ರಾಷ್ಟ್ರ ಪ್ರಶಸ್ತಿ ವಿಜೇತ ‘ತಿಥಿ’ ಚಿತ್ರದ ನಾಯಕ ನಟ ಅಭಿಯ ನೈಜ ಬದುಕು ಈಗ ಎಲ್ಲರ ಗಮನಸೆಳೆದಿದೆ. ಚಿತ್ರರಂಗದಲ್ಲಿ ಹೆಸರು ಮಾಡಿದ್ದರೂ, ಅವಕಾಶಗಳ ಕೊರತೆಯಿಂದ ಅಭಿನಯವನ್ನು ಬದಿಗಿಟ್ಟು ಗ್ರಾಮದಲ್ಲಿ ಕೂಲಿ ಕೆಲಸ ಮೂಲಕ ಜೀವನ ಸಾಗಿಸುತ್ತಿರುವುದು ವಾಸ್ತವ.
ಮಂಡ್ಯ ತಾಲೂಕಿನ ಹುಲಿಕೆರೆ ಕೊಪ್ಪಲು ಗ್ರಾಮದ ನಿವಾಸಿಯಾದ ಅಭಿ, ಇಂದಿಗೂ ಕೂಡಾ ಮರ ಕಟಾವು ಮತ್ತು ಮರಗಳನ್ನು ಕಡಿದು ಸಾಗಿಸುವ ಕೂಲಿ ಕೆಲಸ ಮಾಡುವ ಮೂಲಕ ತನ್ನ ಕುಟುಂಬದ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾನೆ. ಅಭಿ ‘ತಿಥಿ’ಯಲ್ಲಷ್ಟೇ ಅಲ್ಲದೆ ತರ್ಲೆ ವಿಲೇಜ್, ಹಳ್ಳಿ ಪಂಚಾಯ್ತಿ, ಏನ್ ನಿನ್ ಪ್ರಾಬ್ಲಮ್, ಮೈನಸ್ ತ್ರಿ ಪ್ಲಸ್ ಒನ್ ಸೇರಿದಂತೆ ಐದಾರು ಸಿನಿಮಾಗಳಲ್ಲಿ ನಟನೆಯನ್ನು ಮೆರೆದಿದ್ದರೂ, ಕನ್ನಡ ಚಿತ್ರರಂಗದಲ್ಲಿ ನಿರಂತರ ಅವಕಾಶ ಸಿಗದೆ ಗ್ರಾಮ ಜೀವನವನ್ನೇ ಮುಂದುವರೆಸಿದ್ದಾರೆ.
“ಸಿನಿಮಾ ಜೀವನವೇ ಒಂದು… ನೈಜ ಜೀವನವೇ ಮತ್ತೊಂದು. ನನ್ನ ಮನೆ–ಸಂಸಾರ, ಜವಾಬ್ದಾರಿಗಳ ಕಾರಣ ನಾನು ಈ ಕೆಲಸ ಮಾಡಲೇಬೇಕಾಗಿದೆ. ಈ ಶ್ರಮದ ಬದುಕಿನಲ್ಲೂ ನನಗೆ ಸಂತಸ ಇದೆ,” ಎಂದು ಅಭಿ ಹೇಳಿದ್ದಾರೆ. ಮುಂದೂ ಅವಕಾಶ ಸಿಕ್ಕರೆ ಮತ್ತೆ ನಟನೆಯತ್ತ ಮರಳಲು ಆಸಕ್ತಿ ವ್ಯಕ್ತಪಡಿಸಿರುವ ಅಭಿ, “ಸಿನಿಮಾದಲ್ಲಿ ಚಾನ್ಸ್ ಸಿಕ್ಕರೆ ಖಂಡಿತಾ ಮಾಡ್ತಿನಿ… ಸಿಗದೇ ಇದ್ದರೆ ಈ ಶ್ರಮದ ಬದುಕಿನಲ್ಲೇ ಇರುತ್ತೇನೆ ಎಂದು ಹೇಳಿದ್ದಾರೆ.
ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದ ಕಲಾವಿದ ಇಂದೀಗ ಸಾಮಾನ್ಯ ಕೂಲಿ ಕೆಲಸ ಮಾಡುತ್ತಿರುವುದು ಮನಮುಟ್ಟುವಂತಹ ಪರಿಸ್ಥಿತಿ. ಅಭಿಗೆ ಚಿತ್ರರಂಗದಿಂದ ಮತ್ತಷ್ಟು ಅವಕಾಶಗಳು ದೊರಕಲಿ ಎಂದು ಗ್ರಾಮಸ್ಥರು ಮತ್ತು ಅಭಿಮಾನಿಗಳು ಆಶಿಸುತ್ತಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ




