Udupi News: ಕೆಲ ದಿನಗಳ ಹಿಂದೆ ಪ್ರಧಾನಿ ಮೋದಿ ಉಡುಪಿಗೆ ಬಂದಿದ್ದರು. ಈ ವೇಳೆ ಸ್ವರ್ಣ ಲೇಪಿತ ಕನಕನ ಕಿಂಡಿಯ ಉದ್ಘಾಟನೆ ಮಾಡಿದ್ದರು. ಈ ಸ್ವರ್ಣ ಲೇಪನ ಮಾಡಿಸಿದ್ದು, ಬಿಜೆಪಿ ಮುಖಂಡ ಪ್ರಮೋದ್ ಮಧ್ವರಾಜ್. ಆದರೆ ಅವರಿಗೇ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶವಿರಲಿಲ್ಲ. ಅವರು ದೂರದಿಂದಲೇ ಉದ್ಘಾಟನೆ ನೋಡಬೇಕಾಯಿತು. ಈ ವಿಚಾರಕ್ಕೆ ಸಂಬಂಧಿಸಿದಂತೆ, ಇಂದು ಅವರೇ ಮಾತನಾಡಿದ್ದಾರೆ.
ಪ್ರಧಾನಿಗಳು ಸ್ವರ್ಣ ಕವಚ ಅರ್ಪಿಸುವಾಗ ಅವರ ಜತೆ ಇರಬೇಕು ಎಂದು ನನಗೆ ಮನಸ್ಸಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ನನಗೇನು ಬೇಸರವಿಲ್ಲ. ಈ ಅವಕಾಶವನ್ನು ಯಾರಾದರೂ ಉದ್ಧೇಶಪೂರ್ವಕವಾಗಿ ತಪ್ಪಿಸಿದರೆ, ಅದು ಅವರ ರಾಜಕೀಯ ತಪ್ಪು ಹೆಜ್ಜೆ ಎಂದು ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ನನ್ನ ತಂದೆ ಮಲ್ಪೆ ಮಧ್ವರಾಜ್ ಅವರು ಕನಕನ ಕಿಂಡಿ ನಿರ್ಮಿಸಿದ್ದು, ಇದರ ಅಭಿವೃದ್ಧಿಗಾಗಿ ನಾನು ಸಲಹೆ ಕೇಳಿದ್ದೆ. ಅದಕ್ಕೆ ಪುತ್ತಿಗೆ ಶ್ರೀಗಳು, ಅದಕ್ಕೆ ಸ್ವರ್ಣ ಕವಚ ಮಾಡಿಸಿ ಎಂದು ಸಲಹೆ ನೀಡಿದ್ದರು. ಅದರಂತೆ ನಾನು ಸುವರ್ಣ ಕವಚ ಅರ್ಪಿಸಿದ್ದೆ. ಪ್ರಧಾನಿಗಳು ಇದರ ಉದ್ಘಾಟನೆಗೆ ಬರುತ್ತಾರೆ ಎಂದಾಗ ಖುಷಿಯಾಗಿದ್ದೆ. ಆದರೆ ಅವರ ಜತೆಗಿರುವ ಅವಕಾಶ ನನಗೆ ಕೈತಪ್ಪಿತು. ಕೆಲ ಪತ್ರಿಕೆಗಳಲ್ಲಿ ನನಗೆ ಸೂತಕವಿದ್ದ ಕಾರಣ, ನಾನು ಕಾರ್ಯಕ್ರಮದಲ್ಲಿ ಭಾಗವಹಿಸಲಿಲ್ಲ ಎಂದು ಬರೆಯಲಾಗಿತ್ತು. ಆದರೆ ಹಾಗೇನು ಇರಲಿಲ್ಲವೆಂದು ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಅಲ್ಲದೇ ನಾನು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ನನ್ನ ಫೋಟೋ, ಆಧಾರ್ ಕಾರ್ಡ್ ಕೋರಿದ್ದರು. ನಾನು ನೀಡಿದ್ದೆ. ಆದರೆ ಉದ್ಘಾಟನೆಯ ಮುಂಚಿನ ದಿನ ರಾತ್ರಿ ಪೋಲೀಸರು ಕರೆ ಮಾಡಿ, ಇದರಲ್ಲಿ ನಿಮ್ಮ ಹೆಸರಿಲ್ಲವೆಂದರು. ಹಾಗಾಗಿ ನಾನು ಬೇರೆ ಪಾಸ್ ಖರೀದಿಸಲು ಆಗಲಿಲ್ಲ. ಆದ ಕಾರಣ ಮನೆಯಲ್ಲೇ ಕುಳಿತು ಮಾಧ್ಯಮದಲ್ಲಿ ಕಾರ್ಯಕ್ರಮವನ್ನು ವೀಕ್ಷಿಸಿದೆ ಎಂದು ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಮಂಗಳೂರು, ಉಡುಪಿ, ಕುಂದಾಪುರ ತಾಲೂಕಿನ ಯಾವುದೇ ಜಾಹೀರಾತು ನೀಡಲು ಸಂಪರ್ಕಿಸಿ: 9743599340, ಶ್ರೀಕಾಂತ್ ಸೋಮಯಾಜಿ.

