ಅಭಿಮಾನಿಗಳ ಅತಿರೇಕಕ್ಕೆ ನಟಿ ”ಸಮಂತಾ” ಗಲಿಬಿಲಿ!

ಸಾರ್ವಜನಿಕ ಹಾಗೂ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ನಟಿಯರಿಗೆ ಅಭಿಮಾನಿಗಳಿಂದ ತೊಂದರೆಯಾಗುತ್ತಿರುವ ಘಟನೆಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ಇತ್ತೀಚೆಗೆ ‘ದಿ ರಾಜಾಸಾಬ್’ ಚಿತ್ರದ ‘ಸಹನಾ ಸಹನಾ’ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ನಟಿ ನಿಧಿ ಅಗರ್ವಾಲ್ ಮುಜುಗರ ಅನುಭವಿಸಿದ್ದ ಪ್ರಕರಣ ಇನ್ನೂ ಮಾಸುವ ಮುನ್ನವೇ, ಮತ್ತೊಂದು ಇಂತಹ ಘಟನೆ ನಡೆದಿದೆ.

ಬಹುಭಾಷಾ ತಾರೆ ಸಮಂತಾ ರುಥ್ ಪ್ರಭು ಇತ್ತೀಚೆಗೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮ ಮುಗಿದ ಬಳಿಕ ಅವರು ಕಾರಿನತ್ತ ತೆರಳುತ್ತಿದ್ದಾಗ, ಫೋಟೋ ಮತ್ತು ವಿಡಿಯೋ ಪಡೆಯಲು ಅಭಿಮಾನಿಗಳು ನಟಿಯನ್ನು ಸುತ್ತುವರೆದರು. ಈ ವೇಳೆ ಅಚಾನಕ್ ನೂಕುನುಗ್ಗಲು ಉಂಟಾಗಿ, ಕೆಲ ಕಿಡಿಗೇಡಿಗಳು ಅಸಭ್ಯವಾಗಿ ವರ್ತಿಸಿದ ಆರೋಪಗಳು ಕೇಳಿಬಂದಿವೆ. ಈ ಗೊಂದಲದಿಂದ ಸಮಂತಾ ಗಲಿಬಿಲಿಗೊಂಡಿರುವುದು ಕಂಡುಬಂದಿದೆ.

ಪರಿಸ್ಥಿತಿ ಕೈಮೀರುವುದನ್ನು ಗಮನಿಸಿದ ಭದ್ರತಾ ಸಿಬ್ಬಂದಿ, ಹರಸಾಹಸ ಪಟ್ಟು ನಟಿಯನ್ನು ಕಾರಿನೊಳಗೆ ಹತ್ತಿಸಿ ಅಲ್ಲಿಂದ ಸುರಕ್ಷಿತವಾಗಿ ಕಳುಹಿಸಿದರು. ಈ ಘಟನೆಯ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಕಾರ್ಯಕ್ರಮದ ಆಯೋಜಕರ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿವೆ. ಸಮಂತಾ ಅವರಂತಹ ಪ್ರಮುಖ ನಟಿಯನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿರುವ ಸಂದರ್ಭದಲ್ಲಿ, ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಬೇಕಿತ್ತು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ಪದೇ ಪದೇ ಇಂತಹ ಘಟನೆಗಳು ಮರುಕಳಿಸುತ್ತಿರುವುದು ದುಃಖಕರವಾಗಿದ್ದು, ನಟಿಯರ ಸುರಕ್ಷತೆ ಬಗ್ಗೆ ಗಂಭೀರ ಚಿಂತನೆ ಅಗತ್ಯವೆಂದು ಹಲವರು ಒತ್ತಾಯಿಸಿದ್ದಾರೆ. ಇನ್ನು, ನಿರ್ದೇಶಕ ರಾಜ್ ನಿಡಿಮಾರು ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ, ಸಮಂತಾ ಸಾರ್ವಜನಿಕವಾಗಿ ಕಾಣಿಸಿಕೊಂಡ ಮೊದಲ ಖಾಸಗಿ ಕಾರ್ಯಕ್ರಮ ಇದಾಗಿತ್ತು ಎಂಬುದು ವಿಶೇಷವಾಗಿದೆ.

ವರದಿ : ಲಾವಣ್ಯ ಅನಿಗೋಳ

About The Author