ಒಂದು ಕಾಲದಲ್ಲಿ ಭಾರತದ ಆರ್ಥಿಕತೆಯನ್ನು ಅವಮಾನಿಸಲು ಬಳಸಲಾಗುತ್ತಿದ್ದ ಒಂದು ಪದ… ಭಾರತದ ಬೆಳವಣಿಗೆಯನ್ನು ನಿಧಾನಗತಿಯ ಸಂಕೇತವಾಗಿ ತೋರಿಸಲು ಅಂಟಿಸಲಾಗಿದ್ದ ಒಂದು ಟ್ಯಾಗ್… ಅದೇ ‘ಹಿಂದೂ ಪ್ರಗತಿ ದರ’. ಈ ಪದವನ್ನು ಕೇಳುತ್ತಿದ್ದಂತೆ, ಭಾರತ ಎಂದರೆ ನಿಧಾನ, ಹಿಂದುಳಿದ, ಮುಂದುವರಿಯದ ಆರ್ಥಿಕತೆ ಎಂಬ ಭಾವನೆ ಮೂಡಿಸುವ ಯತ್ನ ನಡೆದಿತ್ತು. ಧರ್ಮದ ಹೆಸರನ್ನೇ ಆರ್ಥಿಕ ಕುಸಿತಕ್ಕೆ ಕಾರಣವೆಂದು ತೋರಿಸುವ ಪ್ರಯತ್ನವೂ ಆಗಿತ್ತು. ಆದರೆ ಈಗ ಕಾಲ ಬದಲಾಗಿದೆ. ಭಾರತ ಬದಲಾಗಿದೆ. ಭಾರತದ ಆರ್ಥಿಕ ಶಕ್ತಿಯೇ ಬದಲಾಗಿದೆ. ಇತ್ತೀಚಿನ ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟವಾಗಿ ಹೇಳಿದ್ದಾರೆ. ಭಾರತ ಇಂದು ಹಿಂದೂ ಪ್ರಗತಿ ದರ ಎಂಬ ಹಳೆಯ ವ್ಯಾಖ್ಯಾನವನ್ನೇ ಮೀರಿದೆ ಎಂದು. ಹಾಗಾದರೆ ಇಲ್ಲಿರೋ ಪ್ರಶ್ನೆ – ಏನಿದು ಹಿಂದೂ ಪ್ರಗತಿ ದರ? ಈ ಪದವನ್ನು ಯಾರು ಹುಟ್ಟುಹಾಕಿದರು? ನಿಜಕ್ಕೂ ಹಿಂದೂ ಧರ್ಮಕ್ಕೂ ಭಾರತದ ನಿಧಾನ ಆರ್ಥಿಕ ಬೆಳವಣಿಗೆಗೂ ಸಂಬಂಧವಿತ್ತಾ? ಅಥವಾ ಇದು ಭಾರತವನ್ನು ಕಡಿಮೆಮಟ್ಟದಲ್ಲಿ ತೋರಿಸಲು ಬಳಸಿದ ರಾಜಕೀಯ–ಬೌದ್ಧಿಕ ಪ್ರಪಂಚದ ಪದವಾ? ಹಿಂದೂ ಪ್ರಗತಿ ದರ ಮೀರಿದ ಭಾರತ! ಇಲ್ಲಿದೆ ಸಂಪೂರ್ಣ ಮಾಹಿತಿ
ವಿಷಯ ಏನೆಂದ್ರೆ 1991ರ ಆರ್ಥಿಕ ಸುಧಾರಣೆಗಳಿಗೆ ಮೊದಲು, ಅಂದರೆ 1950ರಿಂದ 1980ರವರೆಗಿನ ಅವಧಿಯಲ್ಲಿ, ಭಾರತದ ಆರ್ಥಿಕ ಬೆಳವಣಿಗೆ ನಿಧಾನಗತಿಯಲ್ಲೇ ಮುಂದುವರಿದಿತ್ತು. ಈ ಅವಧಿಯಲ್ಲಿ ದೇಶದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಬೆಳವಣಿಗೆ ಸರಾಸರಿ ಸುಮಾರು 3.5 ಶೇಕಡಾರಷ್ಟರಲ್ಲೇ ಸ್ಥಿರವಾಗಿತ್ತು. ಈ ನಿಧಾನಗತಿಯ ಆರ್ಥಿಕ ಬೆಳವಣಿಗೆಯನ್ನು ವಿವರಿಸಲು ‘ಹಿಂದೂ ಪ್ರಗತಿ ದರ’ಎಂಬ ಪದವನ್ನು ಬಳಸಲಾಯಿತು. 1950ರ ನಂತರ ಹಲವು ಸರ್ಕಾರಗಳು ಬದಲಾಗಿದ್ದರೂ, ಯುದ್ಧಗಳು, ಕ್ಷಾಮ ಸೇರಿದಂತೆ ಅನೇಕ ಬಿಕ್ಕಟ್ಟುಗಳನ್ನು ದೇಶ ಎದುರಿಸಿದ್ದರೂ ಸಹ ಆರ್ಥಿಕತೆ ನಿರಂತರವಾಗಿ ಒಂದೇ ಮಟ್ಟದ ಬೆಳವಣಿಗೆಯಲ್ಲೇ ಉಳಿದಿತ್ತು.