ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮಹಾಘಟಬಂಧನದ ಭಾರೀ ಸೋಲಿನ ನಂತರ, ಮೈತ್ರಿಯ ಅವಿಭಜ್ಯ ಸಾಥಿ ಆಗಿದ್ದ ಕಾಂಗ್ರೆಸ್ ಮತ್ತು ಆರ್ಜೆಡಿ ನಡುವೆ ಈಗ ಕಠಿಣ ವಾಗ್ವಾದಗಳು ಶುರುವಾಗಿವೆ. ಸೋಲಿಗೆ ಪರಸ್ಪರವೇ ಹೊಣೆ ಎಂದು ಇಬ್ಬರೂ ಪಕ್ಷಗಳ ನಾಯಕರು ಆರೋಪ–ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ.
ಇತ್ತೀಚೆಗೆ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ 243 ಕ್ಷೇತ್ರಗಳಲ್ಲಿ ನಡೆದ ಸ್ಪರ್ಧೆಯಲ್ಲಿ ಎನ್ಡಿಎ ಮೈತ್ರಿಕೂಟವು 202 ಸ್ಥಾನಗಳಲ್ಲಿಗೆಲುವು ಗಳಿಸಿದೆ. ಮಹಾಘಟಬಂಧನವು ಇದೇ ಸಂದರ್ಭದಲ್ಲಿ ಕೇವಲ 35 ಕ್ಷೇತ್ರಗಳಲ್ಲಿ ಜಯಗಳಿಸಿ ಹೀನಾಯ ಸೋಲುಂಡಿದೆ. ಈ ಮೈತ್ರಿಯಲ್ಲಿ ಪ್ರಮುಖ ಪಾಲುದಾರರಾಗಿದ್ದ ಅರ್ಜೆಡಿಗೆ 25 ಸ್ಥಾನಗಳು, ಹಾಗೂ ಕಾಂಗ್ರೆಸ್ಗೆ ಕೇವಲ 6 ಸ್ಥಾನಗಳು ದೊರೆತಿವೆ. ಸೋಲಿನ ಬಳಿಕ ನಡೆಯಿದ ಪಕ್ಷದ ಆಂತರಿಕ ಸಭೆಯಲ್ಲಿ, ಹಲವಾರು ಕಾಂಗ್ರೆಸ್ ಮುಖಂಡರು ನಾವು ಏಕಾಂಗಿಯಾಗಿ ಸ್ಪರ್ಧಿಸಿದ್ದರೆ ಉತ್ತಮ ಫಲಿತಾಂಶ ಸಿಗುತ್ತಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
61 ಅಭ್ಯರ್ಥಿಗಳೂ ಇದೇ ಅಭಿಪ್ರಾಯ ಹೊಂದಿದ್ದಾರೆ ಎಂದು ಸಭೆಗೆ ಹಾಜರಾಗಿದ್ದವರು ಹೇಳಿದ್ದಾರೆ. ಭವಿಷ್ಯದ ಕಾಯ್ರತಂತ್ರವನ್ನು ಪಕ್ಷದ ಹೈಕಮಾಂಡ್ ತೀರ್ಮಾನಿಸಬೇಕು ಎಂದು ಕಾಂಗ್ರೆಸ್ ನಾಯಕ ಶಕೀಲ್ ಅಹಮ್ಮದ್ ಖಾನ್ ಗಮನ ಹರಿಸಿದ್ದಾರೆ. ಖಾನ್ ಅವರು ಈ ಬಾರಿ ಕಡ್ಡಾ ಕ್ಷೇತ್ರದಿಂದ ಮೂರನೇ ಸಾರಿ ಗೆಲ್ಲುವ ವಿಶ್ವಾಸ ಹೊಂದಿದ್ದರೂ, ಜೆಡಿಯು ಅಭ್ಯರ್ಥಿ ದುಲಾಲ್ ಚಂದ್ರಗೋಸ್ವಾಮಿ ವಿರುದ್ಧ 18 ಸಾವಿರ ಮತಗಳಿಂದ ಸೋಲುಂಡಿದ್ದಾರೆ.
