ಪ್ರಯಾಣಿಕರಿಲ್ಲದೇ ಟ್ಯಾಕ್ಸಿಗಳು ಖಾಲಿ : ಓಲಾ–ಉಬರ್ ಚಾಲಕರಿಗೂ ನಷ್ಟ

ಇಂಡಿಗೊ ವಿಮಾನಗಳ ಹಾರಾಟ ರದ್ದಾದ ಆರಂಭಿಕ ದಿನಗಳಲ್ಲಿ ಉಂಟಾದ ಅವ್ಯವಸ್ಥೆಯ ಲಾಭ ಪಡೆದಿದ್ದ ಟ್ಯಾಕ್ಸಿ ಚಾಲಕರು ಈಗ ಪ್ರಯಾಣಿಕರ ಕೊರತೆಯಿಂದ ನಷ್ಟಕ್ಕೆ ಒಳಗಾಗುತ್ತಿದ್ದಾರೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಅಗ್ರಿಗೇಟರ್ ಕ್ಯಾಬ್‌ಗಳು ಹಾಗೂ ಖಾಸಗಿ ಟ್ಯಾಕ್ಸಿಗಳ ಆದಾಯದಲ್ಲಿ ತೀವ್ರ ಕುಸಿತ ದಾಖಲಾಗಿದೆ.

ವಿಮಾನ ನಿಲ್ದಾಣದ ಸುತ್ತಮುತ್ತ 10 ಸಾವಿರಕ್ಕೂ ಹೆಚ್ಚು ಟ್ಯಾಕ್ಸಿಗಳು ಸಂಚರಿಸುತ್ತಿವೆ. ಇಂಡಿಗೊ ವಿಮಾನ ಸಂಚಾರ ದಿಢೀರ್ ರದ್ದಾದ ಸಂದರ್ಭದಲ್ಲಿ ನಗರಕ್ಕೆ ವಾಪಸಾಗುವವರ ಸಂಖ್ಯೆ ಏಕಾಏಕಿ ಏರಿಕೆಯಾಗಿದ್ದು, ಟ್ಯಾಕ್ಸಿಗಳಿಗೆ ಹೆಚ್ಚು ಬೇಡಿಕೆ ಉಂಟಾಗಿತ್ತು. ಈ ಪರಿಸ್ಥಿತಿಯ ಲಾಭ ಪಡೆಯಲು ಕೆಲವು ಟ್ಯಾಕ್ಸಿ ಚಾಲಕರು ಬಾಡಿಗೆ ದರವನ್ನು ದೊಡ್ಡ ಮಟ್ಟದಲ್ಲಿ ಹೆಚ್ಚಿಸಿದ್ದರು. ಈ ಘಟನೆಗೆ ಸಂಬಂಧಿಸಿದ ವಿಡಿಯೊಗಳು ಮತ್ತು ಮಾಹಿತಿಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ್ದವು.

ಇದೀಗ ವಿಮಾನ ಸಂಚಾರದ ಗೊಂದಲದಿಂದ ಪ್ರಯಾಣಿಕರ ಸಂಖ್ಯೆ ಕುಸಿದಿದ್ದು, ಪ್ರಯಾಣಿಕರು ಹೆಚ್ಚಿದ ಬಾಡಿಗೆ ನೀಡಲು ಹಿಂಜರಿಯುತ್ತಿರುವುದರಿಂದ ಟ್ಯಾಕ್ಸಿಗಳು ಖಾಲಿಯಾಗಿವೆ. “ಡಿಸೆಂಬರ್ 4ರಂದು ಬೇಡಿಕೆ ಅತ್ಯಂತ ಹೆಚ್ಚಿತ್ತು. ನಂತರ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಇದೀಗ ಎರಡು ದಿನಗಳಿಂದ ಯಾವುದೇ ಬೇಡಿಕೆ ಇಲ್ಲ,” ಎಂದು ಟ್ಯಾಕ್ಸಿ ಚಾಲಕ ಅನ್ಸರ್ ಪಾಷಾ ಹೇಳಿದರು.

ಸಾಮಾನ್ಯವಾಗಿ ಕೆಐಎಯಿಂದ ಮೆಜೆಸ್ಟಿಕ್‌ವರೆಗೆ ₹1200 ದರ ಇರುವುದಾದರೂ, ಗೊಂದಲದ ದಿನಗಳಲ್ಲಿ ₹1800 ರಿಂದ ₹3000 ವರೆಗೆ ವಸೂಲಿ ಮಾಡಲಾಗಿದ್ದುದಾಗಿ ಅವರು ತಿಳಿಸಿದರು. ಇನ್ನು ಓಲಾ ಮತ್ತು ಉಬರ್ ಕ್ಯಾಬ್‌ಗಳ ದರಗಳು ವಿಮಾನ ದತ್ತಾಂಶವನ್ನು ಅವಲಂಬಿಸಿರುವುದರಿಂದ ಅತಿಯಾದ ಭಾವ ಏರಿಕೆ ಸಾಧ್ಯವಿಲ್ಲ. ಆದರೆ ಬೇಡಿಕೆ ಕುಸಿದಾಗ ಉಂಟಾಗುವ ನಷ್ಟವನ್ನು ಚಾಲಕರೇ ಹೊತ್ತುಕೊಳ್ಳಬೇಕಾಗುತ್ತದೆ ಎಂದು ಅವರು ಹೇಳಿದರು.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

About The Author