಕಿಲ್ಲ, ಸಣ್ಣ ಪುಟ್ಟ ಚಲನೆಗಳೇ ದೇಹಕ್ಕೆ ದೊಡ್ಡ ಪರಿಹಾರ.
ಕೊನೆಯದಾಗಿ, ನಿಮ್ಮ ದೇಹಕ್ಕೆ ಮ್ಯಾರಥಾನ್ ನಡಿಗೆಗಿಂತ ನಿಧಾನವಾದ ಚಲನೆ’ ಮುಖ್ಯ. ಗಂಟೆಗಳ ಕಾಲ ಕುಳಿತುಕೊಳ್ಳುವುದರಿಂದ ಉಂಟಾಗುವ ಅಪಾಯವನ್ನು ಒಂದೇ ಬಾರಿ ಮಾಡಿದ ನಡಿಗೆ ತೆಗೆದು ಹಾಕುವುದಿಲ್ಲ. ಆದ್ದರಿಂದ ಕುಳಿತು ಕೆಲಸ ಮಾಡುವ ನಿಮ್ಮ ಜೀವನಶೈಲಿಯಲ್ಲಿ ಒಂದಷ್ಟು ಬದಲಾವಣೆಯನ್ನ ಇಂದೇ ಮಾಡಿ. ಮಧ್ಯ ಮಧ್ಯೆ ಬರೀ 2 ನಿಮಿಷ ಎದ್ದು ನಡೆಯಿರಿ, ಸ್ಟ್ರೆಚಿಂಗ್ ಮಾಡಿರಿ, ಚಲಿಸಿರಿ. ಸಣ್ಣ ವಿರಾಮಗಳು ದೊಡ್ಡ ಆರೋಗ್ಯ ರಕ್ಷಣೆಯಾಗುತ್ತವೆ. ಕುಳಿತು ಕೆಲಸ ಮಾಡ್ತಾ ಇರಬೇಡಿ, ಚಲಿಸಿ, ಬದುಕಿ, ಆರೋಗ್ಯವಾಗಿರಿ.
ವರದಿ : ಗಾಯತ್ರಿ ಗುಬ್ಬಿ

