Political News: ರಾಜ್ಯ ರಾಜಕಾರಣದಲ್ಲಿ ಪ್ರತಿದಿನ ಸಿಎಂ ಸ್ಥಾನಕ್ಕೆ ಸಂಬಂಧಿಸಿದಂತೆ ಚರ್ಚೆಗಳು ಜೋರಾಗಿದೆ. ಹೇಳಿಕೆ-ಪ್ರತಿಕ್ರಿಯೆಗಳು ಹೆಚ್ಚಾಗಿದೆ. ಈ ಮಧ್ಯೆ ರಾಜ್ಯದಲ್ಲಿ ಸಂಬಂಧಿಸಿದ ಸಮಸ್ಯೆಗಳ ಕಡೆಯೂ ಗಮನ ನೀಡಿ ಎಂದು ಬಿಜೆಪಿ ನಾಯಕರು ಕೂಡ ಕಾಂಗ್ರೆಸ್ ನಾಯಕರಿಗೆ ನೆನಪಿಸುತ್ತಿದ್ದಾರೆ. ಅದೇ ರೀತಿ ಆರ್.ಅಶೋಕ್ ಕೂಡ ಸಿಎಂ ಸಿದ್ದರಾಮಯ್ಯನವರಿಗೆ, ಸರ್ಕಾರಿ ಶಾಲೆ ಪ್ರವಾಸ ಮಾಡಿ ಅಂತಾ ವಿನಂತಿಸಿದ್ದಾರೆ.
ಸಿಎಂ ಸಿದ್ದರಾಮಯ್ಯನವರೇ, ಕಾಂಗ್ರೆಸ್ ಪಕ್ಷಕ್ಕೆ ಸೇರಿ ಸರಿಸುಮಾರು 20 ವರ್ಷಗಳಾದ ಮೇಲೆ ಮೊಟ್ಟಮೊದಲ ಬಾರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಮನೆಗೆ ಭೇಟಿ ನೀಡಿ, ನಾಟಿಕೋಳಿ ತಿಂಡಿ ತಿಂದು “ಹೋಮ್ ಟೂರ್” ಮಾಡಿಕೊಂಡು ಬಂದಿದ್ದೀರಿ.
ಮುಂದಿನ ಬ್ರೇಕ್ ಫಾಸ್ಟ್ ಮೀಟಿಂಗ್ ಎಲ್ಲಿ, ಯಾರ ಜೊತೆ ಅಂತ ನಿಮ್ಮ ಹೈಕಮಾಂಡ್ ಏಜೆಂಟ್ ಕೆ.ಸಿ.ವೇಣುಗೋಪಾಲ್ ಅವರು ಆದೇಶ ಕೊಡುವುದಕ್ಕೂ ಮುಂಚೆ ಒಮ್ಮೆ “ಸರ್ಕಾರಿ ಸ್ಕೂಲ್ ಟೂರ್” ಮಾಡಿಕೊಂಡು ಬನ್ನಿ ಸ್ವಾಮಿ ಎಂದು ಅಶೋಕ್ ಎಕ್ಸ್ ಖಾತೆಯಲ್ಲಿ ಬರೆದು ವ್ಯಂಗ್ಯವಾಡಿದ್ದಾರೆ.
ಶೌಚಾಲಯಗಳೇ ಇಲ್ಲದ ಶಾಲೆಗಳು, ಶಿಥಿಲಾವಸ್ಥೆಯಲ್ಲಿರುವ ಶಾಲಾ ಕೊಠಡಿಗಳು, ಬಿದ್ದು ಹೋಗುತ್ತಿರುವ ಗೋಡೆಗಳು, ಶಿಕ್ಷಕರಿಲ್ಲದ ತರಗತಿಗಳನ್ನು ಒಮ್ಮೆ ಕಣ್ತುಂಬಿಕೊಂಡು ಬನ್ನಿ ಸಿದ್ದರಾಮಯ್ಯನವರೇ. ಇಂತಹ ಲಜ್ಜೆಗೆಟ್ಟ ಸರ್ಕಾರವನ್ನ ಇಡೀ ಪ್ರಪಂಚದ ಇತಿಹಾಸದಲ್ಲೇ ಕಾಣಲು ಸಾಧ್ಯವಿಲ್ಲ ಎಂದು ಆರ್.ಅಶೋಕ್ ಹೇಳಿದ್ದಾರೆ..
ಇನ್ನು ಈ ರೀತಿ ವ್ಯಂಗ್ಯವಾಡಲು ಕಾರಣವೇನೆಂದರೆ, ಹಲವು ಸರ್ಕಾರಿ ಶಾಲೆಗಳಲ್ಲಿ ಸರಿಯಾಗಿ ಶೌಚಾಲಯವಿಲ್ಲ. ಶೌಚಾಲಯವಿಲ್ಲದೇ ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ನಿರ್ಮಾಣವಾಾಗಿದೆ. ಹಲವರು ಶಾಲೆಗೆ ಬರಲು ಮುಜುಗರ ಪಡುತ್ತಿದ್ದಾರೆ. ಇಂಥ ಸಮಸ್ಯೆಗಳ ಬಗ್ಗೆ ಗಮನ ಹರಿಸಿ ಎಂದು ಆರ್.ಅಶೋಕ್ ವ್ಯಂಗ್ಯ ಮನವಿ ಮಾಡಿದ್ದಾರೆ.