ಈ ಸ್ಥಿರತೆಯನ್ನು ಕೆಲ ಅರ್ಥಶಾಸ್ತ್ರಜ್ಞರು ಸಾಂಸ್ಕೃತಿಕ ಮತ್ತು ಸಾಮಾಜಿಕ ಲಕ್ಷಣಗಳ ಫಲಿತಾಂಶ ಎಂದು ವ್ಯಾಖ್ಯಾನಿಸಿದರು. ಅದೇ ಆಧಾರದ ಮೇಲೆ ಭಾರತದ ಆರ್ಥಿಕ ಬೆಳವಣಿಗೆಯನ್ನು ಧರ್ಮ ಮತ್ತು ಸಂಸ್ಕೃತಿಯೊಂದಿಗೆ ಜೋಡಿಸಿ ‘ಹಿಂದೂ ಪ್ರಗತಿ ದರ’ ಎಂದು ಕರೆಯಲಾಯಿತು. ಆದರೆ ಅರ್ಥಶಾಸ್ತ್ರಜ್ಞರ ಅಭಿಪ್ರಾಯದಂತೆ, ಈ ಪದವನ್ನು ಬಳಸುವುದು ಭಾರತದ ಆರ್ಥಿಕ ಪ್ರಗತಿಯನ್ನು ಕಡಿಮೆ ಮಟ್ಟದಲ್ಲಿ ತೋರಿಸುವ ಮತ್ತು ಮೂದಲಿಸುವ ಪ್ರಯತ್ನವಾಗಿತ್ತು. ವಾಸ್ತವದಲ್ಲಿ, ಆ ಕಾಲದ ಕಠಿಣ ಆರ್ಥಿಕ ನೀತಿಗಳು, ಸರ್ಕಾರಿ ನಿಯಂತ್ರಣಗಳು ಮತ್ತು ಪರವಾನಗಿ ವ್ಯವಸ್ಥೆಯೇ ನಿಧಾನಗತಿಯ ಬೆಳವಣಿಗೆಗೆ ಪ್ರಮುಖ ಕಾರಣಗಳಾಗಿದ್ದವು.
ಭಾರತದ ಆರ್ಥಿಕ ಬೆಳವಣಿಗೆ ದರವನ್ನು ವಿವರಿಸಲು ‘ಹಿಂದೂ ಪ್ರಗತಿ ದರ’ ಎಂಬ ಪದವನ್ನು ಬಳಸಿದವರು ಅರ್ಥಶಾಸ್ತ್ರಜ್ಞ ರಾಜ್ ಕೃಷ್ಣ. 1950ರಿಂದ 1980ರ ಅವಧಿಯಲ್ಲಿ ಭಾರತದ ಆರ್ಥಿಕತೆ ನಿಧಾನಗತಿಯಲ್ಲಿ ಬೆಳವಣಿಗೆಯಾಗುತ್ತಿದ್ದ ಹಿನ್ನೆಲೆಯಲ್ಲಿ, ಆ ಸ್ಥಿತಿಯನ್ನು ವಿವರಿಸಲು ಈ ಪದ ಬಳಕೆಗೆ ಬಂದಿತು. ರಾಜ್ ಕೃಷ್ಣ ಅವರು ದಿಲ್ಲಿ ವಿಶ್ವವಿದ್ಯಾಲಯ ಹಾಗೂ ಚಿಕಾಗೋ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ಅವರು ಮುಖ್ಯವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಉದ್ಯೋಗ ಸೃಷ್ಟಿ ಮತ್ತು ಬಡತನ ನಿವಾರಣೆ ವಿಷಯಗಳಲ್ಲಿ ಸಂಶೋಧನೆ ನಡೆಸಿದ ಖ್ಯಾತ ಅರ್ಥಶಾಸ್ತ್ರಜ್ಞರಾಗಿದ್ದರು. ಅವರು ದಿಲ್ಲಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರಲ್ಲದೆ, 1977ರಿಂದ 1979ರವರೆಗೆ ಕೇಂದ್ರ ಯೋಜನಾ ಆಯೋಗದ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು. ಆರ್ಥಿಕ ನೀತಿಗಳ ವಿಶ್ಲೇಷಣೆ ಮತ್ತು ವಿಮರ್ಶೆಯಲ್ಲಿ ಅವರ ಅಭಿಪ್ರಾಯಗಳು ದೇಶದ ಅರ್ಥಶಾಸ್ತ್ರ ಚರ್ಚೆಗಳಲ್ಲಿ ಪ್ರಮುಖ ಸ್ಥಾನ ಪಡೆದಿದ್ದವು. ‘ಹಿಂದೂ ಪ್ರಗತಿ ದರ’ ಎಂಬ ಪದವನ್ನು ಅವರು ತಾಂತ್ರಿಕ ಆರ್ಥಿಕ ಪದವಾಗಿ ಬಳಸಿದ್ದರೂ, ನಂತರದ ದಿನಗಳಲ್ಲಿ ಈ ಪದವನ್ನು ಭಾರತದ ಆರ್ಥಿಕ ಪ್ರಗತಿಯನ್ನು ಕಡಿಮೆ ಮಾಡಿ ತೋರಿಸಲು ಹಾಗೂ ಧರ್ಮದೊಂದಿಗೆ ಜೋಡಿಸಿ ವಿವಾದಾತ್ಮಕವಾಗಿ ಬಳಸಲಾಗುತ್ತಿದೆ ಎಂಬ ಟೀಕೆಗಳು ಕೇಳಿಬಂದಿವೆ.
