Wednesday, December 3, 2025

Latest Posts

ರಾಜ್ಯದಲ್ಲಿ ಹಲವು ಸಮಸ್ಯೆ ಇದ್ದರೂ ಬ್ರೇಕ್‌ಫಾಸ್ಟ್ ಮೀಟಿಂಗ್ ಅಂತಾ ಸ್ವಾರ್ಥ ಸಾಧನೆಯಲ್ಲೇ ಮುಳುಗಿದ್ದಾರೆ: ಆರ್.ಅಶೋಕ್

- Advertisement -

Political News: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದು, ರಾಜ್ಯದಲ್ಲಿ ಹಲವು ಸಮಸ್ಯೆಗಳಿದ್ದರೂ, ಅದನ್ನು ನಿರ್ಲಕ್ಷಿಸಿರುವ ಸಿಎಂ,ಡಿಸಿಎಂ ಬ್ರೇಕ್ಫಾಸ್ಟ್ ಮೀಟಿಂಗ್ ಎಂದು ಸ್ವಾರ್ಥ ಸಾಧನೆಯಲ್ಲಿ ಮುಳುಗಿದ್ದಾರೆಂದು ಕಿಡಿಕಾರಿದ್ದಾರೆ.

ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಅವರು, ರಸ್ತೆಗುಂಡಿ ಭಾಗ್ಯಕ್ಕೆ 558 ಬಲಿ! ರಾಜ್ಯದ 5 ಮಹಾನಗರಗಳಲ್ಲಿ ಕಳೆದ 11 ತಿಂಗಳಲ್ಲಿ ರಸ್ತೆಗುಂಡಿಗಳಿಂದ 558 ಸಾವುಗಳಾಗಿರುವ ಆತಂಕಕಾರಿ ಅಂಕಿ-ಅಂಶ ಬೆಳಕಿಗೆ ಬಂದಿದ್ದು, ಕಾಂಗ್ರೆಸ್ ಸರ್ಕಾರದ ದುರಾಡಳಿತ, ಅಸಮರ್ಥತೆಗೆ ಅಮಾಯಕ ನಾಗರಿಕರು ನಡುರಸ್ತೆಯಲ್ಲಿ ಪ್ರಾಣ ಬಿಡುವ ದುಸ್ಥಿತಿ ಎದುರಾಗಿದೆ ಎಂದು ಅಶೋಕ್ ಕಿಡಿಕಾರಿದ್ದಾರೆ.

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ, ರಾಜ್ಯದ ಉದ್ದಗಲಕ್ಕೂ ಯಮಸ್ವರೂಪಿ ಗಂಡಾ ಗುಂಡಿಗಳದ್ದೇ ಹಾವಳಿಯಾಗಿದೆ. ಇಡೀ ರಾಜ್ಯದಲ್ಲಿ ರಸ್ತೆಗಳು ಹದಗೆಟ್ಟಿವೆ. ಜನಸಾಮಾನ್ಯರು, ವಾಹನ ಸವಾರರು ದಿನನಿತ್ಯ ಛೀ ಥೂ ಎಂದು ಸರ್ಕಾರಕ್ಕೆ ಉಗಿಯುತ್ತಿದ್ದರೂ ನಿಮ್ಮ ದಪ್ಪ ಚರ್ಮದ ಸರ್ಕಾರ ಮಾತ್ರ ಪವರ್ ಶೇರಿಂಗ್, ಬ್ರೇಕ್ ಫಾಸ್ಟ್ ಮೀಟಿಂಗ್ ಅಂತ ಸ್ವಾರ್ಥ ಸಾಧನೆಯಲ್ಲೇ ಮುಳುಗಿರುವುದು ನಾಚಿಕೆಗೇಡಿನ ಸಂಗತಿ ಎಂದು ಆರ್.ಅಶೋಕ್ ಹೇಳಿದ್ದಾರೆ.

ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ಆರಂಭಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಶ್ವಾಸನೆ ನೀಡಿ 10 ದಿನಗಳು ಕಳೆದಿವೆ. ಆದರೆ ಮೆಕ್ಕೆಜೋಳ ಖರೀದಿ ಕೇಂದ್ರಗಳು ಪೊಳ್ಳು ಭರವಸೆಗಳಲ್ಲಿ, ಸರ್ಕಾರಿ ಆದೇಶ ಪತ್ರಗಳಲ್ಲಿ ಮಾತ್ರ ಇದೆಯೇ ಹೊರತು ಇದುವರೆಗೂ ರಾಜ್ಯದಲ್ಲಿ ಒಂದೇ ಒಂದು ಖರೀದಿ ಕೇಂದ್ರ ಆರಂಭವಾಗಿಲ್ಲ ಎಂದು ಆರ್.ಅಶೋಕ್ ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಲು ಇನ್ನೂ ಎಷ್ಟು ದಿನ ಬೇಕು ಸ್ವಾಮಿ? ಹೈಕಮಾಂಡ್ ಏಜೆಂಟ್ ಕೆ.ಸಿ.ವೇಣುಗೋಪಾಲ್ ಆದೇಶಕ್ಕೆ ಕಾಯ್ತಾ ಇದೀರಾ? ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಮನೆಯಲ್ಲಿ ಬ್ರೇಕ್ ಫಾಸ್ಟ್ ಮೀಟಿಂಗ್ ಮುಗಿಯಲಿ ಅಂತಾ wait ಮಾಡ್ತಾ ಇದೀರಾ? ಎಂದು ಅಶೋಕ್ ಪ್ರಶ್ನಿಸಿದ್ದಾರೆ.

ರೈತರ ಕಷ್ಟಕ್ಕೆ ಸ್ಪಂದಿಸದ ನಿಮ್ಮಂಥವರಿಗೆ ಯಾಕೆ ಸ್ವಾಮಿ ಅಧಿಕಾರ, ಕುರ್ಚಿ? ಜನ ಈ ನಾಲಾಯಕ್ ಸರ್ಕಾರವನ್ನ ಹಾದಿ ಬೀದಿಯಲ್ಲಿ ಛೀ ಥೂ ಅಂತ ಉಗಿಯುತ್ತಿದ್ದಾರೆ, ಶಾಪ ಹಾಕುತ್ತಿದ್ದಾರೆ. ಅನ್ನದಾತರು ದಿನನಿತ್ಯ ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿರುವ ನಿಮ್ಮ ಕಾಂಗ್ರೆಸ್ ಪಕ್ಷಕ್ಕೆ ಅವರ ನೋವಿನ ಶಾಪ ತಟ್ಟದೇ ಇರದು ಎಂದು ಆರ್.ಅಶೋಕ್ ಹೇಳಿದ್ದಾರೆ.

- Advertisement -

Latest Posts

Don't Miss