ಅಕ್ಕಿ ಮಾಫಿಯಾಗೆ ಅಧಿಕಾರಿ ಬಲಿ

ಹಾಸನ ಪಡಿತರ ಅಕ್ಕಿ ಅಕ್ರಮ ಸಾಗಣೆ ದಂಧೆ ಅಧಿಕಾರಿಯೊಬ್ಬರನ್ನು ಬಲಿ ಪಡೆದಿರುವ ಅನುಮಾನ ಮೂಡಿದೆ. ಲಾರಿ ಹರಿದು ಸಾವಿಗೀಡಾಗಿದ್ದ ಸಾರಿಗೆ ಇಲಾಖೆ ತಪಾಸಣಾ ಇನ್‌ಸ್ಪೆಕ್ಟರ್ ಶಕುನಿಗೌಡ ಪ್ರಕರಣ ಸ್ಫೋಟಕ ತಿರುವು ಪಡೆದಿದ್ದು, ಇದು ಅಪಘಾತವಲ್ಲ ಕೊಲೆ ಎಂಬುದು ತನಿಖೆಯಲ್ಲಿ ಬಯಲಾಗಿದೆ. ಶನಿವಾರ ಬೆಳಗ್ಗೆ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಪಾಳ್ಯ ಸಮೀಪ, ನಲ್ಲೂರು–ಮಗ್ಗೆ ಮಾರ್ಗದಲ್ಲಿ ರಾಷ್ಟ್ರೀಯ ಹೆದ್ದಾರಿ–75 ದಾಟುತ್ತಿದ್ದ ವೇಳೆ ಶಕುನಿಗೌಡ ಅವರಿಗೆ ಲಾರಿ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದರು.

ಅವರು ಹಾಸನ ವಿಭಾಗೀಯ ತನಿಖಾ ಸಂಚಾರ ನಿಯಂತ್ರಕ ದಳದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಆರಂಭದಲ್ಲಿ ರಸ್ತೆ ದಾಟುವಾಗ ನಿಯಂತ್ರಣ ತಪ್ಪಿ ಲಾರಿ ಡಿಕ್ಕಿ ಹೊಡೆದ ಅಪಘಾತ ಎಂದು ಶಂಕಿಸಲಾಗಿತ್ತು. ಆದರೆ ಅಪಘಾತದ ನಂತರ ಲಾರಿಯನ್ನು ನಿಲ್ಲಿಸದೇ ಚಾಲಕ ಪರಾರಿಯಾಗಿರುವುದು ಪ್ರಕರಣಕ್ಕೆ ಅನುಮಾನ ಮೂಡಿಸಿತ್ತು. ಲಾರಿ ಚಾಲಕ ದೇವರಾಜು ಯಡಿಯೂರು ಗಡಿ ಬಳಿ ಲಾರಿಯನ್ನು ನಿಲ್ಲಿಸಿ, ಕೀ ಹಾಗೂ ವಾಹನದ ದಾಖಲೆಗಳನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದ.

ನಂತರ ಪೊಲೀಸರು ಲಾರಿಯನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ, ಲಾರಿಯಲ್ಲಿ ಅಕ್ಕಿ ಮೂಟೆಗಳು ಪತ್ತೆಯಾಗಿದ್ದವು. ಈ ಕುರಿತು ತಕ್ಷಣವೇ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ಭಾನುವಾರ ಆಹಾರ ಇಲಾಖೆ ಅಧಿಕಾರಿಗಳು ಲಾರಿಯಲ್ಲಿದ್ದ ಅಕ್ಕಿಯನ್ನು ಪರಿಶೀಲಿಸಿದ ವೇಳೆ, ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸಲಾಗುತ್ತಿರುವುದು ಮೇಲ್ನೋಟಕ್ಕೆ ದೃಢಪಟ್ಟಿದೆ.

ಈ ಬೆಳವಣಿಗೆಯ ಬಳಿಕ ತನಿಖೆಯನ್ನು ತೀವ್ರಗೊಳಿಸಿದ ಪೊಲೀಸರಿಗೆ, ಇದು ಅಪಘಾತವಲ್ಲ, ಉದ್ದೇಶಪೂರ್ವಕ ಹತ್ಯೆ ಎಂಬ ಸತ್ಯ ಬೆಳಕಿಗೆ ಬಂದಿದೆ.
ಲಾರಿಯಲ್ಲಿ 83 ಚೀಲ ಬಾಯಿಲ್ಡ್ ಅಕ್ಕಿ ಚೀಲಗಳು ಹಾಗೂ 123 ಪಡಿತರ ಅಕ್ಕಿ ಮೂಟೆಗಳನ್ನು ತುಂಬಿಕೊಂಡು ಮಂಗಳೂರಿನಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದಾಗ ಶಕುನಿಗೌಡ ಲಾರಿ ನಿಲ್ಲಿಸಲು ಕೈತೋರಿದ್ದಾರೆ.

ಅವರು ಸಮವಸ್ತ್ರದಲ್ಲಿ ಇದ್ದುದ್ದರಿಂದ ಸಿಕ್ಕಿ ಹಾಕಿಕೊಳ್ಳುತ್ತೇನೆಂದು ಹೆದರಿದ ಲಾರಿ ಚಾಲಕ ದೇವರಾಜು ಶಕುನಿಗೌಡ ಅವರಿಗೆ ಡಿಕ್ಕಿ ಹೊಡೆದು ಲಾರಿಯನ್ನು ನಿಲ್ಲಿಸದೆ ಪರಾರಿಯಾಗಿರುವುದು ತನಿಖೆ ವೇಳೆ ಬಯಲಾಗಿದೆ. ಈ ಪ್ರಕರಣ ಇದೀಗ ಪಡಿತರ ಅಕ್ಕಿ ಕಳ್ಳಸಾಗಣೆ ಜಾಲ ಮತ್ತು ಅಧಿಕಾರಿಯ ಹತ್ಯೆಯ ನಡುವಿನ ಸಂಬಂಧವನ್ನು ತೆರೆದಿಟ್ಟಿದ್ದು, ಮುಂದಿನ ತನಿಖೆ ಇನ್ನಷ್ಟು ಸ್ಫೋಟಕ ಮಾಹಿತಿಯನ್ನು ಹೊರತರುವ ಸಾಧ್ಯತೆ ಇದೆ.

ವರದಿ : ಲಾವಣ್ಯ ಅನಿಗೋಳ

About The Author