ಸೀಬೆ ಅಥವಾ ಪೇರಳೆ ಹಣ್ಣಿನಲ್ಲಿ ಪೌಷ್ಟಿಕಾಂಶದ ಪ್ರಮಾಣ ತುಂಬಾ ಹೆಚ್ಚಾಗಿರುವುದರಿಂದ, ಇದನ್ನು ನಿಯಮಿತವಾಗಿ ಆದರೆ ಮಿತವಾಗಿ ಸೇವನೆ ಮಾಡುವುದರಿಂದ ಗರ್ಭಿಣಿಯರಿಗೆ ಅನೇಕ ಆರೋಗ್ಯಕರ ಪ್ರಯೋಜನಗಳು ದೊರೆಯುತ್ತವೆ. ವಿಟಮಿನ್ ಸಿ ಹಾಗೂ ಶಕ್ತಿವರ್ಧಕ ಆಂಟಿ ಆಕ್ಸಿಡೆಂಟ್ಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ದೊಡ್ಡ ಪಾತ್ರವಹಿಸುತ್ತವೆ. ಕಿತ್ತಳೆ ಹಣ್ಣಿಗಿಂತಲೂ ಅಧಿಕ ವಿಟಮಿನ್ ಸಿ ಪೇರಳೆಯಲ್ಲಿ ದೊರೆಯುವುದರಿಂದ, ಚಳಿಗಾಲದಲ್ಲಿ ಇದನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದು ಅತ್ಯಂತ ಪ್ರಯೋಜನಕಾರಿ.
ಚಳಿಗಾಲದಲ್ಲಿ ಗರ್ಭಿಣಿಯರು ಪೇರಳೆಯನ್ನು ಸೇವಿಸುವುದು ದೇಹವನ್ನು ಹೈಡ್ರೇಟ್ ಆಗಿರಲು ಸಹಾಯ ಮಾಡುತ್ತದೆ ಹಾಗೂ ಶೀತ–ಜ್ವರದಂತಹ ಸಾಮಾನ್ಯ ತೊಂದರೆಗಳಿಂದ ದೂರ ಇರುತ್ತದೆ. ಇದಲ್ಲದೆ, ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುವ ಗುಣ ಇದರಲ್ಲಿ ಇದೆ. ಪೇರಳೆಯಲ್ಲಿ ತಾಮ್ರ, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಮ್ಯಾಂಗನೀಸ್ ಸೇರಿದಂತೆ ಹಲವು ಅಗತ್ಯ ಪೋಷಕಾಂಶಗಳು ಸಮೃದ್ಧವಾಗಿ ದೊರೆತು, ದೇಹದ ಆರೋಗ್ಯವನ್ನು ಕಾಪಾಡುತ್ತವೆ.
ಪೇರಳೆಯಲ್ಲಿರುವ ಕಬ್ಬಿಣವು ಗರ್ಭಿಣಿಯರ ರಕ್ತಹೀನತೆ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯಕ. ವಿಟಮಿನ್ ಬಿ9 ಮತ್ತು ಫೋಲಿಕ್ ಆಮ್ಲ ಮಗುವಿನ ನರಮಂಡಲದ ಬೆಳವಣಿಗೆಗೆ ಅತ್ಯಂತ ಮುಖ್ಯವಾದವು. ಜೊತೆಗೆ, ನೈಸರ್ಗಿಕ ಕ್ಯಾಲ್ಸಿಯಂ ಗರ್ಭಿಣಿಯರಿಗೂ, ಹೊಟ್ಟೆಯಲ್ಲಿರುವ ಮಗುವಿನ ಬೆಳವಣಿಗೆಯಿಗೂ ಬಹಳ ಉಪಯೋಗಕಾರಿ. ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ ಹಾಗೂ ಹೃದಯ ಆರೋಗ್ಯವನ್ನು ಕಾಪಾಡಲು ನೆರವಾಗುತ್ತದೆ.
ಪೇರಳೆ ಹಣ್ಣಿನಲ್ಲಿ ಇರುವ ನಾರಿನಾಂಶ ಮಲಬದ್ಧತೆಯಿಂದ ಪರಿಹಾರ ನೀಡುತ್ತದೆ ಹಾಗೂ ಮೂಲವ್ಯಾಧಿಯನ್ನು ತಡೆಯುತ್ತದೆ. ತಿನ್ನುವಾಗ ಬೀಜಗಳನ್ನು ತೆಗೆದು ತಿರುಳನ್ನು ಮಾತ್ರ ಸೇವಿಸುವುದು ಉತ್ತಮ. ಮೆಗ್ನೀಸಿಯಮ್ ಸಮೃದ್ಧವಾಗಿರುವುದರಿಂದ ಸ್ನಾಯುಗಳು ಮತ್ತು ನರಗಳನ್ನು ಸಡಿಲಗೊಳಿಸುತ್ತದೆ, ಸೆಳೆತದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಒಟ್ಟಾರೆ, ಪೇರಳೆ ಗರ್ಭಿಣಿಯರಿಗೆ ಸುರಕ್ಷಿತ, ಪೌಷ್ಟಿಕ ಹಾಗೂ ಆರೋಗ್ಯಕರ ಹಣ್ಣಾಗಿ ಪರಿಗಣಿಸಲಾಗಿದೆ…..
ವರದಿ : ಗಾಯತ್ರಿ ನಾಗರಾಜ್