ಭಾರತ ವಸಾಹತುಶಾಹಿ ಆಳ್ವಿಕೆಯಲ್ಲಿ ಇದ್ದ 1900ರಿಂದ 1946ರವರೆಗೆ, ದೇಶದ ಆರ್ಥಿಕ ಬೆಳವಣಿಗೆ ಅತ್ಯಂತ ನಿಧಾನಗತಿಯಲ್ಲಿ ಸಾಗಿತ್ತು. ಆ ಅವಧಿಯಲ್ಲಿ ಭಾರತದ ಒಟ್ಟು ದೇಶೀಯ ಉತ್ಪನ್ನ (GDP) ಬೆಳವಣಿಗೆ ದರ ಸರಾಸರಿ ಶೇ.0.9 ಹಾಗೂ ತಲಾ ಆದಾಯದ ಬೆಳವಣಿಗೆ ಕೇವಲ ಶೇ.0.1ರಷ್ಟೇ ಇತ್ತು ಎಂದು ಅರ್ಥಶಾಸ್ತ್ರಜ್ಞರು ದಾಖಲಿಸಿದ್ದಾರೆ. ಸ್ವಾತಂತ್ರ್ಯಾನಂತರವೂ ಭಾರತದ ಆರ್ಥಿಕ ಪ್ರಗತಿ ತಕ್ಷಣವೇ ವೇಗ ಪಡೆಯಲಿಲ್ಲ. ಆದರೂ ಹಂತ ಹಂತವಾಗಿ ಸುಧಾರಣೆ ಕಂಡುಬಂದಿತು. 1950ರಿಂದ 1964ರವರೆಗಿನ ಜವಾಹರಲಾಲ್ ನೆಹರೂ ಅವರ ಆಡಳಿತ ಅವಧಿಯಲ್ಲಿ, ಭಾರತದ ಆರ್ಥಿಕತೆ ನಿರಂತರ ಬೆಳವಣಿಗೆಯನ್ನು ದಾಖಲಿಸಿತು. ಈ ಅವಧಿಯಲ್ಲಿ ಭಾರತದ GDP ಬೆಳವಣಿಗೆ ದರ ಶೇ.4.1ಕ್ಕೆ ಏರಿಕೆಯಾಗಿದ್ದು, ತಲಾ ಆದಾಯದ ಬೆಳವಣಿಗೆ ದರ ಶೇ.1.9ಕ್ಕೆ ಹೆಚ್ಚಳ ಕಂಡಿದೆ ಎಂದು ತಜ್ಞರು ಉಲ್ಲೇಖಿಸಿದ್ದಾರೆ. ಅದೇ ಕಾಲಘಟ್ಟದಲ್ಲಿ, ಚೀನಾದ GDP ಬೆಳವಣಿಗೆ ದರ ಶೇ.2.9ರಷ್ಟಾಗಿತ್ತು. ಜೊತೆಗೆ, ಜಾಗತಿಕವಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಾದ ಅಮೆರಿಕ, ಬ್ರಿಟನ್ ಮತ್ತು ಜಪಾನ್ಗಳು 1820ರಿಂದ 1992ರವರೆಗಿನ ದೀರ್ಘ ಅವಧಿಯಲ್ಲಿ ಕ್ರಮವಾಗಿ ಶೇ.3.6, ಶೇ.1.9 ಮತ್ತು ಶೇ.2.8ರಷ್ಟು ಸರಾಸರಿ GDP ಬೆಳವಣಿಗೆಯನ್ನು ದಾಖಲಿಸಿದ್ದವು.
