Friday, November 28, 2025

Latest Posts

ಅತಿವೃಷ್ಟಿ ಬಾಧಿತ ರೈತರಿಗೆ ಮತ್ತೊಂದು ‘ಗುಡ್ ನ್ಯೂಸ್’

- Advertisement -

ಧಾರವಾಡ : ಆಗಸ್ಟ್ ತಿಂಗಳಲ್ಲಿ ಅತಿವೃಷ್ಟಿಯಿಂದಾಗಿ ತೀವ್ರ ಬೆಳೆ ಹಾನಿ ಅನುಭವಿಸಿದ್ದ ಧಾರವಾಡ ಜಿಲ್ಲೆಯ ರೈತರಿಗೆ ರಾಜ್ಯ ಸರ್ಕಾರವು ಪರಿಹಾರ ಘೋಷಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಶೇಷ ಪ್ಯಾಕೇಜ್ ಅಡಿಯಲ್ಲಿ ಜಿಲ್ಲೆಗೆ ಹೆಚ್ಚುವರಿಯಾಗಿ 63.77 ಕೋಟಿ ರೂಪಾಯಿಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.

ಈ ಹಣವನ್ನು ಅರ್ಹ ರೈತ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ ಮೂಲಕ ಇಂದೇ ಜಮಾ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರತಿ ಹೆಕ್ಟೇರ್‌ಗೆ 8,500 ರೂಪಾಯಿಗಳ ಹೆಚ್ಚುವರಿ ಸಬ್ಸಿಡಿಯನ್ನು ರಾಜ್ಯ ಸರ್ಕಾರದಿಂದ ವಿತರಿಸಲು ಕ್ರಮ ವಹಿಸಲಾಗಿದೆ. ಈ ಮೂಲಕ ಸಂಕಷ್ಟದಲ್ಲಿರುವ ರೈತ ಸಮುದಾಯಕ್ಕೆ ಆರ್ಥಿಕ ನೆರವು ನೀಡಿದಂತಾಗಿದೆ.

ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ನೀಡಿದ ವಿವರಗಳ ಪ್ರಕಾರ, ಈ ವಿಶೇಷ ಪ್ಯಾಕೇಜ್ ಅಡಿಯಲ್ಲಿ ಜಿಲ್ಲೆಯ ಒಟ್ಟು 66,834 ಅರ್ಹ ರೈತರು ಪ್ರಯೋಜನ ಪಡೆದಿದ್ದಾರೆ. ಹಾನಿಗೊಳಗಾದ ಒಟ್ಟು 74,989.57 ಹೆಕ್ಟೇರ್‌ ಪ್ರದೇಶಕ್ಕೆ ಈ ಅನುದಾನವನ್ನು ಹಂಚಿಕೆ ಮಾಡಲಾಗಿದೆ. ಅಣ್ಣಿಗೇರಿ, ಧಾರವಾಡ, ಹುಬ್ಬಳ್ಳಿ, ಹುಬ್ಬಳ್ಳಿ ನಗರ, ಕುಂದಗೋಳ, ನವಲಗುಂದ ನಗರಗಳಿಗೆ ಪರಿಹಾರ ವಿತರಿಸಲಾಗಿದೆ.

ಈಗಾಗಲೇ ಬೆಳೆ ಹಾನಿಗೊಳಗಾದ ರೈತರಿಗೆ NDRF ಮತ್ತು SDRF ಮಾರ್ಗಸೂಚಿಯಂತೆ 66,834 ರೈತರಿಗೆ, 74,989.57 ಹೆಕ್ಟೇರ್‌ ಪ್ರದೇಶಕ್ಕೆ ಒಟ್ಟು 64.96 ಕೋಟಿ ಇನ್‌ಪುಟ್ ಸಬ್ಸಿಡಿಯನ್ನು ಈ ಹಿಂದೆಯೇ ಜಮೆ ಮಾಡಲಾಗಿತ್ತು. ಮುಖ್ಯಮಂತ್ರಿಗಳು ಇಂದು ಬಿಡುಗಡೆ ಮಾಡಿರುವ 63.77 ಕೋಟಿ ಹೆಚ್ಚುವರಿ ಪರಿಹಾರ ಮೊತ್ತವನ್ನು ಸಹ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮೆ ಮಾಡಿದೆ.

ಈ ಮೂಲಕ ಒಟ್ಟು ಪರಿಹಾರದ ಪ್ರಮಾಣವನ್ನು ಹೆಚ್ಚಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಈ ಕ್ರಮವು ಅತಿವೃಷ್ಟಿಯಿಂದ ಕಷ್ಟಕ್ಕೆ ಸಿಲುಕಿದ್ದ ಜಿಲ್ಲೆಯ ಸಾವಿರಾರು ರೈತರಿಗೆ ದೊಡ್ಡ ಮಟ್ಟದ ಆರ್ಥಿಕ ಚೇತರಿಕೆ ನೀಡಿದೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss