ಚಿನ್ನದ ಬೆಲೆ ಇತಿಹಾಸದಲ್ಲೇ ಕಾಣದ ಮಟ್ಟಕ್ಕೆ ಜಿಗಿತ ಕಾಣ್ತಿದೆ. ಹಿಂದಿನ ಎಲ್ಲಾ ದಾಖಲೆಗಳನ್ನು ಪುಡಿಗಟ್ಟಿದಂತೆ, ಇಂದು ಚಿನ್ನದ ದರ 14 ಸಾವಿರ ರೂಪಾಯಿಗೆ ಸನಿಹವಾಗಿದೆ. ಒಂದೇ ದಿನದಲ್ಲಿ 2,400 ರೂಪಾಯಿ ಏರಿಕೆಯಾಗಿ, ಚಿನ್ನಾಭರಣ ಪ್ರಿಯರಿಗೆ ಭಾರೀ ಶಾಕ್ ನೀಡಿದೆ. ಇಂದು 1 ಗ್ರಾಂ ಚಿನ್ನದ ಬೆಲೆ 13,855 ರೂಪಾಯಿಗೆ ಏರಿಕೆಯಾಗಿದ್ದು, ಇದೇ ಈ ತಿಂಗಳಷ್ಟೇ ಅಲ್ಲ, ಈ ವರ್ಷದ ಗರಿಷ್ಠ ದರವಾಗಿದೆ.
ಡಿಸೆಂಬರ್ 23 ಮಂಗಳವಾರದಂದು ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂ ಒಂದಕ್ಕೆ 13,855 ರೂಪಾಯಿ ಇದ್ದು, ಇಂದು 240 ರೂಪಾಯಿ ಹೆಚ್ಚಳ ಆಗಿದೆ. ಪ್ರತಿ 10 ಗ್ರಾಂ ಚಿನ್ನದ ಬೆಲೆ 1.50 ಲಕ್ಷ ರು.ನತ್ತ ದಾಪುಗಾಲು ಹಾಕಿದ್ದು, 10 ಗ್ರಾಂ ಶುದ್ಧ ಚಿನ್ನಕ್ಕೆ 1,38,550 ರೂಪಾಯಿ ಇದೆ. 24 ಕ್ಯಾರೆಟ್ 10 ಗ್ರಾಂ ಬೆಲೆಯಲ್ಲಿ ಇಂದು 2400 ರೂ ಹೆಚ್ಚಳ ಆಗಿದೆ. 22 ಕ್ಯಾರೆಟ್ 1 ಗ್ರಾಂ ಬೆಲೆ 12700 ರೂಪಾಯಿ ಇದ್ದು, ಇಂದು 220 ರೂ ಏರಿಕೆ ಆಗಿದೆ. 10 ಗ್ರಾಂ ಬೆಲೆ 1,27,000 ರೂಪಾಯಿ ಇದೆ. ಇಂದು 10 ಗ್ರಾಂ ನಲ್ಲಿ 2200 ರೂ ಹೆಚ್ಚಳ ಆಗಿದೆ.
ಇನ್ನು ರಾಜಧಾನಿ ಬೆಂಗಳೂರಲ್ಲಿ 1 ಗ್ರಾಂ ನ 24 ಕ್ಯಾರೆಟ್ ಚಿನ್ನದ ಬೆಲೆ 13,855 ರೂಪಾಯಿ ಇದ್ದು, 10 ಗ್ರಾಂ ಶುದ್ಧ ಚಿನ್ನಕ್ಕೆ 1,38,550 ರೂಪಾಯಿ ಇದೆ. ಈ ಬೆಲೆಯಲ್ಲಿ GST ಸೇರಿಲ್ಲ, ಹೀಗಾಗಿ ಮಳಿಗೆಗಳಲ್ಲಿ ವ್ಯತ್ಯಾಸ ಇರಲಿದೆ. ಚಿನ್ನದ ಬೆಲೆ ನಿನ್ನೆಯೂ 1970 ರೂ ಹೆಚ್ಚಳ ಆಗಿತ್ತು. ಆದರೆ ಇಂದು ಬರೋಬ್ಬರಿ 2400 ಏರಿಕೆ ಆಗಿದೆ. ಇನ್ನು ಬೆಳ್ಳಿ ಬೆಲೆ ಇಂದು ಭಾರಿ ಏರಿಕೆ ಆಗಿದ್ದು, 4 ರೂ ಹೆಚ್ಚಳ ಆಗಿ ಬೆಲೆ 223 ರೂ ಆಗಿದ್ದು, ಕೆಜಿಗೆ 2,23,000 ರೂ ಇದೆ.
ಈ ತಿಂಗಳ, ಹಾಗೂ ಚಿನ್ನದ ಸಾರ್ವಕಾಲಿಕ ಗರಿಷ್ಠ ದರ ಕೂಡಾ ಇದೇ ಆಗಿದ್ದು, 13,855 ರೂಪಾಯಿ ದಾಖಲಾಗಿದೆ. ಕನಿಷ್ಠ ದರವು ಡಿಸೆಂಬರ್ 9 ರಂದು 12,944 ರೂ ಇತ್ತು ಸದ್ಯ ಬೆಲೆ ಏರಿಕೆಯ ಟ್ರೆಂಡ್ನಲ್ಲಿದ್ದು 4.36 % ನಷ್ಟು ಹೆಚ್ಚಳ ಆಗಿದೆ.
ಕಳೆದ ಜನವರಿ 1ರ ಬಳಿಕ ಪ್ರತಿ 10 ಗ್ರಾಂ ಚಿನ್ನ ಬೆಲೆಯಲ್ಲಿ ಅಂದಾಜು 54000 ರು. ಅಂದರೆ ಶೇ.65ರಷ್ಟು ಮತ್ತು ಬೆಳ್ಳಿ ಬೆಲೆಯಲ್ಲಿ 1.26 ಲಕ್ಷ ರು. ಅಂದರೆ ಶೇ.126ರಷ್ಟು ಹೆಚ್ಚಳವಾಗಿದೆ. ಚಿನ್ನ–ಬೆಳ್ಳಿ ಬೆಲೆಗಳು ನಿರಂತರವಾಗಿ ಏರಿಕೆಯ ಹಾದಿಯಲ್ಲಿದ್ದು, ಹೂಡಿಕೆದಾರರು ಹಾಗೂ ಗ್ರಾಹಕರಲ್ಲಿ ತೀವ್ರ ಚರ್ಚೆಗೆ ಕಾರಣವಾಗಿವೆ.
ವರದಿ : ಲಾವಣ್ಯ ಅನಿಗೋಳ