ಈ ಅಂಕಿ-ಅಂಶಗಳು, ಸ್ವಾತಂತ್ರ್ಯಾನಂತರದ ಪ್ರಾರಂಭಿಕ ವರ್ಷಗಳಲ್ಲಿ ಭಾರತದ ಆರ್ಥಿಕ ಬೆಳವಣಿಗೆ ನಿಧಾನವಾಗಿದ್ದರೂ, ಅದು ಸಂಪೂರ್ಣ ಸ್ಥಬ್ಧವಾಗಿರಲಿಲ್ಲ ಮತ್ತು ಜಾಗತಿಕ ಹಿನ್ನೆಲೆಯಲ್ಲೇ ಹೋಲಿಕೆಗೆ ಪಾತ್ರವಾಗುವಂತಹ ಪ್ರಗತಿಯನ್ನು ಸಾಧಿಸಿತ್ತು ಎಂಬುದನ್ನು ಸ್ಪಷ್ಟಪಡಿಸುತ್ತವೆ. 1991ರಲ್ಲಿ ಜಾರಿಗೆ ಬಂದ ಆರ್ಥಿಕ ಸುಧಾರಣೆಗಳು ಭಾರತದ ಆರ್ಥಿಕತೆಯ ದಿಕ್ಕನ್ನೇ ಬದಲಿಸಿದ ಮಹತ್ವದ ತಿರುವಾಗಿ ಪರಿಗಣಿಸಲಾಗುತ್ತದೆ. ಈ ಅವಧಿಯಲ್ಲಿ ಪರಿಚಯಿಸಲಾದ ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ (LPG) ನೀತಿಗಳು ಆರ್ಥಿಕ ಚಟುವಟಿಕೆಗಳಿಗೆ ಹೊಸ ವೇಗ ನೀಡಿದವು.ಈ ಸುಧಾರಣೆಗಳ ಪರಿಣಾಮವಾಗಿ ಹೂಡಿಕೆ, ಉದ್ಯಮ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ ವೃದ್ಧಿ ಕಂಡುಬಂದಿತು. ಇದಾದ ಬಳಿಕ ಅನೇಕ ಅರ್ಥಶಾಸ್ತ್ರಜ್ಞರು, ಭಾರತದ ನಿಧಾನಗತಿಯ ಬೆಳವಣಿಗೆಯನ್ನು ಸೂಚಿಸಲು ಬಳಸಲಾಗುತ್ತಿದ್ದ ‘ಹಿಂದೂ ಪ್ರಗತಿ ದರ’ ಎಂಬ ಪದಪ್ರಯೋಗವನ್ನು ಪ್ರಶ್ನಿಸಲು ಮತ್ತು ವಿರೋಧಿಸಲು ಆರಂಭಿಸಿದರು. ಕಾಲಕ್ರಮೇಣ ಈ ಪದದ ಬಳಕೆ ಕಡಿಮೆಯಾಗುತ್ತಾ, ಆರ್ಥಿಕ ಚರ್ಚೆಗಳಿಂದ ಹೊರಗುಳಿಯತೊಡಗಿತು.
ಅಂಕಿ-ಅಂಶಗಳ ಪ್ರಕಾರ, 1956ರಿಂದ 1975ರವರೆಗೆ ಭಾರತದ ಸರಾಸರಿ ವಾರ್ಷಿಕ GDP ಬೆಳವಣಿಗೆ ಶೇ.3.4ರಷ್ಟಿದ್ದು, ಇದು ಹಿಂದೂ ಪ್ರಗತಿ ದರ ಎಂದು ಕರೆಯಲಾಗುತ್ತಿದ್ದ ಮಟ್ಟಕ್ಕೆ ಸಮೀಪವಾಗಿತ್ತು. ಆದರೆ, 1981ರಿಂದ 1991ರವರೆಗೆ, ಅಂದರೆ 1991ರ ಆರ್ಥಿಕ ಸುಧಾರಣೆಗಳು ಜಾರಿಗೆ ಬರಲು ಒಂದು ದಶಕಕ್ಕೂ ಮೊದಲು, ಭಾರತದ ಜಿಡಿಪಿ ಬೆಳವಣಿಗೆ ದರ ಶೇ.5.8ಕ್ಕೆ ಏರಿಕೆಯಾಗಿತ್ತು. ಈ ಕಾರಣದಿಂದಾಗಿ 1980ರ ದಶಕವನ್ನು ಭಾರತದ ಆರ್ಥಿಕತೆಯ ಮಹತ್ವದ ತಿರುವು ಎಂದು ಬಹುತೇಕ ಅರ್ಥಶಾಸ್ತ್ರಜ್ಞರು ಗುರುತಿಸುತ್ತಾರೆ. ತುರ್ತು ಪರಿಸ್ಥಿತಿಯ ನಂತರದ ಅವಧಿಯಲ್ಲಿ ಇಂದಿರಾ ಗಾಂಧಿ ಅವರ ಆಡಳಿತದಲ್ಲಿ ಕೈಗೊಳ್ಳಲಾದ ಕ್ರಮಗಳು ಹಾಗೂ ನಂತರ ರಾಜೀವ್ ಗಾಂಧಿ ಸರ್ಕಾರ ಪರಿಚಯಿಸಿದ ಸುಧಾರಣಾ ನೀತಿಗಳೇ ಈ ವೇಗವಾದ ಬೆಳವಣಿಗೆಗೆ ಕಾರಣವಾಗಿದ್ದವು ಎಂಬ ವಿಶ್ಲೇಷಣೆಯೂ ಕೇಳಿಬರುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ, ಭಾರತದ ಹಿಂದಿನ ಆರ್ಥಿಕ ಮಂದಗತಿಯನ್ನು ಹಿಂದೂ ಧರ್ಮದೊಂದಿಗೆ ಜೋಡಿಸುವ ಪ್ರಯತ್ನಗಳನ್ನು ತೀವ್ರವಾಗಿ ಖಂಡಿಸಿದ್ದಾರೆ. ‘ಹಿಂದೂ ಪ್ರಗತಿ ದರ’ ಎಂಬ ಪದಪ್ರಯೋಗವು ವಾಸ್ತವ ಸ್ಥಿತಿಯನ್ನು ಉದ್ದೇಶಪೂರ್ವಕವಾಗಿ ವಿಕೃತಗೊಳಿಸುವ ಪ್ರಯತ್ನವಾಗಿತ್ತು ಎಂದು ಪ್ರಧಾನಿ ಹೇಳಿದ್ದಾರೆ.
