ಯು.ಟಿ. ಖಾದರ್‌ ಅವರಿಗೆ ಗೌರವ ಡಾಕ್ಟರೇಟ್, ರಾಜ್ಯಪಾಲರಿಂದ ಪ್ರಶಸ್ತಿ ಪ್ರಧಾನ!

ಬೆಂಗಳೂರು ವಿಶ್ವವಿದ್ಯಾಲಯದಿಂದ ನೀಡಲಾದ ಗೌರವ ಡಾಕ್ಟರೇಟ್ ಪದವಿಯನ್ನು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅಬ್ದುಲ್ಲಾ ಅವರಿಗೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಪ್ರದಾನ ಮಾಡಿದರು. ರಾಜಭವನದ ಬ್ಯಾಂಕ್ವೇಟ್ ಹಾಲ್‌ನಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಈ ಗೌರವವನ್ನು ನೀಡಲಾಯಿತು.

ಗೌರವ ಪದವಿ ಸ್ವೀಕರಿಸಿದ ನಂತರ ಮಾತನಾಡಿದ ಯು.ಟಿ. ಖಾದರ್ ಅವರು, ಪ್ರತಿಷ್ಠಿತ ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವಾನ್ವಿತ ಡಾಕ್ಟರೇಟ್ ಪದವಿ ಸ್ವೀಕರಿಸಿರುವುದು ನನಗೆ ಅಪಾರ ಹೆಮ್ಮೆಯ ಸಂಗತಿ. ಪದವಿ ಗೌರವದ ಜೊತೆಗೆ ಜವಾಬ್ದಾರಿಯನ್ನೂ ಹೆಚ್ಚಿಸುತ್ತದೆ. ಭವಿಷ್ಯದಲ್ಲೂ ಬೆಂಗಳೂರು ವಿಶ್ವವಿದ್ಯಾಲಯದ ಮೌಲ್ಯ ಮತ್ತು ನಂಬಿಕೆಯನ್ನು ಎತ್ತಿಹಿಡಿಯುವ ದಾರಿಯಲ್ಲಿ ಸಾಗುತ್ತೇನೆ ಎಂದು ಅಭಿಪ್ರಾಯಪಟ್ಟರು.

ಅವರು ತಮ್ಮ ಕಾಲೇಜು ದಿನಗಳ ನೆನಪುಗಳನ್ನು ಹಂಚಿಕೊಂಡು, ಒಮ್ಮೆ ಡಾಕ್ಟರ್ ಆಗಬೇಕೆಂಬ ಕನಸಿತ್ತು. ಆದರೆ ವಿಜ್ಞಾನ ವಿಷಯದಲ್ಲಿ ಅಂಕಗಳು ಕಡಿಮೆ ಬಂದ ಕಾರಣ ವೈದ್ಯಕೀಯಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಬಳಿಕ ಕಾನೂನು ಕ್ಷೇತ್ರಕ್ಕೆ ತಿರುಗಿ, ನಂತರ ಆರೋಗ್ಯಮಂತ್ರಿಯಾಗುವ ಅವಕಾಶ ಲಭಿಸಿತು. ಡಾಕ್ಟರ್ ಆಗದಿದ್ದರೂ ಇಂದು ಡಾಕ್ಟರೇಟ್ ಪದವಿ ಲಭಿಸಿರುವುದು ಹೃದಯ ತುಂಬುವ ಸಂತಸ ಎಂದು ಹೇಳಿದರು.

ಸಮಾಜದಲ್ಲಿ ಸಾಮರಸ್ಯ, ಪ್ರೀತಿ, ವಿಶ್ವಾಸ ಮುಖ್ಯವೆಂದು ಉದ್ಧರಿಸಿದ ಅವರು, ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಎಲ್ಲರೂ ಒಗ್ಗಟ್ಟಿನಿಂದ ಬದುಕೋಣ. ಭಾರತೀಯರಾಗಿ ಏಕತಾ ನಮ್ಮ ಶಕ್ತಿ, ಎಂದು ಸಂದೇಶ ನೀಡಿದರು.

About The Author