Bidar News: ಗುಂಡಿಗಳ ನಗರವಾಗಿ ಬದಲಾಗಿದೆಯೇ ಬೀದರ್? ರಸ್ತೆ ಅವಸ್ಥೆಗೆ ಜನರ ಆಕ್ರೋಶ..

Bidar News: ಬೀದರ್ ನಗರದಲ್ಲಿ ರಸ್ತೆಗಳ ದುಸ್ಥಿತಿ ಇದೀಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮಳೆ ಬಂದರೆ ಸಾಕು ನಗರದ ಹಲವು ರಸ್ತೆಗಳು ಕೆರೆಯಂತಾಗುತ್ತಿದ್ದು, ರಸ್ತೆ ಎಲ್ಲಿದೆ, ಗುಂಡಿ ಎಲ್ಲಿದೆ ಎಂಬುದೇ ತಿಳಿಯದ ಪರಿಸ್ಥಿತಿ ನಿರ್ಮಾಣವಾಗಿದೆ. ಗುಂಡಿಗಳ ನಡುವೆ ಜೀವ ಕೈಯಲ್ಲಿ ಹಿಡಿದು ವಾಹನ ಚಲಾಯಿಸುವಂತಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದು ಬೀದರ್ ನಗರದ ರಸ್ತೆ ಸ್ಥಿತಿ..! ಮಳೆ ನೀರಿನಲ್ಲಿ ಮುಳುಗಿರುವ ರಸ್ತೆಗಳು.. ಅಲ್ಲಲ್ಲಿ ಬೃಹತ್ ಗುಂಡಿಗಳು.. ಗುಂಡಿಗಳ ನಡುವೆ ಸಾಗುತ್ತಿರುವ ವಾಹನಗಳು.. ಈ ದೃಶ್ಯಗಳು ಇದೀಗ ಬೀದರ್ ನಗರದ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿವೆ. ನಗರದ ಗುಂಪಾ, ಮೈಲೂರ್ ಹಾಗೂ ಚಿದ್ರಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ರಸ್ತೆಗಳ ಮೇಲೆ ಗುಂಡಿಗಳ ದರ್ಬಾರ್ ನಡೆಯುತ್ತಿದೆ. ಮಳೆ ಬಂದಾಗ ಗುಂಡಿಗಳಲ್ಲಿ ನೀರು ತುಂಬಿಕೊಂಡು ರಸ್ತೆ ಎಲ್ಲಿದೆ ಎಂಬುದೇ ಕಾಣದಂತಾಗುತ್ತಿದೆ.

ಇನ್ನು ನಗರದ ಹೃದಯಭಾಗದಲ್ಲಿರುವ ಡಾ. ಚನ್ನಬಸವ ಪಟ್ಟದ್ದೇವರ ರಂಗಮಂದಿರದಿಂದ ಹೊಸ ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಪ್ರತಿದಿನ ಸಾವಿರಾರು ಪ್ರಯಾಣಿಕರು ಸಂಚರಿಸುವ ಪ್ರಮುಖ ರಸ್ತೆಯಲ್ಲೇ ವಾಹನ ಸವಾರರು ನರಕಯಾತನೆ ಅನುಭವಿಸುವಂತಾಗಿದೆ. ದ್ವಿಚಕ್ರ ವಾಹನ ಸವಾರರು ಗುಂಡಿಗಳಿಗೆ ಬಿದ್ದು ಅಪಾಯ ಎದುರಿಸುವ ಆತಂಕವೂ ಹೆಚ್ಚಾಗಿದೆ.

ಸಾರ್ವಜನಿಕರ ಆರೋಪದ ಪ್ರಕಾರ, ಸಚಿವರು ಹಾಗೂ ಜನಪ್ರತಿನಿಧಿಗಳು ನಗರಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಮಾತ್ರ ರಸ್ತೆಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗುತ್ತದೆ. ಆದರೆ ಕೆಲವೇ ದಿನಗಳ ಬಳಿಕ ಮತ್ತೆ ಅದೇ ದುಸ್ಥಿತಿ ನಿರ್ಮಾಣವಾಗುತ್ತದೆ. ತಾತ್ಕಾಲಿಕವಾಗಿ ಗುಂಡಿ ಮುಚ್ಚುವ ಕಾಮಗಾರಿಗಳಿಂದ ಯಾವುದೇ ಪ್ರಯೋಜನವಿಲ್ಲ. ಶಾಶ್ವತವಾಗಿ ರಸ್ತೆ ದುರಸ್ತಿ ಮಾಡಿ ಗುಣಮಟ್ಟದ ಕಾಮಗಾರಿ ನಡೆಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ರಸ್ತೆಗಳ ದುಸ್ಥಿತಿಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಕ್ರಮ ಕೈಗೊಂಡು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

About The Author