ದಶಕಗಳ ಹಿಂದೆ ಭಾರತದ ಆರ್ಥಿಕತೆ ನಿಧಾನಗತಿಯಲ್ಲಿ ಬೆಳವಣಿಗೆಯಾಗಿದ್ದನ್ನು, ಹಿಂದೂಗಳ ಜೀವನ ವಿಧಾನ ಮತ್ತು ಧರ್ಮದೊಂದಿಗೆ ತಳಕು ಹಾಕುವ ಮೂಲಕ ವಿವರಿಸಲಾಯಿತು. ಇದು ಆರ್ಥಿಕ ವಾಸ್ತವಕ್ಕಿಂತಲೂ, ಹಿಂದೂ ಸಮಾಜ ಮತ್ತು ಅದರ ಸಂಸ್ಕೃತಿಯನ್ನು ದುರ್ಬಲಗೊಳಿಸುವ ಉದ್ದೇಶದಿಂದ ಬಳಸಲಾದ ಪದ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ. ಪ್ರಧಾನಿ ಮೋದಿ ಅವರ ಪ್ರಕಾರ, ಆ ಕಾಲದ ಆರ್ಥಿಕ ಸವಾಲುಗಳು ನೀತಿಗಳು ಮತ್ತು ವ್ಯವಸ್ಥೆಗಳ ಫಲಿತಾಂಶವಾಗಿದ್ದವು. ಆದರೆ ಅವುಗಳನ್ನು ಧರ್ಮದೊಂದಿಗೆ ಜೋಡಿಸುವ ಮೂಲಕ ಭಾರತ ಮತ್ತು ಹಿಂದೂ ಸಂಸ್ಕೃತಿಯ ಮೇಲೆ ತಪ್ಪು ಚಿತ್ರಣ ಮೂಡಿಸಲಾಯಿತು ಎಂದು ಅವರು ಹೇಳಿದ್ದಾರೆ. ಜಾಗತಿಕವಾಗಿ ಅನಿಶ್ಚಿತತೆ ಹೆಚ್ಚುತ್ತಿರುವ ಇಂದಿನ ಪರಿಸ್ಥಿತಿಯಲ್ಲಿಯೂ, ಭಾರತ ವಿಶ್ವದೊಂದಿಗೆ ಸಂಪರ್ಕ ಸಾಧಿಸುವ ಮತ್ತು ಮುನ್ನಡೆಯುತ್ತಿರುವ ದೇಶವಾಗಿ ಹೊರಹೊಮ್ಮುತ್ತಿದೆ ಎಂದು ಪ್ರಧಾನಿ ಮೋದಿ ಉಲ್ಲೇಖಿಸಿದರು. ಈ ಸಾಧನೆಗೆ ದೇಶದೊಳಗಿನ ಆತ್ಮವಿಶ್ವಾಸ, ಆರ್ಥಿಕ ಸ್ಥಿರತೆ ಮತ್ತು ಜನರ ಸಾಮರ್ಥ್ಯವೇ ಪ್ರಮುಖ ಕಾರಣ ಎಂದು ಅವರು ಹೇಳಿದ್ದಾರೆ. ಒಂದು ಕಾಲದಲ್ಲಿ ‘ಹಿಂದೂ ಪ್ರಗತಿ ದರ’ ಯುಗದಲ್ಲಿ ಭಾರತದ ಆರ್ಥಿಕ ಬೆಳವಣಿಗೆ ದರ ಕೇವಲ ಶೇ.3ರಿಂದ ಶೇ.4ರಷ್ಟಿಗೆ ಸೀಮಿತವಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಭಾರತದ ಆರ್ಥಿಕತೆ ಗಮನಾರ್ಹ ವೇಗವನ್ನು ಪಡೆದುಕೊಂಡಿದ್ದು, ಪ್ರಸ್ತುತ ಜಿಡಿಪಿ ಬೆಳವಣಿಗೆ ದರ ಶೇ.6ರಿಂದ ಶೇ.7ರ ನಡುವೆ ಇದೆ.
