ಕೊಪ್ಪಳ: ನಗರದ ಪ್ರವಾಸಿ ಮಂದಿರದಲ್ಲಿ ನಮ್ಮ ಕರ್ನಾಟಕ ಸೇನೆಯ ಕೊಪ್ಪಳ ಜಿಲ್ಲಾ ನೂತನ ಪದಾಧಿಕಾರಿಗಳ ಆಯ್ಕೆ ಮತ್ತು ಪದಗ್ರಹಣ ಕಾರ್ಯಕ್ರಮ ನಡೆಯಿತು. ನಮ್ಮ ಕರ್ನಾಟಕ ಸೇನೆಯ ರಾಜ್ಯಾಧ್ಯಕ್ಷ ಬಸವರಾಜ್ ಪಡುಕೋಟೆ ಅವರ ಆದೇಶದ ಮೇರೆಗೆ ಜಿಲ್ಲಾಮಟ್ಟದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ನಮ್ಮ ಕರ್ನಾಟಕ ಸೇನೆಯ ನೂತನ ಕೊಪ್ಪಳ ಜಿಲ್ಲಾ ಅಧ್ಯಕ್ಷರಾಗಿ ರಮೇಶ್ ಮೈನಳ್ಳಿ ಅವರನ್ನು ಆಯ್ಕೆ ಮಾಡಲಾಗಿದ್ದು, ಅವರನ್ನು ಅಧಿಕೃತವಾಗಿ ಪದಗ್ರಹಣ ಮಾಡಿಸಿ ಸನ್ಮಾನಿಸಲಾಯಿತು.
ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ನಮ್ಮ ಕರ್ನಾಟಕ ಸೇನೆಯ ರೈತ ಘಟಕದ ಜಿಲ್ಲಾ ಅಧ್ಯಕ್ಷ ಹನಮಂತ ಕೋಲ್ಕಾರ್, ಪ್ರಚಾರ ಸಮಿತಿಯ ಜಿಲ್ಲಾ ಅಧ್ಯಕ್ಷ ಬೆಳ್ಳಪ್ಪ ಬೇವಿನಹಳ್ಳಿ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು ಭಾಗವಹಿಸಿ ನೂತನ ಸದಸ್ಯರನ್ನು ಆಯ್ಕೆ ಮಾಡಿದರು. ಆಯ್ಕೆಯಾದ ಪದಾಧಿಕಾರಿಗಳಿಗೆ ನೇಮಕಾತಿ ಪತ್ರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ನೂತನ ಜಿಲ್ಲಾ ಅಧ್ಯಕ್ಷ ರಮೇಶ್ ಮೈನಳ್ಳಿ ಮಾತನಾಡಿ, ಕೊಪ್ಪಳ ಜಿಲ್ಲೆ ಎದುರಿಸುತ್ತಿರುವ ಹಲವು ಸಮಸ್ಯೆಗಳ ವಿರುದ್ಧ ಹೋರಾಟ ನಡೆಸಲು ನೂತನ ಪದಾಧಿಕಾರಿಗಳು ಸಜ್ಜಾಗಬೇಕು ಎಂದು ಕರೆ ನೀಡಿದರು. ಕನ್ನಡ ನೆಲ, ಜಲ ಮತ್ತು ಭಾಷೆಗೆ ಆಗುತ್ತಿರುವ ಅನ್ಯಾಯ ಹಾಗೂ ಭ್ರಷ್ಟಾಚಾರ ವಿರುದ್ಧ ಧ್ವನಿ ಎತ್ತಲು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಕರ್ನಾಟಕ ಸೇನೆಗೆ ಸೇರಬೇಕು ಎಂದು ಮನವಿ ಮಾಡಿದರು. ಇದೇ ವೇಳೆ, ಕೊಪ್ಪಳದ ಬಲ್ದೋಟ ಕಂಪನಿ ವಿಸ್ತರಣೆ, ಜಿಲ್ಲೆಯ ಸಾರಿಗೆ ವ್ಯವಸ್ಥೆಯ ಅವ್ಯವಸ್ಥೆ ಹಾಗೂ ರೈತರು ಎದುರಿಸುತ್ತಿರುವ ಸಮಸ್ಯೆಗಳ ವಿರುದ್ಧ ಸಂಘಟಿತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ




