ಡಿಕೆಶಿ ಪರ ಬೆಂಬಲ: ಸಿಎಂ ವಿಷಯಕ್ಕೆ ಮಠದಿಂದ ಸ್ಪಷ್ಟ ಸಂದೇಶ!

ರಾಜ್ಯ ರಾಜಕೀಯದಲ್ಲಿ ಪವರ್ ಶೇರಿಂಗ್ ಗದ್ದಲ ತಾರಕಕ್ಕೇರಿರುವ ಈ ಸಂದರ್ಭದಲ್ಲಿ, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಬೇಕು ಎಂದು ಸ್ಪಷ್ಟವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಚನ್ನರಾಯಪಟ್ಟಣ ತಾಲ್ಲೂಕಿನ ಕುಂದೂರು ಮಠದಲ್ಲಿ ಮಾತನಾಡಿದ ಸ್ವಾಮೀಜಿ, ಪಕ್ಷಕ್ಕಾಗಿ ಶಿಸ್ತಿನ ಸಿಪಾಯಿಯಾಗಿ ದುಡಿದ ಶಿವಕುಮಾರ್ ಅವರಿಗೆ ಒಂದು ಅವಕಾಶ ನೀಡಬೇಕು. ಉಳಿದ ಎರಡೂವರೆ ವರ್ಷಗಳ ಕಾಲ ಸಿಎಂ ಸ್ಥಾನ ನೀಡಿ, ಅವರ ವಿಷನ್ ಪ್ರಕಾರ ರಾಜ್ಯದ ಅಭಿವೃದ್ಧಿಗೆ ಅವಕಾಶ ಮಾಡಿಕೊಡಬೇಕು ಎಂದು ಹೇಳಿದ್ದಾರೆ.

ಕೆಂಗಲ್ ಹನುಮಂತಯ್ಯ, ಕೆಸಿ ರೆಡ್ಡಿ ಕಾಲದಿಂದ ಕೂಡ ರಾಜ್ಯವನ್ನು ಆಳಿ ಅಭಿವೃದ್ಧಿ ಪಥದಲ್ಲಿ ಒಯ್ದಿದ್ದಾರೆ. ದೇವೇಗೌಡರು, ಎಸ್.ಎಂ.ಕೃಷ್ಣ, ಹೆಚ್‌ಡಿಕೆ ಅವರು ಮುಖ್ಯಮಂತ್ರಿಯಾಗಿದ್ದಾರೆ. ನಮ್ಮ ಸಮುದಾಯದಿಂದ ರಾಜ್ಯ ಕಟ್ಟಿ ಬೆಳೆಸಲು ಹೋಗಿರುವ ನಾಯಕರಂತೆ ಇವರು ಯಾವುದೇ ಸಂದರ್ಭದಲ್ಲಿ ಪಕ್ಷ ನಿಷ್ಟೆ ಬಿಟ್ಟು ಕೊಟ್ಟವರಲ್ಲ.

ಪಕ್ಷದ ಉಳಿವು ಏಳಿಗೆಗಾಗಿ ಎಷ್ಟೋ ನೋವನ್ನು ಏಕಾಂಗಿಯಾಗಿ ನಿಂತು ಸ್ವೀಕರಿಸಿ ಹೋರಾಟ ಮಾಡಿದ್ದಾರೆ. ಅಂತಹ ಸೇವೆ ಮಾಡಿರುವ ಶಿವಕುಮಾರ್ ಸಿಎಂ ಆಗುತ್ತಾರೆ ಎನ್ನುವ ಭಾವನೆ ಎಲ್ಲರಿಗು ಇದೆ, ನಮಗೂ ಇದೆ. ಡಿ.ಕೆ.ಶಿವಕುಮಾರ್ ಶ್ರೀ ಮಠದ ಸದ್ಭಕ್ತರು. ಅವರಿಗೆ ತಮ್ಮ ಇಚ್ಚೆ ಆಗುತ್ತೆ ಎನ್ನುವ ಭರವಸೆ ಇದೆ. ಆ ಭಾವನೆಗೆ ಪೂರಕವಾಗಿ ಅವರ ಹೈಕಮಾಂಡ್ ಕೆಲಸ ಮಾಡಲಿದೆ ಎನ್ನುವ ಭರವಸೆ ಇದೆ ಎಂದರು.

ಸ್ವಾಮೀಜಿ ಕೊನೆಯಲ್ಲಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಪವರ್ ಶೇರಿಂಗ್ ಬಗ್ಗೆ ದೊಡ್ಡ ಚರ್ಚೆ ನಡೆದಿತ್ತು. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಪಕ್ಷ ಚುನಾವಣೆಗೆ ಹೋಗಿ ಅಧಿಕಾರಕ್ಕೆ ಬಂದಿದೆ. ಈಗ ಜನರಲ್ಲಿರುವ ಎರಡೂವರೆ ವರ್ಷದ ಅಧಿಕಾರ ಹಂಚಿಕೆಯ ಭಾವನೆಗೆ ಸೂಕ್ತ ಪರಿಹಾರ ನೀಡಬೇಕು ಎಂದು ಹೈಕಮಾಂಡ್‌ಗೆ ಸ್ಪಷ್ಟ ಸಂದೇಶ ನೀಡಿದ್ದಾರೆ.

ವರದಿ : ಲಾವಣ್ಯ ಅನಿಗೋಳ

About The Author