ಆರ್ಥಿಕ ತಜ್ಞರ ಅಂದಾಜುಗಳ ಪ್ರಕಾರ, 2025–26ರ ಅವಧಿಯಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಶೇ.8ರ ಮಟ್ಟವನ್ನು ಮುಟ್ಟುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ, ಪ್ರಸ್ತುತ ಭಾರತದ ಆರ್ಥಿಕತೆ ಹಿಂದೂ ಪ್ರಗತಿ ದರ ಎಂಬ ಹಳೆಯ ವ್ಯಾಖ್ಯಾನವನ್ನು ಸ್ಪಷ್ಟವಾಗಿ ಮೀರಿಸಿ ಮುನ್ನಡೆಯುತ್ತಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಈ ವೇಗದ ಬೆಳವಣಿಗೆಗೆ ಹಲವು ಅಂಶಗಳು ಕಾರಣವಾಗಿವೆ. ಇತ್ತೀಚಿನ ಅವಧಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಕೈಗೊಂಡಿರುವ ಹಣಕಾಸು ನೀತಿಗಳು, ಹಣದ ಹರಿವನ್ನು ಹೆಚ್ಚಿಸಲು ಸಹಕಾರಿಯಾಗಿವೆ. ಜೊತೆಗೆ ರೆಪೋ ದರ ಕಡಿತ, ವಿದೇಶಿ ವಿನಿಮಯ ಸ್ಥಿರತೆ ಮತ್ತು ಸಾಲ ಸೌಲಭ್ಯಗಳ ಲಭ್ಯತೆ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಿವೆ. ಇದರಿಂದ ಉತ್ಪಾದನೆ, ಸೇವಾ ಕ್ಷೇತ್ರ ಮತ್ತು ಬಳಕೆ ಖರ್ಚುಗಳಲ್ಲಿ ವೃದ್ಧಿ ಕಂಡುಬಂದಿದ್ದು, ಆರ್ಥಿಕತೆಗೆ ಬಲ ನೀಡಿದೆ. ಆದರೆ ಅದೇ ಸಮಯದಲ್ಲಿ, ವಿದೇಶಿ ವ್ಯಾಪಾರದ ಏರುಪೇರು, ರೂಪಾಯಿ ಮೌಲ್ಯದ ಬದಲಾವಣೆಗಳು, ಅಮೆರಿಕ–ಚೀನಾ ನಡುವಿನ ವ್ಯಾಪಾರ ನಿರ್ಬಂಧಗಳು ಭಾರತದ ರಫ್ತು–ಆಮದು ಚಟುವಟಿಕೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಈ ಕಾರಣಗಳಿಂದಾಗಿ, ಮುಂದಿನ ಅವಧಿಯಲ್ಲಿ ಜಿಡಿಪಿ ಬೆಳವಣಿಗೆಗೆ ಸವಾಲುಗಳು ಎದುರಾಗಬಹುದು ಎಂಬ ಅಂಶವನ್ನೂ ಆರ್ಥಿಕ ತಜ್ಞರು ಸಂಪೂರ್ಣವಾಗಿ ತಳ್ಳಿಹಾಕಿಲ್ಲ.
ಇನ್ನು ನಿಧಾನ ಬೆಳವಣಿಗೆಗೆ ಕಾರಣಗಳನ್ನ ನೋಡೋದಾದ್ರೆ
1) ಯಾವ ಯೋಜನೆ ಆರಂಭಕ್ಕೂ ಸರಕಾರದ ಅನುಮತಿ ಬೇಕಿದ್ದ ಲೈಸನ್ಸ್ ರಾಜ್ ವ್ಯವಸ್ಥೆ
2) ಸಾರ್ವಜನಿಕ ಅಭಿವೃದ್ಧಿ ಕಾರ್ಯಗಳನ್ನು ಮಾಡ ಬೇಕಿದ್ದರೂ ಸರಕಾರದ ನಿಯಂತ್ರಣ ಹೆಚ್ಚಿತ್ತು.
