ಲಾಡ್ಜ್ ಪಾರ್ಟಿ ಭಯಾನಕ ಅಂತ್ಯ : ಈ ಅಪಘಾತಕ್ಕೆ ಹೊಣೆ ಯಾರು?

ಸ್ನೇಹಿತರೊಂದಿಗೆ ಲಾಡ್ಜ್‌ನಲ್ಲಿ ಪಾರ್ಟಿ ನಡೆಸುತ್ತಿದ್ದ ವೇಳೆ ಪೊಲೀಸರು ಬಂದಿದ್ದಾರೆ ಎಂಬ ಕಾರಣಕ್ಕೆ ಗಾಬರಿಗೊಂಡ ಯುವತಿಯೊಬ್ಬಳು ಬಾಲ್ಕನಿಯಿಂದ ಕೆಳಗೆ ಇಳಿಯಲು ಯತ್ನಿಸಿ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಎಚ್‌ಎಎಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮಾರತ್ತಹಳ್ಳಿ ನಿವಾಸಿ ವೈಷ್ಣವಿ (21) ಗಾಯಗೊಂಡ ಯುವತಿ. ಅವರನ್ನು ತಕ್ಷಣವೇ ಮಹಾನಂದಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ಕುಂದನಹಳ್ಳಿ ಎಇಸಿಎಸ್ ಲೇಔಟ್ ‘ಸಿ’ ಬ್ಲಾಕ್‌ನ ಬ್ರೂಕ್‌ಫೀಲ್ಡ್‌ನಲ್ಲಿರುವ ‘ಸಿ ಎಸ್ಟಾ’ ಲಾಡ್ಜ್‌ನಲ್ಲಿ ಡಿಸೆಂಬರ್ 14ರ ತಡರಾತ್ರಿ ನಡೆದಿದೆ. ವೈಷ್ಣವಿ ಅವರು ತಮ್ಮ ಏಳು ಮಂದಿ ಸ್ನೇಹಿತರೊಂದಿಗೆ ಲಾಡ್ಜ್‌ಗೆ ಪಾರ್ಟಿ ಮಾಡಲು ತೆರಳಿದ್ದರು. ಈ ವೇಳೆ ಜೋರಾಗಿ ಸಂಗೀತ ಹಾಕಿ ನೃತ್ಯ ಮಾಡುತ್ತಿದ್ದ ಕಾರಣ ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆಯಾಗಿದ್ದು, ಸ್ಥಳೀಯರು ಪೊಲೀಸ್ ಸಹಾಯವಾಣಿ 112ಕ್ಕೆ ದೂರು ನೀಡಿದ್ದಾರೆ.

ದೂರು ಆಧರಿಸಿ ಎಚ್‌ಎಎಲ್ ಠಾಣೆಯ ಪೊಲೀಸರು ಮುಂಜಾನೆ ಸುಮಾರು 5 ಗಂಟೆ ವೇಳೆಗೆ ಬಾಡಿವೋರ್ನ್ ಕ್ಯಾಮೆರಾ ಧರಿಸಿ ಲಾಡ್ಜ್‌ಗೆ ತಪಾಸಣೆಗೆ ಬಂದಿದ್ದಾರೆ. ಪೊಲೀಸರನ್ನು ಕಂಡು ಭಯಗೊಂಡ ವೈಷ್ಣವಿ ಅವರು ಲಾಡ್ಜ್‌ನ ಬಾಲ್ಕನಿಗೆ ತೆರಳಿ, ಪೈಪ್ ಹಿಡಿದುಕೊಂಡು ಕೆಳಗೆ ಇಳಿಯಲು ಯತ್ನಿಸಿದ ವೇಳೆ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಗಾಯಗೊಂಡ ಯುವತಿಯನ್ನು ಸ್ನೇಹಿತರು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ನಂತರ ಮಹಾನಂದಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಈ ಸಂಬಂಧ ವೈಷ್ಣವಿ ಅವರ ತಂದೆ ಆಂಥೋಣಿ ರಾಜ್ ಅವರು ದೂರು ನೀಡಿದ್ದು, ಲಾಡ್ಜ್ ಮಾಲೀಕರು ಸೇರಿದಂತೆ ಇತರರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 125(ಬಿ) ಅಡಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣ ಸಂಬಂಧ ಲಾಡ್ಜ್ ಸಿಬ್ಬಂದಿ, ಯುವತಿಯ ಸ್ನೇಹಿತರು ಹಾಗೂ ಸ್ಥಳಕ್ಕೆ ಆಗಮಿಸಿದ ಪೊಲೀಸರನ್ನು ವಿಚಾರಣೆ ನಡೆಸಿ ನ್ಯಾಯ ನೀಡಬೇಕು ಎಂದು ದೂರಿನಲ್ಲಿ ಕೋರಲಾಗಿದೆ.

ಇನ್ನೂ, ಘಟನೆ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಹಣ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಈ ಆರೋಪದ ಕುರಿತು ಡಿಸಿಪಿ ಪರಶುರಾಮ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

About The Author