ಸಿದ್ದು-DK ದೆಹಲಿ ಯಾತ್ರೆ ಬೆನ್ನಲ್ಲೇ ರಾಜ್ಯದಲ್ಲಿ ಮತ್ತೊಂದು ಹೊಸ ‘ಪಕ್ಷ’

ಕರ್ನಾಟಕದ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಲು ಮಾಜಿ ಕೇಂದ್ರ ಸಚಿವ ಇಬ್ರಾಹಿಂ ಸಜ್ಜಾಗಿದ್ದಾರೆ. ಪ್ರಸ್ತುತ ವ್ಯವಸ್ಥೆಯಿಂದ ಬೇಸತ್ತಿರುವ ಜನರಿಗಾಗಿ ಅವರು ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸುತ್ತಿದ್ದು, ರಾಜ್ಯದಲ್ಲಿ ನಿರ್ಣಾಯಕ ಮೂರನೇ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ಘೋಷಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಇಬ್ರಾಹಿಂ, ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಗೆ ಪರ್ಯಾಯವಾಗಿ ಪ್ರಬಲ ಶಕ್ತಿಯ ಅಗತ್ಯವಿದೆ. ನಾನು ಜನರಿಗಾಗಿ ಆ ಮೂರನೇ ಶಕ್ತಿಯನ್ನು ಕಟ್ಟಲು ಸಿದ್ಧನಾಗಿದ್ದೇನೆ. ಮುಂದಿನ ಹಂತದ ನಿರ್ಧಾರಗಳನ್ನು ಕೈಗೊಳ್ಳಲು ಇಂದು ಕಲಬುರಗಿಯಲ್ಲಿ ಮಹತ್ವದ ಸಭೆಯನ್ನು ಕರೆಯಲಾಗಿದೆ. ಈ ಸಭೆಯಲ್ಲಿ ಪಕ್ಷದ ರೂಪುರೇಷೆ ಮತ್ತು ಚಿನ್ಹೆಯ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

ತಮ್ಮ ಹೊಸ ಪಕ್ಷದ ಘೋಷಣೆಯೊಂದಿಗೆ ಇಬ್ರಾಹಿಂ ರಾಜಕೀಯ ಬಾಂಬ್ ಸಿಡಿಸಿದ್ದಾರೆ ರಾಜ್ಯದ ಮೂರು ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ನ ಹಲವು ಹಾಲಿ ಶಾಸಕರು ಈಗಾಗಲೇ ತಮ್ಮ ಸಂಪರ್ಕದಲ್ಲಿದ್ದಾರೆ ಎಂದು ಸ್ಫೋಟಕ ಮಾಹಿತಿ ನೀಡಿದ್ದಾರೆ. ಹಲವು ನಾಯಕರು ಕರೆ ಮಾಡಿ. ನಿಮ್ಮ ಪಾರ್ಟಿಗೆ ಸೇರಲು ನಾವು ಸಿದ್ಧರಿದ್ದೇವೆ ಎಂದು ಸ್ವತಃ ಹೇಳಿಕೊಂಡಿದ್ದಾರೆ. ಹೀಗಾಗಿ ಮುಂಬರುವ ದಿನಗಳಲ್ಲಿ ರಾಜ್ಯ ರಾಜಕೀಯದ ಚಿತ್ರಣವೇ ಬದಲಾಗಲಿದೆ ಎಂಬ ಸುಳಿವು ನೀಡಿದರು.

ರಾಜ್ಯದಲ್ಲಿ ನಡೆಯುತ್ತಿರುವ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು ಕೇವಲ ಕುರ್ಚಿ ಕಿತ್ತಾಟದ ವಿಚಾರದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳು ಮುಳುಗಿವೆ ಅಧಿಕಾರ ಲಾಲಸೆಯ ರಾಜಕಾರಣದಿಂದಾಗಿ ಅಖಂಡ ಕರ್ನಾಟಕ ಮುಂದೊಂದು ದಿನ ಇಬ್ಬಾಗವಾಗುವ ಅಪಾಯವಿದೆ ಎಂದು ಗಂಭೀರ ಎಚ್ಚರಿಕೆ ನೀಡಿದರು.

ವರದಿ : ಲಾವಣ್ಯ ಅನಿಗೋಳ

About The Author