3) ದೇಶದಲ್ಲಿ ಖಾಸಗಿ ಸಂಸ್ಥೆಗಳು ಹೂಡಿಕೆ ಮಾಡಲು ಅತ್ಯಂತ ಕಡಿಮೆ ಅವಕಾಶ
4) ಅತ್ಯಂತ ಕಡಿಮೆ ಪ್ರಮಾಣದಲ್ಲಿದ್ದ ವಿದೇಶಿ ಬಂಡವಾಳ ಹೂಡಿಕೆಯ ಅವಕಾಶಗಳು
5) ದೇಶದಲ್ಲಿ ಖಾಸಗಿ ಸಂಸ್ಥೆಗಳು ಹೂಡಿಕೆ ಮಾಡಲು ಅತ್ಯಂತ ಕಡಿಮೆ ಅವಕಾಶ
ನಿಧಾನಗತಿ ಆರ್ಥಿಕತೆ ಪರಿಣಾಮ
1) ದೇಶದಲ್ಲಿನ ಕೈಗಾರಿಕೆಗಳಿಗೆ ಪೂರಕ ವಾತಾ ವರಣ ಇಲ್ಲದ್ದಕ್ಕೆ ಬೆಳವಣಿಗೆಯೂ ಆಮೆಗತಿ
2) ನಿರೀಕ್ಷಿತ ಮಟ್ಟದಲ್ಲಿಲ್ಲದ ಉದ್ಯೋಗಾವಕಾಶ, ನಿಧಾನಗತಿಯ ಉದ್ಯೋಗ ಸೃಷ್ಟಿ
3) ದಶಕಗಳ ಕಾಲ ದೇಶವನ್ನು ಬಿಟ್ಟೂಬಿಡದೆ ಕಾಡಿದ್ದ ಬಡತನ ಪ್ರಮಾಣ
4) ನಿಧಾನಗತಿಯಲ್ಲಿ ಹೆಚ್ಚಳ ಆಗುತ್ತಾ ಬಂದ ದೇಶದ ವ್ಯಕ್ತಿಯ ತಲಾದಾಯ
‘ಹಿಂದೂ ಪ್ರಗತಿ ದರ’ ಎಂಬ ಪದಪ್ರಯೋಗದ ಕುರಿತ ಚರ್ಚೆ 2023ರಲ್ಲಿಯೂ ರಾಷ್ಟ್ರಮಟ್ಟದಲ್ಲಿ ಮರುಕಳಿಸಿತ್ತು. ಆ ವರ್ಷ, ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ರಘುರಾಮ್ ರಾಜನ್, ಅಂದಿನ ಜಿಡಿಪಿ ಅಂಕಿ-ಅಂಶಗಳನ್ನು ಉಲ್ಲೇಖಿಸಿ, ಭಾರತವು ಹಿಂದೂ ಪ್ರಗತಿ ದರದ ಹಂತಕ್ಕೆ ಅಪಾಯಕಾರಿ ರೀತಿಯಲ್ಲಿ ಹತ್ತಿರವಾಗುತ್ತಿದೆ ಎಂದು ಎಚ್ಚರಿಸಿದ್ದರು. ರಘುರಾಮ್ ರಾಜನ್ ಅವರ ಈ ಹೇಳಿಕೆ, ಹಲವು ಅರ್ಥಶಾಸ್ತ್ರಜ್ಞರ ಟೀಕೆಗೆ ಗುರಿಯಾಯಿತು. ಅರ್ಥಶಾಸ್ತ್ರಜ್ಞ ಸೌಮ್ಯ ಕಾಂತಿ ಘೋಷ್, ಇತ್ತೀಚಿನ ಜಿಡಿಪಿ ಅಂಕಿ-ಅಂಶಗಳನ್ನು ಲಭ್ಯವಿರುವ ಉಳಿತಾಯ ಮತ್ತು ಹೂಡಿಕೆಗಳ ದತ್ತಾಂಶದೊಂದಿಗೆ ಹೋಲಿಸಿದರೆ, ಇಂತಹ ಹೇಳಿಕೆಗಳು ಪೂರ್ಣಪಕ್ಷಪಾತ ಹಾಗೂ ಅಕಾಲಿಕವಾಗಿವೆ ಎಂದು ಅಭಿಪ್ರಾಯಪಟ್ಟಿದ್ದರು.ಅದೇ ವರ್ಷ, ಬಿಜೆಪಿ ಸಂಸದ ಸುಧಾಂಶು ತ್ರಿವೇದಿ, ಕಳೆದ ದಶಕದಲ್ಲಿ ಭಾರತದ ಆರ್ಥಿಕ ಸಾಧನೆಗಳ ಬಗ್ಗೆ ಮಾತನಾಡುವ ವೇಳೆ ‘ಹಿಂದುತ್ವ ಪ್ರಗತಿ ದರ’ ಎಂಬ ಪದಪ್ರಯೋಗವನ್ನು ಉಲ್ಲೇಖಿಸಿದರು. ಅಂತಾರಾಷ್ಟ್ರೀಯ ಹಣಕಾಸು ನಿಧಿ ದತ್ತಾಂಶದ ಪ್ರಕಾರ, 2023ರಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಶೇ.6.3ರಷ್ಟಿದ್ದು, ಇದು ಅಮೆರಿಕ, ಇಂಗ್ಲೆಂಡ್, ಯುರೋಪಿಯನ್ ರಾಷ್ಟ್ರಗಳು ಮತ್ತು ಜಪಾನ್‌ಗಿಂತ ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ. ತ್ರಿವೇದಿ ಅವರ ಪ್ರಕಾರ, ಭಾರತದ ಆರ್ಥಿಕ ಬೆಳವಣಿಗೆಯು ಕೇವಲ ನೀತಿಗಳ ಫಲಿತಾಂಶವಷ್ಟೇ ಅಲ್ಲದೆ, ಸಾಂಸ್ಕೃತಿಕ ಆತ್ಮವಿಶ್ವಾಸ ಮತ್ತು ಸಮಾಜದ ಚಿಂತನಾ ಧೋರಣೆಯೊಂದಿಗೂ ಸಂಬಂಧ ಹೊಂದಿದೆ ಎಂಬ ವಾದವನ್ನು ಅವರು ಮುಂದಿಟ್ಟಿದ್ದರು.