ಸಭೆಯಲ್ಲಿ ಭಾಗವಹಿಸಿದವರ ಪ್ರಕಾರ, ಆರ್ಜೆಡಿ ಆಡಳಿತದ ಅವಧಿಯಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿತ್ತು, ಜನಸಾಮಾನ್ಯರಲ್ಲಿ ಜಂಗಲ್ ರಾಜ್ ಭಯವನ್ನು ಎನ್ಡಿಎ ಮೈತ್ರಿ ಬಳಸಿಕೊಂಡಿತ್ತು, ಇದು ಕಾಂಗ್ರೆಸ್ ಅಭ್ಯರ್ಥಿಗಳ ಸೋಲಿಗೆ ಕಾರಣವಾಗಿದೆ ಎಂದು ಕೆಲವು ಮುಖಂಡರು ಅಭಿಪ್ರಾಯಪಟ್ಟಿದ್ದಾರೆ. ಮಂಡಲ್ ರಾಜಕಾರಣದ ಕಾಲದಲ್ಲಿ ಮೇಲ್ವರ್ಗದ ಮತದಾರರು ಕಾಂಗ್ರೆಸ್ ಕಡೆ ವಾಲುತ್ತಿದ್ದರು. ಆದರೆ ಆರ್ಜೆಡಿ ಜೊತೆ ಮೈತ್ರಿ ಮಾಡಿಕೊಂಡ ಕಾರಣ, ಆ ಮತದಾರರು ಬಿಜೆಪಿ ಕಡೆ ತಿರುಗಿದ್ದಾರೆ ಎಂಬ ಟೀಕೆ ಕಾಂಗ್ರೆಸ್ ಒಳಗೇ ಕೇಳಿಬಂದಿದೆ.
ಕಾಂಗ್ರೆಸ್ ಆರೋಪಗಳಿಗೆ ಕಠಿಣ ತಿರುಗೇಟು ನೀಡಿದ ಆರ್ಜೆಡಿಯ ರಾಜ್ಯ ಘಟಕದ ಅಧ್ಯಕ್ಷ ಮಂಗಾನಿ ಲಾಲ್ ಮಂಡಾನಿ, ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಲು ಬಯಸಿದರೆ, ಬನ್ನಿ—ಅದಾಗ ನಿಮ್ಮ ನಿಜವಾದ ಮೌಲ್ಯ ಗೊತ್ತಾಗುತ್ತದೆ” ಎಂದು ಹೇಳಿಕೆ ನೀಡಿದ್ದಾರೆ. ಅವರು ಇನ್ನೂ ಮುಂದೆ ಹೋಗಿ, ಕಾಂಗ್ರೆಸ್ಗೆ ಬಂದಿರುವ ಮತಗಳ ಮೆಜಾರೀಟಿ ನಮ್ಮ ಕೃಪೆಯಿಂದಲೇ ಸಿಕ್ಕಿವೆ. ಕಳೆದ ಚುನಾವಣೆಯಲ್ಲಿ 70 ಸೀಟುಗಳಲ್ಲಿ ಸ್ಪರ್ಧಿಸಿ 19 ಗೆದ್ದಿದ್ದರು. ಈ ಬಾರಿ ಅವರ ಪ್ರದರ್ಶನ ಶೋಚನೀಯವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಮಹಾಘಟಬಂಧನದೊಳಗೆ ಸೀಟು ಹಂಚಿಕೆ ಅಂತಿಮಗೊಳ್ಳುವುದು ಮತದಾನಕ್ಕೂ ಮುನ್ನದ ದಿನದವರೆಗೂ ವಿಳಂಬವಾಯಿತು. ಇದೇ ಕಾರಣದಿಂದ ಡಜನ್ಗೂ ಹೆಚ್ಚು ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷಗಳೇ ಪರಸ್ಪರ ಎದುರು ನಿಂತು ಹೋರಾಡುವ ಸ್ಥಿತಿ ಉಂಟಾಯಿತು. ಈ ಒಳಜಗಳವೂ ಸೋಲಿಗೆ ಪ್ರಮುಖ ಕಾರಣವಾಗಿದೆ ಎಂದು ಎರಡು ಪಕ್ಷಗಳೂ ಈಗ ಒಪ್ಪಿಕೊಂಡಿವೆ. ಬಿಹಾರ ಚುನಾವಣಾ ಸೋಲಿನ ಬಳಿಕ ಮಹಾಘಟಬಂಧನದ ಭವಿಷ್ಯ ಈಗ ಗಂಭೀರ ಪ್ರಶ್ನೆ ಎದುರಿಸುತ್ತಿದೆ. ಕಾಂಗ್ರೆಸ್—ಆರ್ಜೆಡಿ ನಡುವಿನ ಈ ವಾಕ್ಯಯುದ್ಧ ಮುಂದುವರಿದರೆ, ಬಿಹಾರದ ರಾಜಕೀಯದಲ್ಲಿ ಹೊಸ ಸಮೀಕರಣಗಳು ಜರುಗುವ ಸಾಧ್ಯತೆ ಹೆಚ್ಚಾಗಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ




