Mandya: ಕಲೆ ಮತ್ತು ಪರಿಶ್ರಮ ಒಂದಾದಾಗ ಅಲ್ಲಿ ಅಸಾಧ್ಯವಾದದ್ದು ಯಾವುದೂ ಇಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಮಂಡ್ಯ ಜಿಲ್ಲೆಯ ಪ್ರತಿಭೆಯೊಬ್ಬರು. ‘ಏಷ್ಯಾದ ಅತಿ ಉದ್ದದ ಬಟ್ಟೆಯ ಮೇಲಿನ ಮೆಹಂದಿ ಕಲಾಕೃತಿ’ ರಚಿಸುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ನಂತಹ ಮಹತ್ವದ ದಾಖಲೆಗಳಿಗೆ ಕುಶಲ ನಾಗೇಶ್ ಪಾತ್ರರಾಗಿದ್ದಾರೆ.
ವೀಕ್ಷಕರೇ, ಬರೋಬ್ಬರಿ 213 ಅಡಿ ಉದ್ದದ ಬಟ್ಟೆಯ ಮೇಲೆ ಕೇವಲ 40 ಗಂಟೆಗಳ ಅವಧಿಯಲ್ಲಿ ಅತ್ಯದ್ಭುತ ಮೆಹಂದಿ ಕಲಾಕೃತಿಯನ್ನು ಮೂಡಿಸುವ ಮೂಲಕ ಕುಶಲ ನಾಗೇಶ್ ಅವರು ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ವಿಶಿಷ್ಟ ಸಾಧನೆ ಈಗ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್—ಎರಡೂ ಪ್ರತಿಷ್ಠಿತ ದಾಖಲೆ ಪುಸ್ತಕಗಳಲ್ಲಿ ಅಧಿಕೃತವಾಗಿ ಅನುಮೋದನೆಗೊಂಡಿದೆ.
ಕುಶಲ ನಾಗೇಶ್ ಅವರ ಈ ಯಶಸ್ಸಿನ ಹಿಂದೆ ಹುಟ್ಟೂರಿನ ಮೇಲಿನ ಅಪಾರ ಪ್ರೀತಿ ಮತ್ತು ಭಾವನಾತ್ಮಕ ನಂಟಿದೆ. ಶ್ರೀರಂಗಪಟ್ಟಣ ತಾಲ್ಲೂಕಿನ ನೆಲಮನೆಯ ಹೇಮಲತಾ ಕಾಟೇಗೌಡ ಅವರ ಪುತ್ರಿಯಾದ ಇವರು, ನ್ಯಾಮನಹಳ್ಳಿಯ ಅಣ್ಣೇಗೌಡ ಮತ್ತು ಯಶೋದಮ್ಮ ಅವರ ಸೊಸೆ. ಹುಟ್ಟಿ ಬೆಳೆದದ್ದು ವಿಶ್ವೇಶ್ವರ ನಗರದ ತಮ್ಮ ತಾತನ ಮನೆಯಲ್ಲಿ. ತಾತ ಜವರೇಗೌಡ ಹಾಗೂ ಅಜ್ಜಿ ಜಯಲಕ್ಷ್ಮಿ ಅವರ ಪ್ರೀತಿಯ ಮೊಮ್ಮಗಳಾದ ಇವರು, ಅಜ್ಜ-ಅಜ್ಜಿಯ ಊರಿನೊಂದಿಗಿನ ಆಳವಾದ ಬಾಂಧವ್ಯದ ಕಾರಣದಿಂದಲೇ ತಮ್ಮ ಈ ಮಹತ್ವದ ದಾಖಲೆ ಪ್ರಯತ್ನಕ್ಕೆ ವಿಶ್ವೇಶ್ವರ ನಗರವನ್ನೇ ವೇದಿಕೆಯನ್ನಾಗಿ ಆಯ್ಕೆ ಮಾಡಿಕೊಂಡಿದ್ದು ವಿಶೇಷ.