ಒಟ್ಟಾರೆ ನೋಡಿದರೆ, ಒಂದು ಕಾಲದಲ್ಲಿ ಭಾರತದ ಆರ್ಥಿಕತೆಯನ್ನು ನಿಧಾನಗತಿಯ ಸಂಕೇತವಾಗಿ ಕಟ್ಟಿಹಾಕಲು ಬಳಸಲಾಗಿದ್ದ ‘ಹಿಂದೂ ಪ್ರಗತಿ ದರ’ ಎಂಬ ಪದ ಇಂದು ಕೇವಲ ಇತಿಹಾಸದ ಅಧ್ಯಾಯವಾಗುತ್ತಿದೆ. ನೀತಿಗಳ ಬದಲಾವಣೆ, ಸುಧಾರಣೆಗಳ ಸರಣಿ, ಉದ್ಯಮಶೀಲತೆ, ಆತ್ಮವಿಶ್ವಾಸ ಮತ್ತು ಜಾಗತಿಕ ಸಂಪರ್ಕ – ಇವೆಲ್ಲದರ ಫಲವಾಗಿ ಭಾರತ ಇಂದು ಶೇ.7ರ ಆಸುಪಾಸಿನ ಜಿಡಿಪಿ ಬೆಳವಣಿಗೆಯೊಂದಿಗೆ ವಿಶ್ವದ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಮುಂದಿನ ವರ್ಷಗಳಲ್ಲಿ ಶೇ.8ರ ಗುರಿ ಕೂಡ ಅಸಾಧ್ಯವಲ್ಲ ಎಂಬ ವಿಶ್ವಾಸವನ್ನು ತಜ್ಞರು ವ್ಯಕ್ತಪಡಿಸುತ್ತಿದ್ದಾರೆ. ಹೌದು, ಸವಾಲುಗಳಿವೆ. ಜಾಗತಿಕ ಅನಿಶ್ಚಿತತೆ, ವ್ಯಾಪಾರ ಸಂಘರ್ಷಗಳು, ರೂಪಾಯಿ ಮೌಲ್ಯದ ಏರುಪೇರು – ಇವೆಲ್ಲ ಭಾರತದ ಆರ್ಥಿಕ ಪಯಣದ ಮೇಲೆ ಪ್ರಭಾವ ಬೀರುವ ಸಾಧ್ಯತೆಯೂ ಇದೆ. ಆದರೆ ಅದೇ ಸಮಯದಲ್ಲಿ, ದೇಶದೊಳಗಿನ ಆರ್ಥಿಕ ಸ್ಥಿರತೆ, ಹಣಕಾಸು ವ್ಯವಸ್ಥೆಯ ಬಲ ಮತ್ತು ಜನರ ಸಾಮರ್ಥ್ಯ ಭಾರತಕ್ಕೆ ದೊಡ್ಡ ಶಕ್ತಿಯಾಗಿದೆ.
ಪ್ರಧಾನಿ ನರೇಂದ್ರ ಮೋದಿ ಹೇಳಿದಂತೆ, ಒಂದು ಕಾಲದಲ್ಲಿ ಧರ್ಮದ ಹೆಸರಿನಲ್ಲಿ ಭಾರತದ ಆರ್ಥಿಕತೆಯನ್ನು ಕಡಿಮೆಮಟ್ಟದಲ್ಲಿ ತೋರಿಸಲು ಪ್ರಯತ್ನಿಸಲಾಗಿತ್ತು. ಆದರೆ ಇಂದು ಭಾರತ ತನ್ನ ಸಾಧನೆಗಳ ಮೂಲಕವೇ ಆ ಟ್ಯಾಗ್‌ಗಳನ್ನು ಮುರಿದು ಹಾಕಿದೆ. ಹಿಂದೂ ಪ್ರಗತಿ ದರ ಎಂಬ ಹಳೆಯ ವ್ಯಾಖ್ಯಾನವನ್ನು ಮೀರಿದ ಭಾರತ, ಇಂದು ಆತ್ಮವಿಶ್ವಾಸದೊಂದಿಗೆ ಮುಂದಿನ ಅಭಿವೃದ್ಧಿಯ ಅಧ್ಯಾಯ ಬರೆಯಲು ಸಜ್ಜಾಗಿದೆ. ಇದು ಕೇವಲ ಸಂಖ್ಯೆಗಳ ಕಥೆಯಲ್ಲ… ಇದು ಭಾರತ ತನ್ನ ಮೇಲೆ ಅಂಟಿಸಿದ್ದ ಗುರುತುಗಳನ್ನು ಕಳಚಿಕೊಂಡ ಕಥೆ. ನಮ್ಮ ಭಾರತ ಆರ್ಥಿಕತೆ ಬಗ್ಗೆ ನೀವೇನಂತೀರಾ? ಕಾಮೆಂಟ್ ಮಾಡಿ ತಿಳಿಸಿ.
ವರದಿ : ಲಾವಣ್ಯ ಅನಿಗೋಳ




